
ಉಡುಪಿ: ‘ಸಮರ್ಪಕವಾಗಿ ಶುದ್ಧೀಕರಿಸದ ನೀರನ್ನು ಸಮುದ್ರಕ್ಕೆ ಬಿಡುವ ಮೂಲಕ ಜನರಿಗೆ ಪರೋಕ್ಷವಾಗಿ ವಿಷ ಉಣಿಸುತ್ತೀರಾ’ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಲ್ಪೆಯಲ್ಲಿ ಕೊಳಚೆ ನೀರು ಸಮುದ್ರಕ್ಕೆ ಸೇರುವ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಸಮರ್ಪಕವಾಗಿ ಶುದ್ಧೀಕರಿಸದ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಜಲಚರಗಳು ಸಾಯುತ್ತಿವೆ. ಮೀನುಗಳನ್ನು ಸೇವಿಸುವ ಮನುಷ್ಯರ ಮೇಲೂ ಅದು ಪರಿಣಾಮ ಬೀರುತ್ತದೆ’ ಎಂದು ಹೇಳಿದರು.
ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಗಮನಿಸಿದ ಉಪ ಲೋಕಾಯುಕ್ತರು, ‘ಕೊಳಚೆ ನೀರು ಶುದ್ಧೀಕರಣ ಘಟಕದ (ಎಸ್‌ಟಿಪಿ) ನಿರ್ವಹಣೆಗೆ ಪ್ರತಿ ತಿಂಗಳು ಸುಮಾರು ₹3 ಲಕ್ಷ ವೆಚ್ಚ ಮಾಡುತ್ತಿದ್ದರೂ ಘಟಕದಿಂದ ದುರ್ವಾಸನೆ ಹರಡುತ್ತಿದೆ’ ಎಂದರು. ಈ ಕುರಿತು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ಸೂಚನೆ ನೀಡಿದರು.
‘ಘಟಕವು ಆರು ಹಂತಗಳಲ್ಲಿ ಶುದ್ಧೀಕರಣಗೊಂಡಿದೆ ಎಂದು ಹೇಳಲಾಗುತ್ತಿದ್ದರೂ ಘಟಕದಿಂದ ಕಪ್ಪುಬಣ್ಣದ ನೀರು ಹೊರಬರುತ್ತಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿ ಕೀರ್ತಿ ಕುಮಾರ್ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘18 ಜಿಲ್ಲೆಗಳ ಎಸ್.ಟಿ.ಪಿ.ಗಳನ್ನು ಪರಿಶೀಲಿಸಿದ್ದರೂ ಉಡುಪಿಯಷ್ಟು ಕಳಪೆ ಸ್ಥಿತಿ ಎಲ್ಲಿಯೂ ಕಂಡುಬಂದಿಲ್ಲ. ಅನುದಾನ ಮಂಜೂರಾದರೂ ಎಸ್‌ಟಿಪಿಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಇನ್ನೂ ಆರಂಭವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಲ್ಪೆ ಭಾಗದಲ್ಲಿ ಇಂದ್ರಾಣಿ ನದಿಯ ಮಾಲಿನ್ಯದಿಂದ ಸಮಸ್ಯೆ ಅನುಭವಿಸುತ್ತಿರುವ ಜನರ ಅಹವಾಲುಗಳನ್ನು ಆಲಿಸಿದರು.
‘ಹಲವಾರು ವರ್ಷಗಳಿಂದ ನಾವು ಬಾವಿ ನೀರನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಹಿಂದೆ ಸ್ನಾನಕ್ಕೆ ಬಳಸುತ್ತಿದ್ದೆವು. ಈಗ ನೀರು ರಾಸಾಯನಿಕಗಳಿಂದ ತುಂಬಿರುವುದರಿಂದ ಮೀನುಗಳೂ ಬದುಕುತ್ತಿಲ್ಲ, ದುರ್ವಾಸನೆಯಿಂದ ಅನೇಕರು ಆಸ್ತಮಾ ಮತ್ತು ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದಾರೆ, ನಗರಸಭೆಯು ಕುಡಿಯುವ ನೀರನ್ನು ಪೈಪ್‌ಲೈನ್ ಮೂಲಕ ಪೂರೈಸುತ್ತಿರುವುದರಿಂದ ನಾವು ಬದುಕುತ್ತಿದ್ದೇವೆ. ಸಂಜೆ ವೇಳೆ ದುರ್ವಾಸನೆ ತಾಳಲಾರದ ಕಾರಣ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತೇವೆ’ ಎಂದು ಸ್ಥಳೀಯ ನಿವಾಸಿ ಇಂದಿರಾ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಉಪ ಲೋಕಾಯುಕ್ತರು ಇಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.
ಬನ್ನಂಜೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು ಅಲ್ಲಿನ ಹೋಟೆಲ್‌ನ ಅಡುಗೆ ಕೋಣೆಗೆ ತೆರಳಿ ಪರಿಶೀಲಿಸಿದರು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ತಿಂಡಿ– ತಿನಿಸುಗಳ ದರಪಟ್ಟಿ ಪ್ರದರ್ಶಿಸಬೇಕು ಎಂದು ಹೋಟೆಲ್ ಮಾಲೀಕರಿಗೆ ಸೂಚಿಸಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಕಾರ್ಮಿಕರು ತಮಗೆ ಇಎಸ್‌ಐ ಸೌಲಭ್ಯ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅವರಿಗೆ ಶೀಘ್ರ ಇಎಸ್‌ಐ ಕಾರ್ಡ್ ನೀಡುವಂತೆ ಉಪ ಲೋಕಾಯುಕ್ತರು ಸೂಚಿಸಿದರು. ಬಳಿಕ ನಗರಸಭೆ ಕಚೇರಿಗೂ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.
ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ತರಾಟೆ: ಕಚೇರಿಗೆ ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದ ಸಿಬ್ಬಂದಿಯನ್ನು ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಸರ್ಕಾರ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದರೂ ಅದನ್ನು ಯಾಕೆ ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತ ಯೋಧನ ಅಳಲು: ಉಪ ಲೋಕಾಯುಕ್ತರು ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಿವೃತ್ತ ಯೋಧ ತೆಂಕಪೇಟೆಯ ರಾಘವೇಂದ್ರ ರಾವ್ ವಿಟ್ಟಲ್ ಅವರು, ತಮ್ಮ ಜಮೀನು ಅಳತೆ ಅರ್ಜಿಯನ್ನು ಮಾನ್ಯ ಮಾಡದೆ ಏಳು ವರ್ಷಗಳಿಂದ ದಾಖಲೆಗಳು ಇಲ್ಲವೆಂದು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ದೂರಿದ್ದರು.
ಒಂದು ವಾರದೊಳಗಾಗಿ ದಾಖಲೆ ಪಡೆದು ಅಳತೆ ಮಾಡಿಸಿ ಕೊಡಬೇಕೆಂದು ಉಪ ಲೋಕಾಯುಕ್ತರು ಸೂಚಿಸಿದ್ದರು. ಈ ಕಾರಣಕ್ಕೆ ಸಂಜೆಯೊಳಗೆ ದಾಖಲೆಯನ್ನು ತಾಲ್ಲೂಕು ಕಚೇರಿಯಿಂದ ನೀಡಲಾಯಿತು.
ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕ ಅರವಿಂದ್ ಎನ್.ವಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ. ದಿನೇಶ್ ಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್, ಸಹಾಯಕ ಆಯುಕ್ತೆ ರಶ್ಮಿ, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
‘ವಿದ್ಯಾವಂತ ಮೋಸಗಾರರಿದ್ದಾರೆ’
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ವೇಳೆ ‘ಇಲ್ಲಿನವರು ಬುದ್ಧಿವಂತರು ವಿದ್ಯಾವಂತರು. ಆದರೆ ಸರ್ಕಾರಿ ಕಚೇರಿಗಳ ಅವ್ಯವಸ್ಥೆ ಗಮನಿಸಿದರೆ ವಿದ್ಯಾವಂತ ಮೋಸಗಾರರಿಂದ ದೇಶ ಹಾಳಾಗುತ್ತಿದೆ ಎಂಬುದಕ್ಕೆ ಇಲ್ಲಿ ಉದಾಹರಣೆ ಸಿಕ್ಕಿದೆ’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಇಲ್ಲಿನ ವಿದ್ಯಾವಂತ ಮೋಸಗಾರರು ನಮ್ಮನ್ನೇ ಯಾಮಾರಿಸುತ್ತಾರೆ. ಸುಳ್ಳು ಸುಳ್ಳು ಮಾಹಿತಿ ನೀಡುತ್ತಾರೆ’ ಎಂದರು.
ಜಿಲ್ಲಾಸ್ಪತ್ರೆಗೆ ಭೇಟಿ
ಉಪ ಲೋಕಾಯುಕ್ತರು ಜಿಲ್ಲಾಸ್ಪತ್ರೆಯ ಔಷಧಿ ವಿತರಣಾ ಕೇಂದ್ರ ನೋಂದಣಿ ಕೇಂದ್ರ ಮಹಿಳಾ ವಾರ್ಡ್ ಪ್ರಯೋಗಾಲಯ ರಕ್ತನಿಧಿ ಕೇಂದ್ರ ಆಸ್ಪತ್ರೆಯ ಆಡಳಿತ ವಿಭಾಗಕ್ಕೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು. ರಕ್ತನಿಧಿ ಕೇಂದ್ರದ ರಿಜಿಸ್ಟರ್ ಡೇಕೇರ್ ಸೆಂಟರ್ ಪರಿಶೀಲಿಸಿದ ಅವರು ಅಲ್ಲಿ ಜನನ ಹಾಗೂ ಮರಣ ಪ್ರಮಾಣಪತ್ರಗಳು ಕಂಡುಬಂದ ಕಾರಣ ಅವುಗಳನ್ನು ಸಂಬಂಧಪಟ್ಟವರಿಗೆ ಪೋಸ್ಟ್ ಮೂಲಕ ರವಾನೆ ಮಾಡಬೇಕೆಂದು ಸೂಚನೆ ನೀಡಿದರು. ಆಸ್ಪತ್ರೆಯ ಕ್ಯಾಂಟೀನ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವ ಕಾರಣ ಬಂದ್ ಮಾಡುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.