
ಉಡುಪಿ: ಭಗವದ್ಗೀತೆಯು ಎಲ್ಲರ ಹೃದಯದಲ್ಲಿ ಅವ್ಯಕ್ತವಾಗಿದೆ. ಅದನ್ನು ವ್ಯಕ್ತಗೊಳಿಸುವುದು ನಮ್ಮ ಕರ್ತವ್ಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುವರ್ಣ ಗೀತಾ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿ ಸುಪ್ತವಾದ ಭಗವದ್ಗೀತೆಯ ಅಸ್ತಿತ್ವವನ್ನು ಗುರುತಿಸಿ ಜಾಗೃತಗೊಳಿಸಿದರೆ, ಗೀತಾ ಪ್ರಚಾರ ಸಾಧ್ಯ. ಅದಕ್ಕಾಗಿ ಎಲ್ಲರೂ ಕಟಿಬದ್ಧರಾಗಬೇಕು ಎಂದೂ ಅವರು ಅಭಿಪ್ರಾಯಪಟ್ಟರು.
ಕೋಟಿ ಗೀತಾ ಲೇಖನ ಯಜ್ಞವನ್ನು ಘೋಷಿಸುವಾಗ ನಮಗೆ ಹಿಂಜರಿಕೆ ಇತ್ತು. ಆದರೆ ಅನಂತರ ಜನರಿಂದ ವ್ಯಕ್ತವಾದ ಪ್ರತಿಕ್ರಿಯೆ ಅದ್ಭುತವಾಗಿತ್ತು. ಅದನ್ನು ಇನ್ನೂ ಎರಡು ವರ್ಷಕ್ಕೆ ವಿಸ್ತರಿಸಿದ್ದೇವೆ ಎಂದು ಹೇಳಿದರು.
ಸಮಗ್ರ ಭಗವದ್ಗೀತೆಯ ಶಾಶ್ವತ ಪ್ರಚಾರಕ್ಕಾಗಿ ಗೀತಾ ಮಂದಿರವನ್ನು ನಿರ್ಮಿಸಿದ್ದೇವೆ. ಕೃಷ್ಣನ ಸಂದೇಶದ ಜ್ಞಾನ ಭಕ್ತರಿಗೆ ದೊರಕಬೇಕೆಂಬುದು ಅದರ ಉದ್ದೇಶವಾಗಿದೆ. ಉಡುಪಿಯು ಅನ್ನಬ್ರಹ್ಮನ ಜೊತೆ ಜ್ಞಾನ ಬ್ರಹ್ಮನ ಕ್ಷೇತ್ರವೂ ಹೌದು ಎಂದರು.
ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಶ್ರೀಪಾದರು ಮಾತನಾಡಿ, ಸಕಲ ವೇದಗಳ ಸಾರ, ಸರ್ವಸ್ವವನ್ನು ಶ್ರೀಕೃಷ್ಣನು ಕೇವಲ 700 ಶ್ಲೋಕಗಳಲ್ಲಿ ಕೊಟ್ಟಿದ್ದಾನೆ. ಅಂತಹ ಭಗವದ್ಗೀತೆಯನ್ನು ಅರ್ಜುನನಿಗೆ ರಣರಂಗದಲ್ಲಿ ಉಪದೇಶ ಮಾಡಿದ್ದಾನೆ ಎಂದು ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿಯೂ ಜೀವನ ಸಂಗ್ರಾಮದಲ್ಲಿ ತೊಡಗಿದ್ದಾನೆ. ಇಡೀ ಪರಿವಾರವೇ ಒಂದಲ್ಲ ಒಂದು ರೀತಿಯಲ್ಲಿ ಯುದ್ಧಕ್ಷೇತ್ರವಾಗಿದೆ. ಇಂದು ಇಡೀ ಜಗತ್ತು ಯುದ್ಧ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಭಯವನ್ನು ಹೋಗಲಾಡಿಸಲು ಭಗವದ್ಗೀತೆಯಿಂದ ಮಾತ್ರ ಸಾಧ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.