ADVERTISEMENT

ಉಡುಪಿ ನಗರಸಭೆ: ಸುಮಿತ್ರಾ ನಾಯಕ್ ಅಧ್ಯಕ್ಷೆ, ಲಕ್ಷ್ಮಿ ಉಪಾಧ್ಯಕ್ಷೆ

ಉಡುಪಿ ನಗರಸಭೆಗೆ ಅವಿರೋಧ ಆಯ್ಕೆ: ಅರಳಿದ ಕಮಲ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 14:05 IST
Last Updated 29 ಅಕ್ಟೋಬರ್ 2020, 14:05 IST
ಉಡುಪಿ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಸುಮಿತ್ರಾ ನಾಯಕ್‌ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಲಕ್ಷ್ಮಿ ಮಂಜುನಾಥ್ ಅವರಿಗೆ ಶಾಸಕ ರಘುಪತಿ ಭಟ್‌ ಹೂಗುಚ್ಛ ನೀಡಿ ಶುಭ ಕೋರಿದರು.
ಉಡುಪಿ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಸುಮಿತ್ರಾ ನಾಯಕ್‌ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಲಕ್ಷ್ಮಿ ಮಂಜುನಾಥ್ ಅವರಿಗೆ ಶಾಸಕ ರಘುಪತಿ ಭಟ್‌ ಹೂಗುಚ್ಛ ನೀಡಿ ಶುಭ ಕೋರಿದರು.   

ಉಡುಪಿ: ನಗರಸಭೆಯ ನೂತನ ಅಧ್ಯಕ್ಷರಾಗಿ ಪರ್ಕಳ ವಾರ್ಡ್‌ನ ಸದಸ್ಯೆ ಸುಮಿತ್ರಾ ಆರ್‌.ನಾಯಕ್‌ ಹಾಗೂ ಉಪಾಧ್ಯಕ್ಷರಾಗಿ ಕೊಳ ವಾರ್ಡ್‌ನ ಸದಸ್ಯೆ ಲಕ್ಷ್ಮಿ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.

ಗುರುವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರಾ ಆರ್.ನಾಯಕ್‌ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಲಕ್ಷ್ಮಿ ಮಂಜುನಾಥ್‌ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನಗರಸಭೆಯಲ್ಲಿ ಕಮಲ ಅರಳುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶಾಸಕ ರಘುಪತಿ ಭಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಉಡುಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಶುಭ ಕೋರಿದರು. ಎಲ್ಲ ಚುನಾಯಿತ ಸದಸ್ಯರು ಹಾಜರಿದ್ದರು. ಬಳಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.

ADVERTISEMENT

ಬುಧವಾರವೇ ಆಯ್ಕೆ:

ನಗರಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾರಾಗಬೇಕು ಎಂದು ಬುಧವಾರವೇ ನಿರ್ಧಾರವಾಗಿತ್ತು. ಶಾಸಕರು, ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಹಿರಿಯ ಸದಸ್ಯೆಯಾದ ಸಮಿತ್ರಾ ನಾಯಕ್ ಹಾಗೂ ಲಕ್ಷ್ಮಿ ಮೆಂಡನ್ ಹೆಸರನ್ನು ಕ್ರಮವಾಗಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಸೂಚಿಸಲಾಗಿತ್ತು. ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿತ್ತು.

2 ವರ್ಷಗಳ ಬಳಿಕ ಅಧಿಕಾರ:

2018ರ ಆಗಸ್ಟ್‌ 31ರಂದು ಉಡುಪಿ ನಗರಸಭೆಗೆ ಚುನಾವಣೆ ನಡೆದು, ಸೆ.3ರಂದು ಫಲಿತಾಂಶ ಹೊರಬಿದ್ದಿತ್ತು. ಬಿಜೆಪಿ 31 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ ನಾಲ್ಕು ವಾರ್ಡ್‌ಗಳಲ್ಲಿ ಮಾತ್ರ ಗೆದ್ದಿತ್ತು. ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂಬಂಧ ಮೀಸಲಾತಿ ನಿಗದಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಚುನಾವಣೆ ನಡೆದಿರಲಿಲ್ಲ. ಹಿಂದೆ ಮೀಸಲಾತಿ ನಿಗದಿಯಾದರೂ ಅದಕ್ಕೆ ತಡೆ ತರಲಾಗಿತ್ತು. ಅಂತಿಮವಾಗಿ ಚುನಾವಣೆ ನಡೆದು 2 ವರ್ಷ 2 ತಿಂಗಳ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದೆ.

ಅಭಿವೃದ್ಧಿಗೆ ಸಿಗಲಿದೆಯೇ ವೇಗ:

2 ವರ್ಷಕ್ಕೂ ಹೆಚ್ಚುಕಾಲ ನಗರಸಭೆಯ ಅಧಿಕಾರ ಆಡಳಿತಾಧಿಕಾರಿಯ ಕೈಲಿತ್ತು. ಸಾರ್ವಜನಿಕರಿಂದ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಬೀದಿ ದೀಪಗಳ ನಿರ್ವಹಣೆ ಸಮಸ್ಯೆ, ಗುಂಡಿಬಿದ್ದ ರಸ್ತೆಗಳು, ಚರಂಡಿ ಅವ್ಯವಸ್ಥೆಯಿಂದ ನಾಗರಿಕರು ಸಮಸ್ಯೆ ಎದುರಿಸುವಂತಾಗಿತ್ತು. ಗೆದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗದೆ ಜನಪ್ರತಿನಿಧಿಗಳು ಅಸಹಾಯಕರಾಗಿದ್ದರು. ಇದೀಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿರುವುದರಿಂದ ಇನ್ನಾದರೂ, ನಗರದ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆಯೇ, ಅಭಿವೃದ್ಧಿಗೆ ವೇಗ ದೊರೆಯಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.