ADVERTISEMENT

ಪ್ರತಿವರ್ಷ ಕಾರ್ಕಳದಲ್ಲಿ ಚಿಣ್ಣರಮೇಳ ಆಯೋಜನೆ: ಸುನಿಲ್‌ ಕುಮಾರ್‌

ಬೇಸಗೆ ಶಿಬಿರ- ಚಿಣ್ಣರ ಮೇಳದ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 16 ಮೇ 2022, 3:04 IST
Last Updated 16 ಮೇ 2022, 3:04 IST
ಕಾರ್ಕಳ ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಯಕ್ಷರಂಗಾಯಣ ಕೇಂದ್ರದ ವತಿಯಿಂದ ಭಾನುವಾರ ನಡೆದ ಬೇಸಿಗೆ ಶಿಬಿರ- ಚಿಣ್ಣರ ಮೇಳದ ಸಮಾರೋಪ ಸಮಾರಂಭದಲ್ಲಿ ಯಕ್ಷರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ಅವರನ್ನು ಅಭಿನಂದಿಸಲಾಯಿತು. ಸಚಿವ ಸುನಿಲ್ ಕುಮಾರ್, ಪೂರ್ಣಿಮಾ, ವಸಂತ ಎಂ, ಸುಧಾಕರ್ ಶೆಟ್ಟಿ, ಎಸ್. ನಿತ್ಯಾನಂದ ಪೈ ಇದ್ದರು.
ಕಾರ್ಕಳ ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಯಕ್ಷರಂಗಾಯಣ ಕೇಂದ್ರದ ವತಿಯಿಂದ ಭಾನುವಾರ ನಡೆದ ಬೇಸಿಗೆ ಶಿಬಿರ- ಚಿಣ್ಣರ ಮೇಳದ ಸಮಾರೋಪ ಸಮಾರಂಭದಲ್ಲಿ ಯಕ್ಷರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ಅವರನ್ನು ಅಭಿನಂದಿಸಲಾಯಿತು. ಸಚಿವ ಸುನಿಲ್ ಕುಮಾರ್, ಪೂರ್ಣಿಮಾ, ವಸಂತ ಎಂ, ಸುಧಾಕರ್ ಶೆಟ್ಟಿ, ಎಸ್. ನಿತ್ಯಾನಂದ ಪೈ ಇದ್ದರು.   

ಕಾರ್ಕಳ: ಚಿಣ್ಣರ ಮೇಳದ ಮೂಲಕ ಮಕ್ಕಳ ಪ್ರತಿಭೆಗೆ ಉತ್ತಮ ಅವಕಾಶ, ತುಂಟಾಟಕ್ಕೆ ವೇದಿಕೆ ದೊರೆಯಲಿದ್ದು ಪ್ರತಿ ವರ್ಷ ಕಾರ್ಕಳದಲ್ಲಿ ಚಿಣ್ಣರ ಮೇಳವನ್ನು ನಡೆಸಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಇಲ್ಲಿನ ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಯಕ್ಷ ರಂಗಾಯಣ ಕೇಂದ್ರದ ವತಿಯಿಂದ ಭಾನುವಾರ ನಡೆದ ಬೇಸಗೆ ಶಿಬಿರ- ಚಿಣ್ಣರ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಕ್ಕಳಲ್ಲಿನ ಸಹಜ ಪ್ರತಿಭೆ ಗುರುತಿಸಿ ಅವರನ್ನು ಬೆಳೆಸುವ ಕಾರ್ಯ ನಡೆಯಬೇಕು. ಚಿಣ್ಣರ ಮೇಳದ ಏಳು ದಿನಗಳಲ್ಲಿ ಮಕ್ಕಳು ಹತ್ತಾರು ಸಂಗತಿಗಳನ್ನು ಕಲಿತಿದ್ದಾರೆ. ಮಕ್ಕಳು ಮುಕ್ತವಾಗಿ ಎಲ್ಲರೊಂದಿಗೆ ಬೆರೆಯುವಂತೆ ಮಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು’ ಎಂದರು.

ADVERTISEMENT

‘ಅಂಕ ಗಳಿಕೆಯ ಇಂದಿನ ಶಿಕ್ಷಣ ವ್ಯವಸ್ಥೆಯ ಮಧ್ಯೆ ಉತ್ತಮ ಭವಿಷ್ಯದ ಸಮಾಜ ಕಾಣಲು ಮಕ್ಕಳ ಶಿಬಿರ ಪ್ರೇರಣೆಯಾಗುವುದು. ಯಕ್ಷ ರಂಗಾಯಣದ ಮೂಲಕ ನಿರಂತರ ಚಟುವಟಕೆ ನಡೆಸಲಾಗುವುದು. ತಾಲ್ಲೂಕಿನ ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್‌ನ್ನು ಸ್ಥಾಪಿಸುವ ಮೂಲಕ ರಾಜ್ಯದ ಜನತೆ ಬೈಲೂರನ್ನು ಸಂದರ್ಶಿಸುವಂತೆ ಮುಂದಿನ ದಿನಗಳಲ್ಲಿ ಮಾಡಲಾಗುವುದು’ ಎಂದರು.

ಸಮಾರೋಪ ಭಾಷಣ ಮಾಡಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ‘ಚಿಣ್ಣರ ಮೇಳ ಮಕ್ಕಳಲ್ಲಿ ಸದಭಿರುಚಿ ಮೈಗೂಡಿಸುವ ಜೊತೆಗೆ ಬದುಕಿನ ಪಾಠ ಕಲಿಸಿದೆ. ಸಚಿವ ಸುನೀಲ್ ಕುಮಾರ್ ಅವರ ಚಿಂತನೆ, ಯಕ್ಷರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನೇತೃತ್ವ ಚಿಣ್ಣರ ಮೇಳ ಅತ್ಯಂತ ಯಶಸ್ವಿಯಾಗಲು ಕಾರಣ’ ಎಂದರು.

ಕಾರ್ಕಳ ರಂಗ ಸಂಸ್ಕೃತಿಯ ಅಧ್ಯಕ್ಷ ಎಸ್. ನಿತ್ಯಾನಂದ ಪೈ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಬಿರಗಳು ಸಹಕಾರಿ ಎಂದರು.

ಯಕ್ಷ ರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ ಅವರನ್ನು ಅಭಿನಂದಿಸಲಾಯಿತು. ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಶಿಕ್ಷಕ ರಾಜೇಂದ್ರ ಭಟ್ ನಿರೂಪಿಸಿದರು. ಸುಶಾಂತ್ ಬಜಗೋಳಿ ವಂದಿಸಿದರು. ಸಮಾರೋಪಕ್ಕೆ ಮೊದಲು ಶಿಬಿರದ ಮಕ್ಕಳಿಂದ ವಿವಿಧ ಕಿರುನಾಟಕ ಪ್ರದರ್ಶನ, ಸಮೂಹ ಗೀತೆ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.