ADVERTISEMENT

ತೆಂಕನಿಡಿಯೂರು: ಕೈಕೈ ಮಿಲಾಯಿಸಿಕೊಂಡ ಗ್ರಾ.ಪಂ. ಸದಸ್ಯರು

ತೆಂಕನಿಡಿಯೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 6:14 IST
Last Updated 13 ಜುಲೈ 2024, 6:14 IST
ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಬೆಂಬಲಿತ ಸದಸ್ಯರ ನಡುವೆ ಶುಕ್ರವಾರ ವಾಗ್ವಾದ ನಡೆಯಿತು
ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಬೆಂಬಲಿತ ಸದಸ್ಯರ ನಡುವೆ ಶುಕ್ರವಾರ ವಾಗ್ವಾದ ನಡೆಯಿತು   

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವಿನ ನೂಕಾಟ, ತಳ್ಳಾಟಕ್ಕೆ ಸಾಕ್ಷಿಯಾಯಿತು.

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಣ್ಣಿನೊಳಗೆ ತ್ಯಾಜ್ಯವನ್ನು ಹೂತಿರುವ ವಿಷಯಕ್ಕೆ ಸಂಬಂಧಿಸಿ  ಸಭೆ ಕರೆಯಲಾಗಿತ್ತು. ಮಣ್ಣಿನಲ್ಲಿ ಹೂತುಹಾಕಿರುವ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಸಭೆ ನಡೆಯುತ್ತಿದ್ದ ವೇಳೆ ಪಂಚಾಯಿತಿ ಕಚೇರಿ ಹೊರಗಡೆ ಗ್ರಾಮಸ್ಥರು ಕೂಡ ಪ್ರತಿಭಟನೆ ನಡೆಸಿದರು.

ಕೋರಂ ಇಲ್ಲದೆ ಸಭೆ ನಡೆಸಲು ಬಿಜೆಪಿ ಸದಸ್ಯರು ವಿರೋಧಿಸಿದರು. ಬಳಿಕ ವಾಗ್ವಾದ ನಡೆದು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಹೊಯ್‌ ಕೈ ನಡೆದಿದೆ.

ADVERTISEMENT

ವಾಗ್ವಾದ ಬಿರುಸುಗೊಂಡು ಸದಸ್ಯರು ಪರಸ್ಪರ ತಳ್ಳಾಡಿದರು. ಸಭೆಯಿಂದ ಬಿಜೆಪಿ ಸದಸ್ಯರನ್ನು ಕಾಂಗ್ರೆಸ್ ಸದಸ್ಯರು ಹೊರದಬ್ಬಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಿಜಯಾ, ಪೊಲೀಸರ ಎದುರೇ ನೂಕಾಟ ತಳ್ಳಾಟ ನಡೆದಿದೆ.

ಕಸ ತೆರವಿಗೆ ನಿರ್ಣಯ: ಬಳಿಕ ಪೊಲೀಸ್‌ ಬಂದೋಬಸ್ತ್‌ನಲ್ಲಿ ನಡೆದ ಸಭೆಯಲ್ಲಿ ಕೆಳಾರ್ಕಳ ಬೆಟ್ಟುವಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೂತು ಹಾಕಿರುವ ಕಸವನ್ನು ಶೀಘ್ರ ತೆರವುಗೊಳಿಸಲು  ನಿರ್ಣಯ ಕೈಗೊಳ್ಳಲಾಯಿತು.

‘ಸಭೆ ನಿಲ್ಲಿಸದ ಕಾರಣ ಜಟಾಪಟಿ’

ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರ ಕೋರಂ ಇತ್ತು. ಒಂಬತ್ತು ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಸಭೆಗೆ ಹಾಜರಾಗಿ ಸಭೆಯನ್ನು ನಿಲ್ಲಿಸುವಂತೆ ಕೋರಿದರು. ಆದರೆ ಅದಕ್ಕೆ ಒಪ್ಪದ ಕಾರಣ ಹೊಯ್‌ ಕೈ ನಡೆಯಿತು ಎಂದು ಗ್ರಾಮ ಪಂಚಾಯಿತಿಯ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಪ್ರಖ್ಯಾತ್‌ ಶೆಟ್ಟಿ ತಿಳಿಸಿದರು. ನೂಕಾಟ ತಳ್ಳಾಟದ ವೇಳೆ ಅಧ್ಯಕ್ಷೆ ಶೋಭಾ ಡಿ. ನಾಯಕ್‌ ಸದಸ್ಯರಾದ ರವಿರಾಜ್‌ ಸತೀಶ್‌ ನಾಯಕ್‌ ಶರತ್‌ ಶೆಟ್ಟಿ ಪೃಥ್ವಿರಾಜ್‌ ಶೆಟ್ಟಿ ವಿನಯ್‌ ಆಚಾರ್ಯ ಎಂಬುವವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲು ಚಿಂತನೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.

‘ಕಸ ತೆರವು ಕಾರ್ಯ ಆರಂಭ’

ನೂಕಾಟ ತಳ್ಳಾಟದ ವೇಳೆ ಬಿಜೆಪಿ ಬೆಂಬಲಿತ ಸದಸ್ಯೆಯರಾದ ಮಾಲಿನಿ ರೇಖಾ ವಿಖಿತಾ ಹಾಗೂ ಇತರ ಸದಸ್ಯರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು ಎಂದು ಬಿಜೆಪಿ ಬೆಂಬಲಿತ ಸದಸ್ಯ ವಿನೋದ್‌ ಸುವರ್ಣ ತಿಳಿಸಿದರು. ಸ್ಥಳಕ್ಕೆ ಶಾಸಕ ಯಶ್‌ಪಾಲ್‌ ಸುವರ್ಣ ಅವರು ಭೇಟಿ ನೀಡಿದ್ದು ಅವರ ನೇತೃತ್ವದಲ್ಲಿ ಹೂತ ಕಸವನ್ನು ಹೊರತೆಗೆಯುವ ಕಾರ್ಯಾಚರಣೆ ಆರಂಭವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.