ADVERTISEMENT

ಕರಾವಳಿಯಲ್ಲಿ ಅಧಿಕೃತ ಏಜೆನ್ಸಿಗಳೇ ಇಲ್ಲ: ರವೀಂದ್ರನಾಥ ಶ್ಯಾನುಬೋಗ್

ವಿದೇಶದಲ್ಲಿ ಎದುರಿಸುವ ಸಮಸ್ಯೆಗಳು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 13:10 IST
Last Updated 14 ಅಕ್ಟೋಬರ್ 2018, 13:10 IST
ಕಾರ್ಯಗಾರದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ ಶ್ಯಾನುಬೋಗ್ ಮಾತನಾಡಿದರು.ಪ್ರಜಾವಾಣಿ ಚಿತ್ರ
ಕಾರ್ಯಗಾರದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ ಶ್ಯಾನುಬೋಗ್ ಮಾತನಾಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: ‘ಕರಾವಳಿ ಭಾಗದಿಂದ ಪ್ರತಿವರ್ಷ ಸಾವಿರಾರು ಜನರು ಉದ್ಯೋಗ ನಿಮಿತ್ತ ಮಧ್ಯ ಪ್ರಾಚ್ಯ ದೇಶಗಳಿಗೆ ತೆರಳುತ್ತಾರೆ. ಆದರೆ ಇಲ್ಲಿ ಸರ್ಕಾರದಿಂದ ನೋಂದಾಯಿತ ಏಜೆನ್ಸಿಗಳೇ ಇಲ್ಲ’ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ ಶ್ಯಾನುಬೋಗ್ ತಿಳಿಸಿದರು.

ಕೆಥೋಲಿಕ್ ಸಭಾದ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ವಿದೇಶಗಳಿಗೆ ತೆರಳಿದ ಸಮುದಾಯದ ಜನರು ಎದುರಿಸುವ ಸಮಸ್ಯೆಗಳು ಮತ್ತು ಪರಿಹಾರ ನೆರವು’ ಕುರಿತು ಆಯೋಜಿಸಿದ್ದ ಕಾರ್ಯಗಾರದಲ್ಲಿ ಮಾತನಾಡಿದರು.

ಭಾರತದಿಂದ ಪ್ರತಿ ವರ್ಷ 2.5 ಲಕ್ಷ ಜನರು ವಿದೇಶಗಳಿಗೆ ಹೋಗುತ್ತಿದ್ದು, ಮಂಗಳೂರಿನಿಂದಲೇ ಸುಮಾರು 12 ಸಾವಿರ ಜನರು ತೆರಳುತ್ತಾರೆ. ಆದರೆ, ಇಲ್ಲಿ ಏಜೆಂಟರ ಮೂಲಕ ವಿದೇಶಕ್ಕೆ ಹೋಗುತ್ತಿರುವುದರಿಂದ ಅವರ ಔದ್ಯೋಗಿಕ ಮಾಹಿತಿ ಪಡೆಯುವುದು ಕಷ್ಟಸಾಧ್ಯ. ಮುಂಬೈ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಕಪ್ಪುಪಟ್ಟಿಗೆ ಸೇರಿದ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ. ಮಂಗಳೂರಿನ ಏಜೆಂಟರ ಮೂಲಕ ಉದ್ಯೋಗದ ಆಮಿಷವೊಡ್ಡಿ ನಿರುದ್ಯೋಗಿಗಳನ್ನು ಶ್ರೀಮಂತರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿ. ಶಿರ್ವದ ಜೆಸಿಂತಾ ಪ್ರಕರಣ ಕೂಡ ಇದೇ ರೀತಿಯಾಗಿತ್ತು. ಕಳ್ಳಹಾದಿಯಲ್ಲಿ ತೆರಳಿದ ಹಿನ್ನೆಲೆ ಸರ್ಕಾರ ಸಹ ಆಕೆಯ ಸಹಾಯಕ್ಕೆ ಬರಲಿಲ್ಲ. ಬಳಿಕ ಅವಳನ್ನು ಖರೀದಿಸಿದ ವ್ಯಕ್ತಿಗೆ ಐದು ಲಕ್ಷವನ್ನು ಕೊಟ್ಟು ಬಿಡಿಸಿಕೊಂಡು ಬರಬೇಕಾಯಿತು ಎಂದು ಹೇಳಿದರು.

ADVERTISEMENT

ಮಾನವ ಕಳ್ಳಸಾಗಣಿಕೆ ತೊಡಗಿಸಿಕೊಂಡಿರುವ ಮುಂಬೈನಲ್ಲಿ ಶಾಬಾಸ್‌ಖಾನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆಯಲಾಗಿತ್ತು. ಅವರು ಈ ಕುರಿತು ಮುಂಬೈ ಐಜಿಪಿಗೆ ಸೂಚನೆಯನ್ನು ನೀಡಿರುವ ಪ್ರತಿಯನ್ನು ನನಗೆ ಕೂಡ ಕಳುಹಿಸಿದರು. ಆದರೆ ಈ ಬಗ್ಗೆ ಕ್ರಮ ಕೈಗೊಳಳದೆ ಇರುವುದ ಬಗ್ಗೆ ಮತ್ತೆ ಪತ್ರವನ್ನು ಬರೆದಾಗ ಸಚಿವೆಯ ಪತ್ರವೇ ಸಿಕ್ಕಿಲ್ಲ ಎನ್ನುವ ಉತ್ತರ ಬಂತು. ಇದು ಪೊಲೀಸ್ ಇಲಾಖೆಯಲ್ಲಿನ ಭೃಷ್ಟಾಚಾರಕ್ಕೆ ಒಂದು ಉದಾಹರಣೆ ಎಂದರು.

ನಿಕಟ ಪೂರ್ವ ಅಧ್ಯಕ್ಷ ವಲೇರಿಯನ್ ಆರ್ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷ ಮೇರಿ ಡಿಸೋ’ಜಾ, ಖಜಾಂಚಿ ಜೆರಾಲ್ಡ್ ರೊಡ್ರಿಗಸ್, ಆಧ್ಯಾತ್ಮಿಕ ನಿರ್ದೇಶಕರು ಫರ್ಡಿನಾಂಡ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.