ADVERTISEMENT

ಮೀನು, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ

ಗುಂಪುಗೂಡಿ ಮಾರಾಟ ಮಾಡುವಂತಿಲ್ಲ; ಜಿಲ್ಲಾಧಿಕಾರಿ ಜಿ,.ಜಗದೀಶ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 12:31 IST
Last Updated 2 ಏಪ್ರಿಲ್ 2020, 12:31 IST
ಉಡುಪಿಯ ನಿರ್ಮಿತಿ ಕೇಂದ್ರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 1 ಕೋಟಿ ಚೆಕ್‌ ನೀಡಲಾಯಿತು.
ಉಡುಪಿಯ ನಿರ್ಮಿತಿ ಕೇಂದ್ರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 1 ಕೋಟಿ ಚೆಕ್‌ ನೀಡಲಾಯಿತು.   

ಉಡುಪಿ: ಜಿಲ್ಲೆಯಲ್ಲಿ ಮೀನುಗಾರಿಕೆಗೆ ಹಾಗೂ ಮಾರಾಟಕ್ಕೆ ನಿರ್ಬಂಧವಿಲ್ಲ. ಆದರೆ, ಗುಂಪಾಗಿ ತೆರಳಿ ಮೀನುಗಾರಿಕೆ ಮಾಡುವಂತಿಲ್ಲ, ಗುಂಪಾಗಿ ಮಾರಾಟ ಮಾಡುವಂತೆಯೂ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಗುರುವಾರ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮೀನುಗಾರಿಕೆ ನಿಷೇಧಿಸಿಲ್ಲ. ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರಿಕೆಗೆ ಅವಕಾಶವಿದೆ. 5 ಜನಕ್ಕಿಂತ ಕಡಿಮೆ ಮೀನುಗಾರಿಕೆಗೆ ತೆರಳಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರಿಗೆ ಮೀನು, ಕೋಳಿ ಹಾಗೂ ಕುರಿ ಮಾಂಸ ಮಾರಾಟ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದರು.

ರೈತರ ಬೆಳೆಗಳಿಗೆ ತೊಂದರೆಯಾಗದಂತೆ ಸಾಗಾಟ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಮತ್ತು ತೋಟಗಾರಿಕಾ ಇಲಾಖೆಯ ಮೂಲಕ ರೈತರ ಬೆಳೆಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಪಡಿತರ ವಿತರಣೆ ನಡೆಯುತ್ತಿದ್ದು ಗೊಂದಲಗಳಿಗೆ ಆಸ್ಪದ ನೀಡದಂತೆ ಪಡಿತರ ವಿತರಣೆ ನಡೆಯುತ್ತಿದೆ. ಪಡಿತರ ದಾಸ್ತಾನು ಕೊರತೆಯಿಲ್ಲ ಎಂದು ಡಿಸಿ ತಿಳಿಸಿದರು.

ಜಿಲ್ಲಾಡಳಿತದಿಂದ ಕ್ವಾರಟೈಂನ್‌ನಲ್ಲಿದ್ದವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ. 4 ದಿನಗಳಲ್ಲಿ ಪ್ರಸ್ತುತ ಕ್ವಾರಟೈಂನ್‌ನಲ್ಲಿರುವರ ಅವಧಿ ಮುಗಿಯಲಿದೆ. ನಂತರ 14 ದಿನಗಳ ಕಾಲ ಅವರ ಮೇಲೆ ನಿಗಾ ವಹಿಸಲಾಗುವುದು ಎಂದರು.

ವಲಸೆ ಕಾರ್ಮಿಕರಿಗೆ ತೊಂದರೆಯಾದಗಂತೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ 3,800 ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಮಿಕರು ರೈಲ್ವೆ ಹಳಿಗಳ ಮೇಲೆ ಹಾಗೂ ರಸ್ತೆಯಲ್ಲಿ ಸಂಚರಿಸಬಾರದು ಎಂದು ಡಿಸಿ ಮನವಿ ಮಾಡಿದರು.

₹ 1 ಕೋಟಿ ನೆರವು: ಉಡುಪಿ ನಿರ್ಮಿತಿ ಕೇಂದ್ರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 1 ಕೋಟಿಯ ಚೆಕ್ ನೀಡಲಾಯಿತು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಚೆಕ್‌ ಅನ್ನು ಜಿಲ್ಲಾಧಿಕಾರಿ ಜಗದೀಶ್‌ ಅವರ ಮೂಲಕ ಸರ್ಕಾರಕ್ಕೆ ನೀಡಿದರು. ನಂತರ ಮಾತನಾಡಿದ ಡಿಸಿ, ನಿರ್ಮಿತಿ ಕೇಂದ್ರದ ಲಾಭಾಂಶದಲ್ಲಿ ₹ 1 ಕೋಟಿಯನ್ನು ಸರ್ಕಾರಕ್ಕೆ ಕೊಡಲಾಗಿದೆ ಎಂದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.