ADVERTISEMENT

ಟೊಮೆಟೋ ಜ್ವರ: ಜಿಲ್ಲೆಯಲ್ಲಿ ಕಟ್ಟೆಚ್ಚರ

ಕೇರಳ, ತಮಿಳುನಾಡು ಗಡಿಯಲ್ಲಿ 80ಕ್ಕೂ ಹೆಚ್ಚುಮಕ್ಕಳಲ್ಲಿ ಕಾಣಿಸಿಕೊಂಡ ಜ್ವರ: ಜಿಲ್ಲಾಧಿಕಾರಿ ಕೂರ್ಮಾರಾವ್

​ಪ್ರಜಾವಾಣಿ ವಾರ್ತೆ
Published 13 ಮೇ 2022, 13:10 IST
Last Updated 13 ಮೇ 2022, 13:10 IST

ಉಡುಪಿ: ಕೇರಳ–ತಮಿಳುನಾಡು ಗಡಿಯಲ್ಲಿರುವ ವಾಳಯಾರ್‌ನಲ್ಲಿ ಐದುವರ್ಷದೊಳಗಿನ 80ಕ್ಕೂ ಅಧಿಕ ಮಕ್ಕಳಲ್ಲಿ ಟೊಮೆಟೋ ಜ್ವರ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.

ಇದುವರೆಗೂ ಉಡುಪಿ ಜಿಲ್ಲೆಯಲ್ಲಿ ಟೊಮೆಟೋ ಜ್ವರದ ರೋಗ ಲಕ್ಷಣಗಳು ಪತ್ತೆಯಾಗಿರುವುದಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ಜ್ವರವು ಪತ್ತೆಯಾಗಿರುವ ಕಾರಣ ಗಡಿಭಾಗದ ಜಿಲ್ಲೆಗಳಲ್ಲಿ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜ್ವರ ಕಾಣಿಸಿಕೊಳ್ಳುವ ಮಕ್ಕಳ ದೇಹದಲ್ಲಿ ಟೊಮೆಟೋ ಆಕಾರದ ಗುಳ್ಳೆಗಳು ಕಾಣಿಸಿಕೊಳ್ಳುವುದರಿಂದ ಜ್ವರಕ್ಕೆ ಟೊಮೆಟೋ ಜ್ವರ ಎಂದು ಹೆಸರಿಡಲಾಗಿದೆ. ಈ ಜ್ವರವು ವೈರಸ್‌ನಿಂದ ಹರಡುತ್ತಿದ್ದು, ಜ್ವರಕ್ಕೂ ಕೊರೊನಾಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಟೊಮೆಟೋ ಜ್ವರವು ಚಿಕೂನ್‌ಗೂನ್ಯ ಲಕ್ಷಣವನ್ನು ಹೋಲುತ್ತಿದ್ದು, ಜ್ವರ ಹಾಗೂ ಗುಳ್ಳೆಯ ಜೊತೆಗೆ ಕೆಮ್ಮು, ಶೀತ, ನಿರ್ಜಲೀಕರಣ ಉಂಟಾಗುತ್ತದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ ಸೋಂಕಿತ ಮಕ್ಕಳು ಕ್ವಾರಂಟೈನ್ ಆಗಬೇಕು ಹಾಗೂ ಗುಳ್ಳೆಗಳನ್ನು ಉಜ್ಜಬಾರದು.

ಜಿಲ್ಲೆಯ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ಮೇಲ್ಕಂಡ ಲಕ್ಷಣಗಳಿರುವ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇರಳದಿಂದ ಬರುವ ವ್ಯಕ್ತಿಗಳು, ಯಾತ್ರಿಕರು, ಮಕ್ಕಳ ಬಗ್ಗೆ ತೀವ್ರ ನಿಗಾ ವಹಿಸಬೇಕು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹಾಗೂ ಜಿಲ್ಲೆಯ ಇತರೆ ಧಾರ್ಮಿಕ ಕೇಂದ್ರಗಳಿಗೆ ಭೇಟಿನೀಡುವ ಭಕ್ತರು ಹಾಗೂ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಲ್ಲಿ ಟೊಮೆಟೋ ಜ್ವರದ ಲಕ್ಷಣ ಇದ್ದರೆ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.

ಖಾಸಗಿ ಆಸ್ಪತ್ರೆಗಳು ಹಾಗೂ ಎಲ್ಲ ಮಕ್ಕಳ ತಜ್ಞರು ಟೊಮೆಟೋ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಸಾರ್ವಜನಿಕರು ಭೀತಿಗೆ ಒಳಗಾಗುವ ಅವಶ್ಯಕತೆ ಇಲ್ಲ. ಎಚ್ಚರಿಕೆ ವಹಿಸಿದರೆ ಸಾಕು. ಟೊಮೆಟೋ ಜ್ವರದ ಲಕ್ಷಣಗಳ ಬಗ್ಗೆ ಮಾಹಿತಿ ಪಡೆದು ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ದೇಹ ನಿರ್ಜಲೀಕರಣವಾಗದಂತೆ ಆಗಾಗ ನೀರು ಕುಡಿಯಬೇಕು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.