ADVERTISEMENT

‌ಉಡುಪಿ: ಸಮುದ್ರ, ನದಿ ಹಿನ್ನೀರಿನಲ್ಲಿ ತೇಲುವ ರೆಸ್ಟೊರೆಂಟ್‌

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು: ಜಿಲ್ಲಾಧಿಕಾರಿ ಜಿ.ಜಗದೀಶ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 14:56 IST
Last Updated 12 ಫೆಬ್ರುವರಿ 2021, 14:56 IST
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು.   

‌ಉಡುಪಿ: ಜಿಲ್ಲೆಯ ಸಮುದ್ರ ಹಾಗೂ ನದಿಗಳ ಹಿನ್ನೀರಿನಲ್ಲಿ ಪ್ರವಾಸಿಗರ ಆಕರ್ಷಣೆಗೆ ತೇಲುವ ರೆಸ್ಟೊರೆಂಟ್‌ಗಳನ್ನು ಅಭಿವೃದ್ಧಿಪಡಿಸಬಹುದಾಗಿದ್ದು, ಈ ಸಂಬಂಧ ಖಾಸಗಿ ಸಂಸ್ಥೆ ಹಾಗೂ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಿ ಟೆಂಡರ್ ಕರೆಯಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸಾಕಷ್ಟು ಅವಕಾಶಗಳಿವೆ. ಪಡುಬಿದ್ರಿಯ ನಂತರ ಕುಂದಾಪುರದ ಕೋಡಿ ಬೀಚ್‌ಗೆ ಬ್ಲೂಫ್ಲಾಗ್ ಮಾನ್ಯತೆ ಪಡೆಯುವ ಕುರಿತು ಪ್ರಾಥಮಿಕ ಸರ್ವೆ ನಡೆಸಲಾಗಿದೆ. ಪಡುವರಿ ಬೀಚ್‌ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಲಾಗುತ್ತಿದೆ ಎಂದರು.

ಒತ್ತಿನೆಣೆಯಲ್ಲಿ ಟ್ರೀಪಾರ್ಕ್, ರೆಸ್ಟೋರೆಂಟ್ ಸೇರಿದಂತೆ ವಿವಿಧ ಸೌಲಭ್ಯಗಳಿರುವ ಟೂರಿಸಂ ಹಬ್ ನಿರ್ಮಿಸಲು ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ. ಜಿಲ್ಲೆಯ ಎಲ್ಲ ಬೀಚ್‌ಗಳು ಸ್ವಂತ ಆದಾಯದಿಂದ ಅಭಿವೃದ್ಧಿಯಾಗಬೇಕು, ಆರ್ಥಿಕವಾಗಿ ಸಶಕ್ತ ಬೀಚ್‌ಗಳನ್ನು ನಿರ್ಮಿಸಬೇಕು ಎಂಬುದು ಪ್ರಮುಖ ಉದ್ದೇಶ ಎಂದು ಜಿಲ್ಲಾಧಿಕಾರಿ ಹೇಳಿದರು.

ADVERTISEMENT

ಪಡುಬಿದ್ರೆ ಬ್ಲೂಫ್ಲಾಗ್ ಬೀಚ್‌ನಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿರುವ ಕುರಿತು ದೂರುಗಳಿದ್ದು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಮಾಡಬೇಕು. ಪಡುಬಿದ್ರಿ ಮುಖ್ಯ ಬೀಚ್‌ನಲ್ಲಿ ಅಗತ್ಯ ಮೂಲಸೌಕಪಡುಬಿದ್ರಿ ಮುರ್ಯ ಒದಗಿಸಬೇಕು, ಪಡುಬಿದ್ರಿ ಹಾಗೂ ಕಾಪು ಬೀಚ್‌ಗಳ ನಿರ್ವಹಣೆಯನ್ನು ಸ್ಥಳೀಯರಿಗೆ ನೀಡಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ತ್ರಾಸಿ ಮತ್ತು ಮರವಂತೆ ಕಡಲ ತೀರದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗೂಡಂಗಡಿ ನಡೆಸುತ್ತಿರುವವರಿಗೆ ಅಂಗಡಿ ಮಳಿಗೆಗಳನ್ನು ಹಂಚಿಕೆ ಮಾಡಿ. ಕೋಸ್ಟಲ್ ಸರ್ಕ್ಯೂಟ್ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಿ. ಬೀಚ್‌ನಲ್ಲಿ ಕಾಮಗಾರಿ ನಿರ್ವಹಿಸುವಾಗ ಸಿಆರ್‌ಝೆಡ್‌ ನಿಯಮಗಳು ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು, ಪರಿಸರ ಸ್ನೇಹಿ ಸಾಮಗ್ರಿಗಳನ್ನು ಬಳಸಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅನುಮತಿ ಪಡೆಯದೆ ಕಾರ್ಯ ನಿರ್ವಹಿಸುತ್ತಿರುವ ಹೋಂ ಸ್ಟೇಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು, ತಪ್ಪಿದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಹೋಂ ಸ್ಟೇಗಳ ಮಾಲೀಕರಿಗೆ ಮತ್ತು ಹೊಸದಾಗಿ ಹೋಂ ಸ್ಟೇ ಮಾಡಲು ಇಚ್ಚಿಸುವವರಿಗೆ ಸೂಕ್ತ ಮಾಹಿತಿ ನೀಡಲು ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.