ಉಡುಪಿ: ಬಿರುಸಿನ ಮಳೆ ಕಡಿಮೆಯಾಗುತ್ತಿದ್ದಂತೆ ಮಲ್ಪೆ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಚುರುಕುಗೊಂಡಿದ್ದು, ನಾಡದೋಣಿ ಮೀನುಗಾರರಿಗೆ ಹೇರಳವಾಗಿ ಸಿಗಡಿ ಮೀನುಗಳು ಸಿಗುತ್ತಿವೆ.
ಈ ಬಾರಿ ಮಲ್ಪೆಯಲ್ಲಿ ವಾಡಿಕೆಗಿಂತ ತಡವಾಗಿ ನಾಡ ದೋಣಿಗಳು ಕಡಲಿಗಿಳಿದರೂ ಮೀನು ಸಿಗುತ್ತಿರುವುದು ಮೀನುಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಸಾಮಾನ್ಯವಾಗಿ ಟ್ರಾಲಿಂಗ್ ನಿಷೇಧ ಜಾರಿಗೆ ಬಂದು ಆಳ ಸಮುದ್ರಕ್ಕೆ ತೆರಳುವ ದೋಣಿಗಳು ದಡ ಸೇರಿದ ಬಳಿಕ ಜೂನ್ ತಿಂಗಳಲ್ಲಿ ನಾಡ ದೋಣಿಗಳು ಮೀನುಗಾರಿಕೆಗೆ ಇಳಿಯುತ್ತಿದ್ದವು. ಆದರೆ, ಈ ಬಾರಿ ಹವಾಮಾನ ವೈಪರೀತ್ಯ ಉಂಟಾದ ಕಾರಣ ಹೆಚ್ಚಿನ ನಾಡದೋಣಿ ಮೀನುಗಾರರು ಜುಲೈ ತಿಂಗಳಲ್ಲಿ ಮೀನುಗಾರಿಕೆಗೆ ಇಳಿದಿದ್ದರು.
ಕಳೆದ ಮಳೆಗಾಲದಲ್ಲಿ ಪದೇ ಪದೇ ಚಂಡಮಾರುತಗಳು ಕಾಣಿಸಿಕೊಂಡ ಪರಿಣಾಮವಾಗಿ ಬಹುತೇಕ ನಾಡ ದೋಣಿಗಳು ಬೆರಳೆಣಿಕೆಯ ದಿನಗಳಲ್ಲಷ್ಟೇ ಮೀನುಗಾರಿಕೆ ನಡೆಸಿದ್ದವು. ತೀವ್ರ ಮತ್ಸ್ಯಕ್ಷಾಮ ತಲೆದೋರಿ ಮೀನುಗಾರರಿಗೆ ನಷ್ಟ ಉಂಟಾಗಿತ್ತು.
ಟ್ರಾಲಿಂಗ್ ನಿಷೇಧ ಜಾರಿಯಲ್ಲಿರುವ ಅವಧಿಯಲ್ಲಿ ಮಾತ್ರ ನಾಡದೋಣಿ ಮೀನುಗಾರರು ಹಿಡಿಯುವ ಮೀನುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಅವಧಿಯಲ್ಲಿ ಉತ್ತಮ ಮೀನುಗಾರಿಕೆಯಾದರೆ ಅವರಿಗೆ ಲಾಭ ಸಿಗುತ್ತದೆ.
ಕಳೆದ ಮೀನುಗಾರಿಕಾ ಋತುವಿನಲ್ಲಿ ಕೆಲವು ಬೋಟ್‌ನವರು ಲೈಟ್ ಫಿಶಿಂಗ್, ಬುಲ್ ಟ್ರಾಲಿಂಗ್ ಮೊದಲಾದ ಅವೈಜ್ಞಾನಿಕ ರೀತಿಯ ಮೀನುಗಾರಿಕೆ ನಡೆಸಿರುವ ಕಾರಣ ಮತ್ಸ್ಯಕ್ಷಾಮ ತಲೆದೋರಿತ್ತು ಎಂದು ಕೆಲವು ನಾಡದೋಣಿ ಮೀನುಗಾರರು ದೂರಿದ್ದಾರೆ.
ಸಾಮಾನ್ಯವಾಗಿ ನಾಡದೋಣಿ ಮೀನುಗಾರರಿಗೆ ಬಗೆ ಬಗೆಯ ಮೀನುಗಳು ಸಿಗುತ್ತಿದ್ದವು. ಆದರೆ, ಈ ಬಾರಿ ಸಿಗಡಿ ಬಿಟ್ಟು ಉಳಿದ ಮೀನುಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತಿವೆ ಎನ್ನುತ್ತಾರೆ ಮಲ್ಪೆಯ ಮೀನುಗಾರರು.
ಪ್ರತಿವರ್ಷವೂ ಮಲ್ಪೆಯ ನಾಡದೋಣಿ ಮೀನುಗಾರರು ಜೂನ್ ತಿಂಗಳಲ್ಲೇ ಮೀನುಗಾರಿಕೆ ಆರಂಭಿಸಿದರೆ, ಬೈಂದೂರು ಭಾಗದ ನಾಡದೋಣಿ ಮೀನುಗಾರರು ಜುಲೈ ತಿಂಗಳಲ್ಲೇ ಹೆಚ್ಚಾಗಿ ಮೀನುಗಾರಿಕೆಗೆ ಇಳಿಯುತ್ತಾರೆ. ಈ ಸಲ ಬೈಂದೂರು ಭಾಗದಲ್ಲಿ ಇನ್ನೂ ನಾಡದೋಣಿ ಮೀನುಗಾರಿಕೆ ಆರಂಭವಾಗಿಲ್ಲ ಎಂದು ಮೀನುಗಾರರು ತಿಳಿಸಿದ್ದಾರೆ.
ಕಂತಲೆ, ಪಟ್ಟಬಲೆ, ಟ್ರಾಲ್, ಕೈರಂಪಣಿ ವಿಧಾನಗಳ ಮೂಲಕ ನಾಡದೋಣಿಗಳಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ. ಧಾರಾಳವಾಗಿ ಮೀನುಗಳು ಸಿಕ್ಕಿದರೆ ದೋಣಿಯಲ್ಲಿ ತೆರಳಿದವರು ಮೀನುಗಳನ್ನು ಸಮಪಾಲು ಮಾಡಿಕೊಳ್ಳುತ್ತಾರೆ. ನಾಡದೋಣಿ ಇರುವವರೇ ಹೆಚ್ಚಿನವರು ಮೀನುಗಾರಿಕೆಗೆ ತೆರಳುತ್ತಾರೆ. ಆಳ ಸಮುದ್ರಕ್ಕೆ ತೆರಳುವ ದೋಣಿಗಳಲ್ಲಿ ಹೆಚ್ಚಾಗಿ ಇತರ ರಾಜ್ಯಗಳ ಕಾರ್ಮಿಕರು ದುಡಿಯುತ್ತಿದ್ದು, ಅವರು ಈಗಾಗಲೇ ಅವರವರ ಊರುಗಳಿಗೆ ತೆರಳಿದ್ದಾರೆ. ಟ್ರಾಲಿಂಗ್ ನಿಷೇಧ ತೆರವಾದ ಬಳಿಕ ಅವರು ಮತ್ತೆ ಮಲ್ಪೆಗೆ ಮರಳಲಿದ್ದಾರೆ.
‘ಬಂಗುಡೆ ಬೂತಾಯಿ ಸಿಗುತ್ತಿಲ್ಲ’
ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮಲ್ಪೆಯ ಸಾಂಪ್ರದಾಯಿಕ ನಾಡದೋಣಿಗಳು ತಡವಾಗಿ ಮೀನುಗಾರಿಕೆಗೆ ಇಳಿದರೂ ಉತ್ತಮವಾಗಿ ಮೀನುಗಾರಿಕೆಯಾಗುತ್ತಿದೆ. ಚಿಕ್ಕ ಟ್ರಾಲ್ ದೋಣಿಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಗಾತ್ರದ ಸಿಗಡಿಗಳು ಸಿಗುತ್ತಿವೆ. ಆದರೆ ಬಂಗುಡೆ ಮತ್ತು ಬೂತಾಯಿ ಮೀನುಗಳು ಸಿಗುತ್ತಿಲ್ಲ ಎನ್ನುತ್ತಾರೆ ಮಲ್ಪೆಯ ಮೀನುಗಾರ ರತನ್. ಕೆಲವು ದೋಣಿಯವರಿಗೆ ಕಲ್ಲೂರು ಮೀನು ಕೂಡ ಸಿಕ್ಕಿದೆ. ಕೈರಂಪಣಿ ಮೀನುಗಾರರಿಗೂ ಉತ್ತಮ ಮೀನುಗಾರಿಕೆಯಾಗುತ್ತಿದೆ. ಮಲ್ಪೆಯ ಬಹುಪಾಲು ನಾಡದೋಣಿಗಳು ಈಗಾಗಲೇ ಮೀನುಗಾರಿಕೆಗೆ ಇಳಿದಿವೆ ಎಂದು ಅವರು ತಿಳಿಸಿದರು.
- ‘ಈ ಬಾರಿ ಉತ್ತಮ ಮೀನುಗಾರಿಕೆ’
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಾಡದೋಣಿ ಮೀನುಗಾರಿಕೆ ಉತ್ತಮವಾಗಿದೆ. ಆದರೆ ಕೆಲವೊಮ್ಮೆ ಕಡಲಿನಲ್ಲಿ ತೂಫಾನ್ ಎದ್ದರೆ ದೊಡ್ಡ ನಾಡದೋಣಿಗಳು ವಾಪಸ್ ಬರಬೇಕಾಗುತ್ತದೆ ಎನ್ನುತ್ತಾರೆ ಮಲ್ಪೆಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ ಪಿ. ಸಾಲ್ಯಾನ್. ಕೆಲವೊಮ್ಮೆ ದೊಡ್ಡದೋಣಿಗಳು ಸಮುದ್ರಕ್ಕೆ ತೆರಳಿ ವಾಪಸ್ ಬಂದರೆ ದೋಣಿಯವರಿಗೆ ನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.