ADVERTISEMENT

ವೃದ್ಧರ ಸಮಗ್ರ ಆರೈಕೆ: ‘ವೃದ್ಧಾಪ್ಯವು ಮರಳಿ ಅರಳುವ ದಿನಗಳು’

ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 7:49 IST
Last Updated 15 ಮಾರ್ಚ್ 2025, 7:49 IST
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಅವರು ಮಾತನಾಡಿದಾಗ ಆಶಾ ಕಾರ್ಯಕರ್ತೆಯರು ಮೊಬೈಲ್‌ ಟಾರ್ಚ್‌ ಬೆಳಗಿ, ಖುಷಿ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಅವರು ಮಾತನಾಡಿದಾಗ ಆಶಾ ಕಾರ್ಯಕರ್ತೆಯರು ಮೊಬೈಲ್‌ ಟಾರ್ಚ್‌ ಬೆಳಗಿ, ಖುಷಿ ವ್ಯಕ್ತಪಡಿಸಿದರು   

ಉಡುಪಿ: ವೃದ್ಧಾಪ್ಯವು ಬದುಕಿನ ಮರಳಿ ಅರಳುವ ದಿನಗಳಾಗಿದ್ದು, ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಯತ್ತ ಪ್ರತಿಯೊಬ್ಬರೂ ಗಮನ ಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಉಡುಪಿ ಶಾಖೆಯ ವತಿಯಿಂದ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ, ವೃದ್ಧರ ಸಮಗ್ರ ಆರೈಕೆ ಕುರಿತು ಅಜ್ಜರಕಾಡು ಪುರಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ವಿಜ್ಞಾನ ಕ್ಷೇತ್ರದ ಅಭಿವೃದ್ಧಿ, ಜೀವನ ಶೈಲಿಯ ಸುಧಾರಣೆಯಿಂದ ಮನುಷ್ಯನ ಜೀವಿತಾವಧಿ ಹೆಚ್ಚಿದೆ. ಇದರಿಂದಾಗಿ ವೃದ್ಧರ ಸಂಖ್ಯೆ ಹೆಚ್ಚಿದೆ. ಅವರ ಅನುಭವಗಳು ನಮಗೆ ದಾರಿದೀಪವಾಗಬೇಕು ಮತ್ತು ಅವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

ADVERTISEMENT

ಒಬ್ಬಂಟಿಯಾಗಿ ಜೀವಿಸುವ ವೃದ್ಧರು ಸಾಕಷ್ಟು ಮಂದಿ ಇದ್ದಾರೆ. ಆವರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಹಿರಿಯ ನಾಗರಿಕರನ್ನು ಗೌರವಿಸದ ಸಮಾಜಕ್ಕೆ ಒಳಿತಾಗದು. ಇಂದು ಅನೇಕ ಮನೆಗಳಲ್ಲಿ ವೃದ್ಧರು ಮೂಲೆಗುಂಪಾಗುತ್ತಿದ್ದಾರೆ. ಕನಿಷ್ಠ ಸಮಯವನ್ನಾದೂ ಹಿರಿಯ ನಾಗರಿಕರ ಆರೈಕೆಗೆ ಮೀಸಲಿಡಬೇಕು ಎಂದು ಹೇಳಿದರು.

ಹಿರಿಯರಿಗೂ ಸಾಂವಿಧಾನಿಕ ಹಕ್ಕುಗಳಿವೆ. ಅವರಿಗೆ ಗೌರವ ಸಿಗದಿದ್ದರೆ ಇಡೀ ಸಮಾಜವೇ ತಲೆ ತಗ್ಗಿಸಬೇಕಾಗುತ್ತದೆ. ಹಿರಿಯ ಜೀವಗಳಿಗೆ ಆರೈಕೆ, ಗೌರವ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಅಡಿಪಾಯವಾಗಿದ್ದಾರೆ. ವಿವಿಧ ಕೆಲಸಗಳಿಗೆ ಮನೆ ಮನೆಗೆ ತೆರಳುವಾಗ ಅಲ್ಲಿನ ವೃದ್ಧರ ಯೋಗಕ್ಷೇಮ ವಿಚಾರಿಸಬೇಕು. ವೃದ್ಧರನ್ನು ಹೇಗೆ ಆರೈಕೆ ಮಾಡಬೇಕೆಂದು ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಡಾ. ವಸಂತ್‌ ಕುಮಾರ್‌ ತರಬೇತಿ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ಮಲ್ಲಿಕಾ, ಜಿಲ್ಲಾ ಆರ್‌.ಸಿ.ಎಚ್‌. ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ., ಜಿಲ್ಲಾ ಹಿರಿಯ ನಾಗರಿಕರ ಉಪಶಮನ ಆರೈಕೆ ನೋಡಲ್‌ ಅಧಿಕಾರಿ ಡಾ. ನಾಗರತ್ನ ಶಾಸ್ತ್ರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ನೋಡಲ್ ಅಧಿಕಾರಿ ಡಾ. ಲತಾ ನಾಯಕ್‌, ಮೌಂಟ್‌ ಅಬು ಗ್ಲೋಬಲ್‌ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮಹೇಶ್‌ ಹೇಮಾದ್ರಿ, ಡಾ. ರೀಟಾ, ರಾಜಯೋಗಿನಿ ಬಿ.ಕೆ. ಸುಮ ಉಪಸ್ಥಿತರಿದ್ದರು. ರಘುರಾಮ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ನಾಗರಿಕರು ವೃದ್ಧಾಪ್ಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅವರಿಗೆ ಉತ್ತಮ ಆರೈಕೆ ಅಗತ್ಯ. ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಯ ಕಡೆಗೂ ಆಶಾ ಕಾರ್ಯಕರ್ತೆಯರು ಗಮನ ಹರಿಸಬೇಕು.
–ಪ್ರತೀಕ್‌ ಬಾಯಲ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.