ADVERTISEMENT

ಕಂದಮ್ಮನ ಚಿಕಿತ್ಸೆಗೆ ಲಿಂಗತ್ವ ಅಲ್ಪಸಂಖ್ಯಾತರ ಭಿಕ್ಷಾಟನೆ

ಒಂದೇ ದಿನದಲ್ಲಿ 21,000 ಸಂಗ್ರಹ: ಉಡುಪಿಯ ಆಶ್ರಯ ಸಮುದಾಯದ ಸಮಾಜಮುಖಿ ಕಾರ್ಯ

ಬಾಲಚಂದ್ರ ಎಚ್.
Published 19 ನವೆಂಬರ್ 2020, 1:48 IST
Last Updated 19 ನವೆಂಬರ್ 2020, 1:48 IST
ದೇಣಿಗೆ ಸಂಗ್ರಹಿಸುತ್ತಿರುವ ಲಿಂಗತ್ವ ಅಲ್ಪಸಂಖ್ಯಾತರು
ದೇಣಿಗೆ ಸಂಗ್ರಹಿಸುತ್ತಿರುವ ಲಿಂಗತ್ವ ಅಲ್ಪಸಂಖ್ಯಾತರು   

ಉಡುಪಿ: ಸಮಾಜದಿಂದ ನಿರಂತರ ಅಪಹಾಸ್ಯ, ಅವಮಾನ, ಅವಹೇಳನಕ್ಕೆ ಗುರಿಯಾಗಿರುವ ಲಿಂಗತ್ವ ಅಲ್ಪಸಂಖ್ಯಾತರು ಮಗುವಿನ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲು ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಮಾನವೀಯತೆ ಮರೆದಿದ್ದಾರೆ.

ಉಡುಪಿ, ಮಣಿಪಾಲ, ಕಾರ್ಕಳ ವ್ಯಾಪ್ತಿಯಲ್ಲಿ ಭಿಕ್ಷಾಟನೆ ಮಾಡಿ ₹ 21,000 ಒಟ್ಟು ಮಾಡಿರುವ ಲಿಂಗತ್ಪ ಅಲ್ಪಸಂಖ್ಯಾತರು ಗುರುವಾರ ಹಣವನ್ನು ಮಗುವಿನ ಚಿಕಿತ್ಸೆಗೆ ಹಸ್ತಾಂತರ ಮಾಡಲಿದ್ದಾರೆ. ಈ ಸಮಾಜಮುಖಿ ಕಾರ್ಯದ ಹಿಂದಿರುರುವುದು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಶ್ರಮಿಸುತ್ತಿರುವ ಉಡುಪಿಯ ಆಶ್ರಯ ಸಮುದಾಯದ ಸದಸ್ಯರು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಆಶ್ರಯ ತಂಡದ ಸದಸ್ಯೆ ಸಮೀಕ್ಷಾ ‘ಬೆಳ್ತಂಗಡಿಯ ಆರಾಧ್ಯ ಎಂಬ ಎರಡೂವರೆ ವರ್ಷದ ಬಾಲಕಿಯ ಚಿಕಿತ್ಸೆಗೆ ಆರ್ಥಿಕ ನೆರವು ಕೋರಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿತ್ತು. ಮಂಗಳೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ಮಗುವಿನ ನೆರವಿಗೆ ಹಣ ಸಂಗ್ರಹಿಸುವ ನಿರ್ಧಾರ ಮಾಡಲಾಯಿತು.

ADVERTISEMENT

ಅದರಂತೆ, ಉಡುಪಿಯಲ್ಲಿ ಆಶ್ರಯ ಸಮುದಾಯದ ಮುಖ್ಯಸ್ಥರ ಒಪ್ಪಿಗೆ ಪಡೆದು ಹಣ ಸಂಗ್ರಹಿಸಲು ಎರಡು ತಂಡಗಳನ್ನು ರಚಿಸಲಾಯಿತು. ಒಂದು ತಂಡ ಉಡುಪಿ, ಮತ್ತೊಂದು ತಂಡ ಮಣಿಪಾಲ ಹಾಗೂ ಕಾರ್ಕಳದಲ್ಲಿ ಭಿಕ್ಷಾಟನೆ ಮಾಡಲು ನಿರ್ಧರಿಸಿದೆವು. ತಂಡದಲ್ಲಿ ಸಾನ್ವಿ, ಸಂಧ್ಯಾ, ರೇಖಾ, ಲಾವಣ್ಯ, ನಿಶಾ, ಸುಹಾನಾ ಇದ್ದರು ಎಂದು ವಿವರಿಸಿದರು ಸಮೀಕ್ಷಾ.

ಹಣ ಪಡೆಯುವ ಉದ್ದೇಶವನ್ನು ಹಣ ಸಂಗ್ರಹಿಸುವ ಡಬ್ಬದ ಮೇಲೆ ಬರೆದು ಪ್ರತಿ ಅಂಗಡಿ, ಹೋಟೆಲ್, ವಾಣಿಜ್ಯ ಮಳಿಗೆ, ಮೀನು ಮಾರುಕಟ್ಟೆಗಳಿಗೆ ತೆರಳಿ ಹಣ ಪಡೆದವು. ಬಸ್‌ಗಳನ್ನು ಹತ್ತಿ ಪ್ರಯಾಣಿಕರಿಂದಲೂ ನೆರವು ಪಡೆದೆವು. ಇಷ್ಟು ದಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಣ ಕೊಡುವಾಗ ಮುಖ ಸಿಂಡರಿಸುತ್ತಿದ್ದ ಸಾರ್ವಜನಿಕರು ಮಗುವಿನ ಚಿಕಿತ್ಸಾ ವೆಚ್ಚಕ್ಕೆ ಹಣ ಕೊಡುವಾಗ ಖುಷಿಯಾಗಿ ಕೊಟ್ಟರು. ಅವರ ಮುಖದಲ್ಲಿ ಸಾರ್ಥಕ ಭಾವ ಕಾಣುತ್ತಿತ್ತು ಎಂದರು ಸಮೀಕ್ಷಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.