ADVERTISEMENT

ಪ್ರಯಾಣಿಕರ ಸಾವಿಗೆ ಕಾರಣರಾದ ಇಬ್ಬರು ಬಸ್‌ ನಿರ್ವಾಹಕರು ಹಾಗೂ ಒಬ್ಬ ಚಾಲಕನ ಸೆರೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 15:57 IST
Last Updated 5 ಡಿಸೆಂಬರ್ 2022, 15:57 IST
   

ಉಡುಪಿ: ಪ್ರಯಾಣಿಕರು ಬಸ್‌ ಹತ್ತುವಾಗ ಹಾಗೂ ಇಳಿಯುವಾಗ ನಿರ್ಲಕ್ಷ್ಯ ತೋರಿಸಿ ಪ್ರಯಾಣಿಕರ ಸಾವಿಗೆ ಕಾರಣರಾದ ಇಬ್ಬರು ಬಸ್‌ ನಿರ್ವಾಹಕರು ಹಾಗೂ ಒಬ್ಬ ಚಾಲಕನನ್ನು ಬಂಧಿಸಲಾಗಿದೆ.

ಕಂಡಕ್ಟರ್‌ಗಳಾದ ಜಯಪ್ರಕಾಶ್ ಶೆಟ್ಟಿ (60), ಮಂಜುನಾಥ್‌ (31) ಹಾಗೂ ಚಾಲಕ ವಿಶ್ವನಾಥ್ ಶೆಟ್ಟಿ (53) ಬಂಧಿತರು.

ಪ್ರಕರಣದ ವಿವರ:

ADVERTISEMENT

ಡಿ.4ರಂದು ಕೃಷ್ಣ ನಾಯ್ಕ್‌ (70) ಎಂಬುವರು ಕಾರ್ಕಳ–ಹೆಬ್ರಿ ಮಾರ್ಗದ ಮೂರೂರು ಬಳಿ ರೇಷ್ಮಾ ಹೆಸರಿನ ಬಸ್‌ ಹತ್ತುವ ಮುನ್ನವೇ ಬಸ್‌ನ ನಿರ್ವಾಹಕ ಜಯಪ್ರಕಾಶ್ ಶೆಟ್ಟಿ ಬಸ್‌ ಹೊರಡಲು ಸೂಚನೆ ನೀಡಿದ್ದ. ಪರಿಣಾಮ ಕೃಷ್ಣ ನಾಯ್ಕ್‌ ಬಸ್ಸಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು.

ಮತ್ತೊಂದು ಪ್ರಕರಣದಲ್ಲಿ ನ.26ರಂದು ಸಂಜೆ 6.45ಕ್ಕೆ ಚಂದ್ರಶೇಖರ್ ನಾಯ್ಕ್ ಎಂಬುವರು ಹೆಬ್ರಿ ತಾಲ್ಲೂಕು ಅಲ್ಬಾಡಿ ಗ್ರಾಮದ ಕೊಂಚಾಡಿ ಹಳೆನೀರು ಬೆಟ್ಟು ಬಳಿಯ ನಿಲ್ದಾಣದಲ್ಲಿ ದುರ್ಗಾಂಬಾ ಬಸ್‌ನಿಂದ ಇಳಿಯುವಾಗ, ನಿರ್ವಾಹಕ ಇಳಿಯುವ ಮೊದಲೇ ಬಸ್ ಹೊರಡಲು ಸೂಚನೆ ನೀಡಿದ್ದ.

ಪರಿಣಾಮ ಚಂದ್ರಶೇಖರ ನಾಯ್ಕ್‌ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಘಟನೆ ಸಂಬಂಧ ಬಸ್‌ ನಿರ್ವಾಹಕ ಮಂಜುನಾಥ್ ಹಾಗೂ ಚಾಲಕ ವಿಶ್ವನಾಥ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಎರಡೂ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ತಿಳಿಸಿದ್ದಾರೆ.

ಈಚೆಗೆ ಪ್ರಯಾಣಿಕರು ಸಂಚರಿಸುವ ಬಸ್‌ಗಳಲ್ಲಿ ನಿರ್ವಾಹಕ ಹಾಗೂ ಚಾಲಕರ ನಿರ್ಲಕ್ಷತನದಿಂದ ಪ್ರಯಾಣಿಕರು ಬಸ್‌ನಿಂದ ಇಳಿಯುವಾಗ ಹಾಗೂ ಹತ್ತುವಾಗ ದುರ್ಘಟನೆಗಳು ನಡೆಯುತ್ತಿವೆ. ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಫುಟ್‌ಬೋರ್ಡ್‌ ಮೇಲೆ ಪ್ರಯಾಣ ಅಪಘಾತ ಹೆಚ್ಚಾಗಲು ಕಾರಣವಾಗಿರುತ್ತದೆ. ಇಂತಹ ಘಟನೆಗಳಿಗೆ ಬಸ್‌ ಚಾಲಕ ಹಾಗೂ ನಿರ್ವಾಹಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.