ADVERTISEMENT

ಅಮೃತ ಮಹೋತ್ಸವ ಹೆಮ್ಮೆಯ ಪ್ರತೀಕ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 14:45 IST
Last Updated 14 ಆಗಸ್ಟ್ 2022, 14:45 IST
ಜೆರಾಲ್ಡ್‌ ಲೋಬೊ, ಉಡುಪಿ ಧರ್ಮಾಧ್ಯಕ್ಷರು
ಜೆರಾಲ್ಡ್‌ ಲೋಬೊ, ಉಡುಪಿ ಧರ್ಮಾಧ್ಯಕ್ಷರು   

ಸ್ವಾತಂತ್ರದ ಅಮೃತ ಮಹೋತ್ಸವವು ಭವ್ಯ ಭಾರತ ದೇಶದ ಪ್ರಜೆಗಳಾದ ನಮಗೆಲ್ಲರಿಗೂ ಹೆಮ್ಮೆ ಹಾಗೂ ಆನಂದ ತಂದಿದೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿ ಮತ್ತು ಧೈರ್ಯವನ್ನು ಪರಿಚಯಿಸುವುದು ಸ್ವಾತಂತ್ರ್ಯ ದಿನ ಆಚರಿಸುವ ಮುಖ್ಯ ಗುರಿ.

ಸಾಂಸ್ಕೃತಿಕ ಭಿನ್ನತೆಗಳನ್ನು ಬದಿಗೊತ್ತಿ ನಿಜವಾದ ಭಾರತೀಯರಾಗಿ ಒಂದಾಗುವ ದಿನವಿದು. ಒಗ್ಗಟ್ಟಿನಿಂದ ಹೋರಾಡಿದರೆ ಜಯ ಶತಸಿದ್ಧ ಎಂದು ಮತ್ತೊಮ್ಮೆ ಒಪ್ಪಿಕೊಳ್ಳುವ ದಿನ ಇದು. ದೇಶದ ವೈವಿಧ್ಯತೆಯೇ ಹೆಮ್ಮೆ ಮತ್ತು ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ. ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ವೈವಿಧ್ಯಮಯ ಸಮಾಜದಲ್ಲಿ ಎಲ್ಲ ಧರ್ಮಗಳು ಒಟ್ಟಾಗಿ ಬದುಕುವ ದೇಶದಲ್ಲಿ ಅಮೃತ ಮಹೋತ್ಸವ ಆಚರಣೆಯು ಸಂತೋಷದಿಂದ ಕೂಡಿರಲಿದೆ. ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ಭಾರತ ಹಲವು ಹೊಸತುಗಳಿಗೆ ಸಾಧನೆಗಳಿಗೆ ಸಾಕ್ಷಿಯಾಗಿದೆ.

ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ ಅಲ್ಲಿಯವರೆಗೂ ದೇಶ, ಪ್ರಜೆಗಳು, ನಾಡು ಹಾಗೂ ಕುಟುಂಬಗಳ ಅಭಿವೃದ್ಧಿ ನಿರಂತರವಾಗಿರುತ್ತದೆ. ಇದಕ್ಕೆ ಇಂದಿನ ಭಾರತವೇ ಸಾಕ್ಷಿ. ಸ್ವಾತಂತ್ರ ಹೋರಾಟಗಾರರು ರಕ್ತ ಹರಿಸಿ ಪಡೆದ ಸ್ವಾತಂತ್ರ್ಯವನ್ನು ಕಾಪಾಡುವ ಅತ್ಯಂತ ಗಂಭೀರ ಜವಾಬ್ದಾರಿ ನಮ್ಮದಾಗಿದೆ. ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಸಮರ್ಥ ನಾಯಕರ ಆಯ್ಕೆಯಿಂದ ಹಿಡಿದು, ನಾಯಕರು ಕರ್ತವ್ಯವನ್ನು ಪಾಲಿಸುವಂತೆ ನೋಡಿಕೊಳ್ಳುವುದು ಪ್ರಜೆಗಳ ಕರ್ತವ್ಯ.

ADVERTISEMENT

ಈ ಮಹಾನ್ ದೇಶವನ್ನು ಹಾಗೂ ಸಕಲ ವೈವಿಧ್ಯತೆಗಳ ರಾಷ್ಟ್ರವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದು. ಆಗಸ್ಟ್ 15 ಕೇವಲ ಆಚರಣೆಯಾಗಬಾರದು, ಬಡತನ, ಹಸಿವು ಮತ್ತು ಗುಲಾಮಗಿರಿಯಿಂದ ಮುಕ್ತವಾಗದ ಬಡವರ ಬಗ್ಗೆಯೂ ಯೋಚಿಸಬೇಕು. ಸ್ವಾತಂತ್ರ್ಯ ಪ್ರತಿಯೊಬ್ಬ ಭಾರತೀಯನಿಗೂ ಹರ್ಷ ತರಬೇಕು. ಎಲ್ಲರೂ ಮೂಲಭೂತ ಹಕ್ಕುಗಳನ್ನು ಗಳಿಸಿ ಸ್ವಾತಂತ್ರ್ಯದ ಅನುಭವ ಪಡೆದಾಗಲೇ ಸ್ವಾತಂತ್ರ್ಯಕ್ಕೆ ಸಾರ್ಥಕ.

–ಜೆರಾಲ್ಡ್ ಲೋಬೊ, ಉಡುಪಿ ಧರ್ಮಾಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.