ಉಡುಪಿ: ಜಿಲ್ಲೆಯಾದ್ಯಂತ ಗುರುವಾರವೂ ಬಿಟ್ಟು ಬಿಟ್ಟು ಬಿರುಸಿನ ಮಳೆ ಸುರಿದಿದ್ದು, ಕೆಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಬೈಂದೂರು, ಕಾರ್ಕಳ, ಹೆಬ್ರಿ, ಬ್ರಹ್ಮಾವರ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದೆ. ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.
ಕುಂದಾಪುರ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಬಿರುಸಿನ ಮಳೆಯ ಪರಿಣಾಮವಾಗಿ ಕೆಲವೆಡೆ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಯಿತು.
ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಕಾರ್ಕಳದಲ್ಲಿ 5 ಸೆಂ.ಮೀ., ಕುಂದಾಪುರದಲ್ಲಿ 6 ಸೆಂ.ಮೀ., ಬೈಂದೂರಿನಲ್ಲಿ 5 ಸೆಂ.ಮೀ.,ಬ್ರಹ್ಮಾವರದಲ್ಲಿ 6 ಸೆಂ.ಮೀ.,ಹೆಬ್ರಿಯಲ್ಲಿ 9 ಸೆಂ.ಮೀ. ಮಳೆಯಾಗಿದೆ.
ಕುಂದಾಪುರದ ಗುಲ್ವಾಡಿ, ಬೇಲೂರಿನಲ್ಲಿ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕುಂದಾಪುರ ತಾಲ್ಲೂಕಿನ ಆನಗಳ್ಳಿ, ವಡೇರಹೋಬಳಿ, ತಲ್ಲೂರು, ಗುಲ್ವಾಡಿ, ಬಸ್ರೂರು, ಕೋಣಿ, ಶಂಕರನಾರಾಯಣ, ರಟ್ಟಾಡಿ, ಗುಜ್ಜಾಡಿ, ಯಾಡ್ಯಾಡಿ ಮತ್ಯಾಡಿಯಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಶುಕ್ರವಾರ ಮಧ್ಯಾಹ್ನದ ವರೆಗೆ ಸುರಿದ ಭಾರಿ ಮಳೆಗೆ ಉಡುಪಿ ನಗರದ ಅಂಬಲಪಾಡಿ ಬೈಪಾಸ್, ಕರಾವಳಿ ಬೈಪಾಸ್‌ನಲ್ಲಿ ಸರ್ವಿಸ್ ರಸ್ತೆಗಳ ಹೊಂಡಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಸಂಕಷ್ಟ ಅನುಭವಿಸಿದರು.
ಕಾರ್ಕಳ ವರದಿ: ತಾಲ್ಲೂಕಿನ ವಿವಿಧೆಡೆ ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಬಿರುಸು ಶನಿವಾರ ಸ್ವಲ್ಪ ಕಡಿಮೆಯಾಗಿದೆ. ಆದರೆ ಅಲ್ಲಲ್ಲಿ ಹಾನಿಯಾದ ಘಟನೆ ನಡೆದಿವೆ. ತಾಲ್ಲೂಕಿನ ಮಾಳ - ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಜರಿದು ರಸ್ತೆಗೆ ಮಣ್ಣು ಬಿದ್ದಿದೆ. ಮಣ್ಣು ತೆರವುಗೊಳಿಸಲು ತಹಶೀಲ್ದಾರ್ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತೆರವು ಕಾರ್ಯ ನಡೆದಿದೆ.
ಎರ್ಲಪಾಡಿ ಗ್ರಾಮದ ಗೋವಿಂದೂರು ಎಂಬಲ್ಲಿ ಭಾರಿ ಗಾಳಿಗೆ ಅಯ್ಯಪ್ಪನ ಗುಡಿಯ ಚಾವಣಿಗೆ ಹಾನಿಯಾಗಿದೆ. ನಲ್ಲೂರು ಗ್ರಾಮದ ಕೂಡಲಬೆಟ್ಟು ದರ್ಕಾಸು ಮನೆ ಎಂಬಲ್ಲಿ ಹರೀಶ ಪೂಜಾರಿ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ.
ಬ್ರಹ್ಮಾವರ ವರದಿ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಗಾಳಿಯೊಂದಿಗೆ ಬೀಳುತ್ತಿರುವ ಮಳೆಯಿಂದ ಅಪಾರ ಹಾನಿಯಾಗಿದೆ.
ವಾರಂಬಳ್ಳಿ, ಸಂತೆಕಟ್ಟೆ, ಕೆಂಜೂರುಗಳಲ್ಲಿ ಹಲವು ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿದೆ. ಮಳೆಯೊಂದಿಗೆ ಬೀಸುತ್ತಿರುವ ಭಾರಿ ಗಾಳಿಗೆ ಚೇರ್ಕಾಡಿ ಫೀಡರ್‌ನ ಪೇತ್ರಿ ವಿಭಾಗದಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು 30ಕ್ಕೂ ಹೆಚ್ಚು ಕಂಬಗಳು ತುಂಡಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.
ಪೇತ್ರಿ ಫೀಡರ್‌ನ ಸಹಾಯಕ ಎಂಜಿನಿಯರ್ ಜಗದೀಶ ಅವರ ನೇತೃತ್ವದಲ್ಲಿ ಮಳೆಯಲ್ಲಿಯೇ ದುರಸ್ತಿ ಕಾರ್ಯ ನಡೆಸುತ್ತಿದ್ದು, ಕೆಲವು ಕಡೆ ವಿದ್ಯುತ್ ಸರಬರಾಜು ನೀಡಲು ಶ್ರಮಿಸಿದ್ದಾರೆ.
ಪರಿಸರದಲ್ಲಿ ನದೀ ತೀರದ ತಗ್ಗು ಪ್ರದೇಶಗಳಲ್ಲಿ ನೆರೆ ಕಾಣಿಸಿಕೊಂಡಿದ್ದರೂ ಸಂಜೆಯ ಹೊತ್ತಿಗೆ ಇಳಿಮುಖವಾಗಿದೆ.
ತೀವ್ರಗೊಂಡ ಕಡಲ್ಕೊರೆತ
ಪಡುಬಿದ್ರಿ: ಕಳೆದ ಮೂರು ದಿನಗಳಿಂದ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಕಾಣಿಸಿಕೊಂಡಿರುವ ಕಡಲ್ಕೊರೆತ ಶನಿವಾರ ಇನ್ನಷ್ಟು ತೀವ್ರಗೊಂಡಿದ್ದು ಭಾಗಶಃ ಹಾನಿಯಾಗಿದೆ. ಶುಕ್ರವಾರ ಬೀಚ್‌ನಲ್ಲಿ 60 ಮೀಟರ್‌ನಷ್ಟು ಅಡಿಪಾಯಕ್ಕೆ ಹಾನಿಯಾಗಿದ್ದು ಶನಿವಾರ ಇನ್ನೂ ತೀವ್ರಗೊಂಡಿದ್ದು ಇದರಿಂದ ಮಕ್ಕಳ ಆಟದ ಪ್ರದೇಶದಲ್ಲಿ ಭಾಗಶಃ ಹಾನಿಯಗಿದೆ. ಫುಡ್ ಕೋರ್ಟ್ ಮುಂಭಾಗಲ್ಲೂ ಹಾನಿಯಾಗಿದೆ. ಬೃಹತ್ ಗಾತ್ರದ ತೆರೆಗಳು ಅಪ್ಪಳಿಸುತ್ತಿರುವ ಪರಿಣಾಮ ಪಾತ್‌ವೇಗೆ ಅಳವಡಿಸಿದ್ದ ಇಂಟರ್ ಲಾಕ್ ತೆರವುಗೊಳಿಸಲಾಗಿದೆ. ಬೀಚ್ ಪ್ರವೇಶಕ್ಕೆ ನಿಷೇಧ: ಈ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಳ್ಳುತ್ತಿರುವ ಕಾರಣ ಬೀಚ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ಬೀಚ್ ಪ್ರಬಂಧಕ ವಿಜಯ್ ಶೆಟ್ಟಿ ತಿಳಿಸಿದ್ದಾರೆ. ಪ್ರವಾಸಿಗರು ಶನಿವಾರ ವಾಹನಗಳಲ್ಲಿ ಬ್ಲೂಫ್ಲ್ಯಾಗ್ ಬೀಚ್‌ಗೆ ಬಂದಿದ್ದು ಭದ್ರತಾ ಸಿಬ್ಬಂದಿ ಅವರಿಗೆ ಬೀಚ್‌ಗೆ ತೆರಳಲು ಅವಕಾಶ ಮಾಡಿಕೊಡಲಿಲ್ಲ.
ಮನೆ ಕುಸಿದ ಸ್ಥಳಕ್ಕೆ ಶಾಸಕ ಭೇಟಿ
ಉಡುಪಿ: ವಿಧಾನಸಭಾ ಕ್ಷೇತ್ರದ ಕೆಂಜೂರು ಮತ್ತು ವಾರಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಮರ ಬಿದ್ದು ಮನೆ ಕುಸಿದಿರುವ ಸ್ಥಳಗಳಿಗೆ ಶಾಸಕ ಯಶ್‌ಪಾಲ್ ಸುವರ್ಣ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಂಜೂರು ಗ್ರಾಮದ ಗೋಪಾಲ ನಾಯ್ಕ ದಾಮೋದರ ನಾಯ್ಕ್ ಹಾಗೂ ವಾರಂಬಳ್ಳಿ ಗ್ರಾಮದ ಕಿಣಿಯರಬೆಟ್ಟುವಿನಲ್ಲಿ ಮರಬಿದ್ದು ಹಾನಿಗೀಡಾದ ಗಿರಿಜಾ ಮತ್ತು ಯಶೋಧ ಅವರ ಮನೆಗಳಿಗೆ ಭೇಟಿ ನೀಡಿ ವೈಯುಕ್ತಿಕ ನೆಲೆಯಲ್ಲಿ ಪರಿಹಾರ ನೀಡಿದರು. ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ತಕ್ಷಣ ವರದಿ ನೀಡಿ ಪ್ರಾಕೃತಿಕ ವಿಕೋಪದಡಿ ಗರಿಷ್ಠ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು. ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಬಿರ್ತಿ ಸ್ಥಳೀಯ ಮುಖಂಡರಾದ ನಿರಂಜನ್ ಶೆಟ್ಟಿ ನಿಶಾನ್ ರೈ ಆದರ್ಶ್ ಶೆಟ್ಟಿ ಕೆಂಜೂರು ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.