ADVERTISEMENT

ಉಡುಪಿ | ಜಿಲ್ಲಾಡಳಿತದ ಮುಂದೆ ಡಾನ್‌ಗಳ ಆಟ ನಡೆಯೊಲ್ಲ: ಜಿ.ಜಗದೀಶ್ ಗರಂ

ಮೊಬೈಲ್ ಕರೆ ಸಂಭಾಷಣೆ ವೈರಲ್‌ ವಿರುದ್ಧ

​ಪ್ರಜಾವಾಣಿ ವಾರ್ತೆ
Published 22 ಮೇ 2020, 13:42 IST
Last Updated 22 ಮೇ 2020, 13:42 IST
ಜಿ.ಜಗದೀಶ್
ಜಿ.ಜಗದೀಶ್   

ಉಡುಪಿ: ಕೆಲವು ಕಿಡಿಗೇಡಿಗಳು ಮಂಬೈನಲ್ಲಿ ಕುಳಿತು ಕರೆ ಮಾಡಿ ಡಾನ್‌ ರೀತಿ ಮಾತನಾಡುತ್ತಿದ್ದಾರೆ. ಜಿಲ್ಲಾಡಳಿತದ ಮುಂದೆ ಯಾವ ಡಾನ್‌ಗಳ ಆಟವೂ ನಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಕೆಲವರು ಸುಖಾಸುಮ್ಮನೆ ಕರೆ ಮಾಡಿ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಇಂತಹ ಕೃತ್ಯಗಳು ಮತ್ತೆ ಮರುಕಳಿಸಿದರೆ ಮುಲಾಜಿಲ್ಲದೆ ಜೈಲಿಗೆ ಹಾಕಲಾಗುವುದು. ಬಾಂಬೆಯಲ್ಲಿದ್ದರೂ ಅವರನ್ನು ಕರೆಸಿಕೊಳ್ಳುವುದು ಜಿಲ್ಲಾಡಳಿತಕ್ಕೆ ಗೊತ್ತಿದೆ ಎಂದರು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಮೂರು ತಿಂಗಳಿನಿಂದ ಹಗಲಿರುಳು ಶ್ರಮಿಸುತ್ತಿದೆ. ಆದರೂ, ಜಿಲ್ಲಾಧಿಕಾರಿ, ಎಸ್‌ಪಿ, ಎಸಿ, ಎಂಪಿ ಎಂಎಲ್‌ಎಗಳಿಗೆ ನಿಂಧಿಸುತ್ತಿದ್ದು, ಸುಮ್ಮನಿರಲು ಸಾಧ್ಯವಿಲ್ಲ. ಎಷ್ಟೆ ದೊಡ್ಡ ವ್ಯಕ್ತಿಯಾದರೂ ಜೈಲಿಗೆ ಹಾಕುತ್ತೇನೆ’ ಎಂದು ಖಡಕ್ ಎಚ್ಚರಿಕೆ ನೀಡಿದರು.

ADVERTISEMENT

ಕೊರೊನಾ ವಿರುದ್ಧದ ಸಮರ ನಿರಂತರವಾಗಿ ಮುಂದುವರಿಯಲಿದೆ. ಇನ್ನೂ 500 ಪ್ರಕರಣಗಳಾದರೂ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಶಕ್ತವಾಗಿದೆ. ಆರೋಗ್ಯಕರ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು. ಆದರೆ, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

ಊಟ ತಿಂಡಿ ಕಳಿಸಬೇಡಿ:ಕ್ವಾರಂಟೈನ್‌ನಲ್ಲಿದ್ದವರಿಗೆ ಮನೆಯಿಂದ ಊಟ, ತಿಂಡಿ, ಬಟ್ಟೆ ಕಳಿಸುವಂತಿಲ್ಲ. ನೀವು ಕಳಿಸುವ ವಸ್ತುಗಳಿಂದಲೇ ನಿಮ್ಮ ಮನೆಗೆ ಕೊರೊನಾ ಸೋಂಕು ತಲುಪುತ್ತದೆ ಎಂಬ ಅರಿವಿರಲಿ. ಜಿಲ್ಲೆಯ ಜನರ ಹಿತದೃಷ್ಟಿಯಿಂದ ಯಾರೂ ಇಂತಹ ಕೆಲಸಕ್ಕೆ ಕೈಹಾಕಬಾರದು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಕ್ವಾರಂಟೈನ್‌ನಲ್ಲಿದ್ದವರಿಗೆ ಊಟ, ತಿಂಡಿ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡುವುದು ಜಿಲ್ಲಾಡಳಿತ ಕರ್ತವ್ಯ. ಇದರಲ್ಲಿ ಅನ್ಯರು ಮೂಗು ತೂರಿಸುವುದು ಬೇಡ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.