ADVERTISEMENT

ಸೋಂಕಿತರಿಗೆ ಧೈರ್ಯ ತುಂಬಿದ ಡಿಸಿ

ನಿಯಮ ಉಲ್ಲಂಘಿಸಿ ರಸ್ತೆಗಿಳಿಸಿದ ವಾಹನಗಳ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 19 ಮೇ 2021, 16:33 IST
Last Updated 19 ಮೇ 2021, 16:33 IST
ಬುಧವಾರ ಜಿಲ್ಲಾಧಿಕಾರಿ ಜಿ.ಜಗದೀಶ್‌ ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳಿಗೆ ತೆರಳಿ ಸೋಂಕಿತರಿಗೆ ಧೈರ್ಯ ತುಂಬಿದರು.
ಬುಧವಾರ ಜಿಲ್ಲಾಧಿಕಾರಿ ಜಿ.ಜಗದೀಶ್‌ ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳಿಗೆ ತೆರಳಿ ಸೋಂಕಿತರಿಗೆ ಧೈರ್ಯ ತುಂಬಿದರು.   

ಉಡುಪಿ: ಕೋವಿಡ್‌ ಎರಡನೇ ಅಲೆ ನಗರಗಳು ಸೇರಿದಂತೆ ಗ್ರಾಮಗಳಿಗೂ ದಾಂಗುಡಿ ಇಟ್ಟಿದ್ದು ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೋಂಕಿತರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಕೈಹಾಕಿದೆ.

ಬುಧವಾರ ಜಿಲ್ಲಾಧಿಕಾರಿ ಜಿ.ಜಗದೀಶ್‌, ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳಿಗೆ ತೆರಳಿ ಸೋಂಕಿತರಿಗೆ ಧೈರ್ಯ ತುಂಬಿದರು. ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಲು ವ್ಯವಸ್ಥೆ ಇದೆಯೇ, ಔಷಧ ಸೇರಿದಂತೆ ಅಗತ್ಯ ವಸ್ತುಗಳು ಸಮಸ್ಯೆ ಎದುರಾಗಿದೆಯೇ ಎಂಬ ಮಾಹಿತಿ ಕಲೆ ಹಾಕಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದ್ದರು.

ವಾಹನ ಮುಟ್ಟುಗೋಲು:

ADVERTISEMENT

ಕೋವಿಡ್‌ ಎರಡನೇ ಅಲೆಯ ತಡೆಗೆ ಕಠಿಣ ಲಾಕ್‌ಡೌನ್ ಜಾರಿಗೊಳಿಸಿದ್ದರೂ ಅನಗತ್ಯವಾಗಿ ನಗರದಲ್ಲಿ ಓಡಾಡುತ್ತಿದ್ದವರಿಗೆ ಜಿಲ್ಲಾಧಿಕಾರಿ ಮತ್ತೆ ಬಿಸಿ ಮುಟ್ಟಿಸಿದರು.

ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದ್ದರೂ ನಿಯಮ ಉಲ್ಲಂಘಿಸಿ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಇದೇವೇಳೆ ಲಾಕ್‌ಡೌನ್ ಜಾರಿಯಾದ ಬಳಿಕವೂ ಅನಗತ್ಯವಾಗಿ ಸಂಚರಿಸುತ್ತಿದ್ದ ಬೈಕ್‌ಗಳನ್ನು ಮುಟ್ಟುಗೋಲು ಹಾಕಿಕೊಂಡರು.

ಬಳಿಕ ಮಲ್ಪೆಗೆ ತೆರಳಿದ ಜಿಲ್ಲಾಧಿಕಾರಿ ಬೈಕ್‌ ಸವಾರರನ್ನು ಅಡ್ಡಗಟ್ಟಿ ಎಚ್ಚರಿಕೆ ನೀಡಿದರು. ಅಗತ್ಯ ವಸ್ತುಗಳನ್ನು ಖರೀದಿಸಲು ನಗರಗಳಿಗೆ ಬರಬೇಕಿಲ್ಲ. ಮನೆಯ ಸುತ್ತಮುತ್ತಲಿರುವ ಅಂಗಡಿಗಳಲ್ಲಿ ದಿನಸಿ ಖರೀದಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಸ್ತೆಗಿಳಿದ ಅಧಿಕಾರಿಗಳು:

ಹೆಚ್ಚುವರಿ ಜಿಲ್ಲಾಧಿಕಾರಿ, ಕುಂದಾಪುರ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ಗಳು, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪೊಲೀಸರು ಕೂಡ ರಸ್ತೆಗಿಳಿದು ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಂಡರು.

ಜಿಲ್ಲೆಯಾದ್ಯಂತ ತ್ರಿಚಕ್ರ, ದ್ವಿಚಕ್ರ ಹಾಗೂ ಕಾರುಗಳು ಸೇರಿದಂತೆ 94 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಮಾರ್ಗಸೂಚಿ ಉಲ್ಲಂಘಿಸಿ ತೆರೆದಿದ್ದ ಅಂಗಡಿಗಳಿಗೆ ಎಚ್ಚರಿಕೆ ನೀಡಿ ಮುಚ್ಚಿಸಲಾಯಿತು. ₹ 70,000 ದಂಡ ವಸೂಲಿ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.