ADVERTISEMENT

ಉಡುಪಿ | ಹದಗೆಟ್ಟ ರಸ್ತೆ: ಸಂಚಾರ ಸಂಕಷ್ಟ

ರಸ್ತೆಯಲ್ಲಿ ಬೃಹತ್‌ ಹೊಂಡಗಳು: ವಾಹನಗಳ ಸುಗಮ ಸಂಚಾರಕ್ಕೆ ತೊಡಕು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:24 IST
Last Updated 10 ಸೆಪ್ಟೆಂಬರ್ 2025, 7:24 IST
ಡಯಾನ –ಕುಕ್ಕಿಕಟ್ಟೆ ಮುಖ್ಯರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿರುವುದು
ಡಯಾನ –ಕುಕ್ಕಿಕಟ್ಟೆ ಮುಖ್ಯರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿರುವುದು   

ಉಡುಪಿ: ನಗರದ ಡಯಾನ –ಕುಕ್ಕಿಕಟ್ಟೆ ಮುಖ್ಯರಸ್ತೆಯು ವಿವಿಧೆಡೆ ಹದಗೆಟ್ಟಿದ್ದು, ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದ್ದು, ಬೃಹತ್‌ ಹೊಂಡಗಳು ನಿರ್ಮಾಣವಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗುತ್ತಿದೆ.

ರಸ್ತೆ ಹದಗೆಟ್ಟಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಈ ರಸ್ತೆಯಲ್ಲಿ ದಿನನಿತ್ಯ ಶಾಲಾ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆಯ ಡಾಂಬರು ಕಿತ್ತು ಹೋಗಿರುವುದರಿಂದ ಕೆಲವೆಡೆ ವಾಹನಗಳು ತೆವಳಿಕೊಂಡು ಹೋಗಬೇಕಾದ ಸ್ಥಿತಿ ಇದೆ.

ADVERTISEMENT

ರಸ್ತೆ ಹೊಂಡದಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವ ಸಾಧ್ಯತೆಯೂ ಇದೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೆ ಈ ರಸ್ತೆಯನ್ನು ದುರಸ್ತಿಗೊಳಿಸಲಾಗಿತ್ತು, ಈಗ ಮತ್ತೆ ಹದಗೆಟ್ಟಿದೆ. ಸಂಬಂಧಪಟ್ಟವರು ಹೊಂಡಗಳಿಗೆ ರೆಡಿ ಮಿಕ್ಸ್‌ ತುಂಬಿಸಿದರೂ ಒಂದೆರಡು ದಿನಗಳಲ್ಲೇ ಅದು ಕಿತ್ತು ಹೋಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಡಯಾನ ಟಾಕೀಸ್‌, ರೈಲ್ವೆ ಮೇಲ್ಸೇತುವೆ, ಮುಚ್ಲುಕೋಡು ದೇವಸ್ಥಾನದ ಬಳಿ ಈ ರಸ್ತೆಯು ತೀರಾ ಹದಗೆಟ್ಟಿದ್ದು, ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೇಸಿಗೆಯಲ್ಲಿ ಸುಮ್ಮನಿದ್ದು, ಮಳೆ ಆರಂಭವಾಗುವ ಸಂದರ್ಭದಲ್ಲಿ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗುತ್ತಿರುವ ಕಾರಣ ನಗರದ ಹಲವು ರಸ್ತೆಗಳು ಕೆಲವೇ ತಿಂಗಳುಗಳಲ್ಲಿ ಹೊಂಡ ಬೀಳುತ್ತವೆ. ಸಂಬಂಧಪಟ್ಟವರು ಗುಣಮಟ್ಟದ ಡಾಂಬರೀಕರಣಕ್ಕೆ ಆದ್ಯತೆ ನೀಡಬೇಕು ಎಂದೂ ತಿಳಿಸಿದ್ದಾರೆ.

ಡಯಾನ –ಕುಕ್ಕಿಕಟ್ಟೆ ರಸ್ತೆಯ ವಿವಿಧೆಡೆ ಹೊಂಡಗಳು ನಿರ್ಮಾಣವಾಗಿರುವುದರಿಂದ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ
ಪರಮೇಶ್ವರ್‌ ಸ್ಥಳೀಯ ನಿವಾಸಿ

‘ಶೀಘ್ರ ರಸ್ತೆ ದುರಸ್ತಿ’

‘ಡಯಾನ –ಕುಕ್ಕಿಕಟ್ಟೆ ರಸ್ತೆಯ 4.6 ಕಿ.ಮೀ. ರಸ್ತೆಯನ್ನು ಸಿಆರ್‌ಎಫ್‌ ಅನುದಾನದಿಂದ ದುರಸ್ತಿ ಮಾಡಲಾಗಿದೆ. ಮಳೆಗೆ ಹೊಂಡ ಬಿದ್ದಲ್ಲಿಗೆ ರೆಡಿಮಿಕ್ಸ್‌ ತುಂಬಿಸುವ ಕೆಲಸ ನಡೆದಿದೆ. ಮಳೆ ಕಡಿಮೆಯಾದ ಕೂಡಲೇ ರಸ್ತೆ ಎಲ್ಲೆಲ್ಲ ಹದಗೆಟ್ಟಿದೆಯೋ ಅಲ್ಲಿಗೆ ಡಾಂಬರು ಹಾಕಿ ದುರಸ್ತಿ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಸನ್ನ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.