ಉಡುಪಿಯ ವಾದಿರಾಜ ರಸ್ತೆಯ ಪಾಳುಬಿದ್ದ ಕಟ್ಟಡವೊಂದರ ತಳಮಹಡಿಯಲ್ಲಿ ಮಳೆ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ ತಾಣವಾಗಿದೆ
ಚಿತ್ರ ಉಮೇಶ್ ಮಾರ್ಪಳ್ಳಿ
ಉಡುಪಿ: ಅವಧಿಗಿಂತ ಮುನ್ನವೇ ಮಳೆಗಾಲ ಆರಂಭವಾಗಿ ಇಳೆ ತಂಪಾಗಿದೆ. ಜೊತೆಗೆ ಮಳೆಗಾಲದಲ್ಲಿ ಕಂಡು ಬರುವ ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಾಗಿದೆ.
ಪ್ರತಿ ಮಳೆಗಾಲ ಆರಂಭವಾದಾಗ ಡೆಂಗಿ, ಮಲೆರಿಯ, ವಾಂತಿ– ಭೇದಿ, ಇಲಿಜ್ವರ ಮೊದಲಾದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಬಾರಿ ಈಗಾಗಲೇ ಮಳೆ, ಬಿಸಿಲಿನ ವಾತಾವರಣವಿರುವುದರಿಂದ ಸೊಳ್ಳೆಗಳ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಆತಂಕವೂ ಎದುರಾಗಿದೆ.
ಕೋವಿಡ್ ಸೋಂಕು ಮತ್ತೆ ಕಾಣಿಸಿಕೊಂಡಿದ್ದು, ಈಗಾಗಲೇ ರಾಜ್ಯದಲ್ಲೂ ಹಲವರಿಗೆ ಸೋಂಕು ತಗುಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವ ಅಗತ್ಯ ಇದೆ ಎನ್ನುತ್ತಾರೆ ಜನರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಲರಾ ಪ್ರಕರಣಗಳು ಕೂಡ ಜಿಲ್ಲೆಯಲ್ಲಿ ವರದಿಯಾಗಿದ್ದವು. ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದವರಲ್ಲಿ ರೋಗವು ಕಾಣಿಸಿಕೊಂಡಿತ್ತು. ಆದರೆ ಕೆಲವೇ ದಿನಗಳಲ್ಲಿ ಅದು ನಿಯಂತ್ರಣಕ್ಕೂ ಬಂದಿತ್ತು.
ಕಳೆದ ಹತ್ತು ವರ್ಷಗಳ ದತ್ತಾಂಶಗಳನ್ನು ಗಮನಿಸಿದರೆ ಸಾವಿರದ ಮೇಲೆ ಇದ್ದ ಮಲೆರಿಯ ಪ್ರಕರಣ ಈಗ ಬೆರಳೆಣಿಕೆಗೆ ತಲುಪಿದೆ. ಆದರೆ ಡೆಂಗಿ ಪ್ರಕರಣ ಪ್ರತಿವರ್ಷ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿರುವುದು ಕಂಡು ಬರುತ್ತಿದೆ.
ಜಿಲ್ಲೆಗೆ ಹೆಚ್ಚಾಗಿ ಬೇರೆ ರಾಜ್ಯ, ಜಿಲ್ಲೆಗಳಿಂದ ವಲಸೆ ಕಾರ್ಮಿಕರೂ ಬರುತ್ತಿರುವುದರಿಂದ ಅವರ ಆರೋಗ್ಯ ತಪಾಸಣೆಗೂ ಸಂಬಂಧಪಟ್ಟವರು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು, ಅದರಿಂದ ಬೇರೆ ಕಡೆಯಿಂದ ಸಾಂಕ್ರಾಮಿಕ ರೋಗಗಳು ಇಲ್ಲಿಗೆ ಬರುವುದನ್ನು ತಡೆಗಟ್ಟಬಹುದು ಎಂಬುದು ಜನರ ಅಭಿಪ್ರಾಯವಾಗಿದೆ.
ಸ್ವಚ್ಛತೆ ಕೊರತೆಯೇ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದ್ದು, ನಗರದ ಹಲವೆಡೆ ಕಸ ವಿಲೇವಾರಿ ಸರಿಯಾಗಿ ನಡೆಯದ ಕಾರಣ ಆ ಪ್ರದೇಶಗಳು ರೋಗಕಾರಕ ಸ್ಥಳವಾಗಿ ಮಾರ್ಪಾಡಾಗಿವೆ. ಸಾರ್ವಜನಿಕರು ರಸ್ತೆ ಬದಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಿದು ಹೋಗುತ್ತಿದ್ದಾರೆ. ಅವುಗಳನ್ನು ತೆರವುಗೊಳಿಸದ ಕಾರಣ ಅವುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿವೆ.
ಕೆಲವು ಅಂಗಡಿಯವರು ಎಳನೀರು ಚಿಪ್ಪನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಅದರಲ್ಲೂ ನೀರು ಸಂಗ್ರಹಗೊಂಡು ಸೊಳ್ಳೆಗಳ ಹುಟ್ಟಿಗೆ ಕಾರಣವಾಗುತ್ತಿವೆ. ನಗರದ ಕಿನ್ನಿಮುಲ್ಕಿ ಸರ್ವಿಸ್ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಯೇ ತುಂಬಿಕೊಂಡಿದೆ. ಹಲವು ತಿಂಗಳುಗಳಿಂದ ರಸ್ತೆ ಬದಿಯಲ್ಲಿ ಕೆಲವರು ಕಸ ಎಸೆಯುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ನಗರದ ಸಿಟಿ ಬಸ್ ನಿಲ್ದಾಣ ಪರಿಸರದಲ್ಲೂ ಅಲ್ಲಲ್ಲಿ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗ ಆಹ್ವಾನಿಸುತ್ತಿದೆ. ಕೆಲವೆಡೆ ತೆರೆದ ಚರಂಡಿಗಳು ಕೂಡ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ.
ಜನರು ಚರಂಡಿಗೆ ಕಸ ತಂದು ಸುರಿಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದರಿಂದ ಚರಂಡಿಗಳು ಕಟ್ಟಿನಿಂತು ಗಬ್ಬು ನಾರುತ್ತಿವೆ ಎನ್ನುತ್ತಾರೆ ನಗರವಾಸಿಗಳು.
ನಗರದ ವಿವಿಧೆಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಜೋರಾಗಿ ಮಳೆ ಬಂದಾಗ ಮಳೆ ನೀರು ಚರಂಡಿಯ ನೀರಿನೊಂದಿಗೆ ಸೇರಿ ಸಮೀಪದ ಬಾವಿಗಳು ಕಲುಷಿತವಾಗುತ್ತಿವೆ.
ನಗರ ವ್ಯಾಪ್ತಿಯಲ್ಲಿರುವ ಇಂದ್ರಾಣಿ ನದಿಯಲ್ಲಿ ತ್ಯಾಜ್ಯ, ಕೊಳಚೆ ತುಂಬಿದ್ದು, ಜೋರಾಗಿ ಮಳೆ ಬರುವಾಗ ಈ ನದಿಯು ಉಕ್ಕಿ ಹರಿದು ಬಾವಿಗಳು ಕಲುಷಿತವಾಗುತ್ತಿವೆ ಎಂದು ಸಾರ್ವಜನಕರು ದೂರುತ್ತಾರೆ. ನಿಟ್ಟೂರು ಪ್ರದೇಶದಲ್ಲೂ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮಳೆನೀರಿನೊಂದಿಗೆ ಕೊಳಚೆ ನೀರೂ ಸೇರಿ ಎಲ್ಲೆಂದರಲ್ಲಿ ಹರಿಯುತ್ತಿದೆ.
ಸಂಬಂಧಪಟ್ಟವರು ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಮತ್ತು ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನಗರ ವ್ಯಾಪ್ತಿಯ ಬಿಲ್ಡರ್‌ಗಳ ಸಭೆ ನಡೆಸಿ ಅವರಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವಂತೆ ಸೂಚಿಸಲಾಗಿದೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆಪ್ರಭಾಕರ ಪೂಜಾರಿ ನಗರಸಭೆ ಅಧ್ಯಕ್ಷ
ಜಿಲ್ಲೆಯಲ್ಲಿ ಕೋವಿಡ್‌ನ ಸಕ್ರಿಯ ಪ್ರಕರಣಗಳಿಲ್ಲ. ಉಸಿರಾಟ ಸಂಬಂಧಿ ಸಮಸ್ಯೆ ಕಾಣಿಸಿಕೊಂಡವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆಡಾ.ನಾಗರತ್ನಾ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ
ಸಾಂಕ್ರಾಮಿಕ ರೋಗಗಳ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಆಶಾ ಕಾರ್ಯಕರ್ತೆಯರು ಸಮೀಕ್ಷೆ ಮಾಡುತ್ತಿದ್ದಾರೆ. ಮನೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಾರ್ವಜನಿಕರಿಗೆ ಮನದಟ್ಟು ಮಾಡಲಾಗುತ್ತಿದೆಡಾ. ಬಸವರಾಜ ಹುಬ್ಬಳ್ಳಿ ಜಿಲ್ಲಾ ಆರೋಗ್ಯಾಧಿಕಾರಿ
‘ವಲಸೆ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ’
ಈ ವರ್ಷದ ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 100 ಡೆಂಗಿ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 50 ಮಂದಿ ಹೊರಗಿನಿಂದ ಇಲ್ಲಿಗೆ ಬಂದವರಾದರೆ ಉಳಿದ 50 ಮಂದಿ ಇಲ್ಲಿನವರು. ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 11 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಹೊರಗಿನಿಂದ ಇಲ್ಲಿಗೆ ಬಂದವರಲ್ಲಿ ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಇಲ್ಲಿಗೆ ಬರುವ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.