
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಅದ್ಧೂರಿ ಚೂರ್ಣೋತ್ಸವ (ಹಗಲು ತೇರು) ಗುರುವಾರ ನೆರವೇರಿತು. ರಥಬೀದಿಯಲ್ಲಿ ಸೇರಿದ್ಧ ನೂರಾರು ಭಕ್ತರು ರಥ ಎಳೆದು ಭಕ್ತಿ ಮೆರೆದರು.
ಕೃಷ್ಣನ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿ ಇರಿಸಲಾಯಿತು. ಬಳಿಕ ದೇವರಿಗೆ ಪೂಜೆ, ನೈವೇದ್ಯ ಸಮರ್ಪಿಸಿ ಮಹಾ ಮಂಗಳಾರತಿ ನೇರವೇರಿಸಿದ ನಂತರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಚಂಡೆ, ಮಂಗಳವಾದ್ಯ, ವೇದ ಘೋಷಗಳೊಂದಿಗೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರು ರಥದ ಮೆಟ್ಟಿಲಲ್ಲಿ ನಿಂತು ಪ್ರಸಾದವನ್ನು ಜನರತ್ತ ತೂರಿದರು. ಪ್ರಸಾದಕ್ಕಾಗಿ ಭಕ್ತರು ಮುಗಿಬಿದ್ದರು.
ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಬ್ರಹ್ಮ ರಥೋತ್ಸವ ಸಮಯದಲ್ಲಿ ಭಕ್ತರು ಉರುಳು ಸೇವೆ ನಡೆಸಿದರು.
ಬ್ರಹ್ಮರಥವು ರಥಬೀದಿಯಲ್ಲಿ ಒಂದು ಸುತ್ತು ಬಂದ ಬಳಿಕ ಮಧ್ವ ಸರೋವರದಲ್ಲಿ ಕೃಷ್ಣ ಮುಖ್ಯಪ್ರಾಣ, ಉತ್ಸವ ಮೂರ್ತಿಗೆ ಅವಭೃತ ಸ್ನಾನ ನೆರವೇರಿಸಲಾಯಿತು. ರಥೋತ್ಸವದ ಬಳಿಕ ಓಲಪೂಜೆ, ಪಲ್ಲಪೂಜೆ ನಡೆಯಿತು. ಬಳಿಕ ಭಕ್ತರಿಗೆ ಅನ್ನಸಂತಪರ್ಣೆ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.