ADVERTISEMENT

ಉಡುಪಿ | ಜಾನುವಾರು ಮೇಲೆ ಚಿರತೆ ದಾಳಿ ಹೆಚ್ಚಳ

ಈ ವರ್ಷ ₹10 ಲಕ್ಷ ಪರಿಹಾರ ಪಾವತಿಸಿದ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 6:52 IST
Last Updated 8 ಅಕ್ಟೋಬರ್ 2024, 6:52 IST
 ಹೆಬ್ರಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದ ಚಿರತೆ
 ಹೆಬ್ರಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದ ಚಿರತೆ   

ಉಡುಪಿ: ನಗರೀಕರಣ ಹೆಚ್ಚುತ್ತಿದ್ದಂತೆ ಮಾನವ–ವನ್ಯ ಜೀವಿಗಳ ಸಂಘರ್ಷವೂ ಹೆಚ್ಚುತ್ತಿದೆ. ತಮ್ಮ ಆವಾಸ ಸ್ಥಾನಗಳಿಗೆ ಧಕ್ಕೆಯಾದಾಗ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಮುಖಮಾಡುತ್ತವೆ.

ಜಿಲ್ಲೆಯ ಅರಣ್ಯ ಪ್ರದೇಶಗಳ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ಚಿರತೆಗಳ ದಾಳಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಚಿರತೆಯಿಂದಾಗಿ ಜಾನುವಾರು ಕಳೆದುಕೊಂಡವರಿಗೆ ಅರಣ್ಯ ಇಲಾಖೆ ಪರಿಹಾರವನ್ನೂ ಕೂಡ ನೀಡುತ್ತಿದೆ.

ಜಿಲ್ಲೆಯಲ್ಲಿ ಕುಂದಾಪುರ ವ್ಯಾಪ್ತಿಯು ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದ್ದು, ಅಲ್ಲಿ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ಅಧಿಕವಾಗಿವೆ.

ADVERTISEMENT

ಉಡುಪಿ ಜಿಲ್ಲೆಯ ಅರಣ್ಯದಂಚಿನ ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಡುಹಂದಿ, ಕಾಡು ಕೋಣ ಮತ್ತು ಚಿರತೆಗಳು ಮುಖ್ಯವಾಗಿ ಕಾಣಿಸಿಕೊಳ್ಳುತ್ತವೆ. ಜನವಸತಿ ಪ್ರದೇಶಗಳಿಗೆ ಅಪರೂಪಕ್ಕೆ ಚಿರತೆಗಳು ಬರುತ್ತಿದ್ದವು. ಆದರೆ ಈಚೆಗೆ ಮಣಿಪಾಲದಂತಹ ನಗರ ಪ್ರದೇಶಗಳಿಗೂ ಚಿರತೆ ಬಂದಿರುವುದು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿತ್ತು.

ಮಣಿಪಾಲದ ಎಂಡ್‌ ಪಾಯಿಂಟ್‌ ಸಮೀಪ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನನ್ನೂ ಇರಿಸಿದ್ದರು. ಆದರೆ ಚಿರತೆ ಮಾತ್ರ ಬೋನಿಗೆ ಬಿದ್ದಿರಲಿಲ್ಲ. ಹೆಬ್ರಿ, ಕಾರ್ಕಳ ಮೊದಲಾದ ಕಡೆಗಳಲ್ಲೂ ಚಿರತೆಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ, ಆಹಾರದ ಕೊರತೆಯಿಂದಾಗಿ ವನ್ಯಜೀವಿಗಳು ಮಾನವರು ವಾಸಿಸುವ ಪ್ರದೇಶಕ್ಕೆ ಬರುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಆಹಾರ ಅರಸಿ ಬರುವ ಪ್ರಾಣಿಗಳು ಬಾವಿ, ಕೆರೆಗಳಿಗೂ ಕೆಲವೊಮ್ಮೆ ಬೀಳುತ್ತವೆ. ಅವುಗಳನ್ನು ಅರಣ್ಯ ಇಲಾಖೆಯವರು ರಕ್ಷಣೆ ಮಾಡಿ ಕಾಡಿಗೆ ಬಿಡುವ ಪ್ರಕರಣಗಳು ಜಿಲ್ಲೆಯಲ್ಲಿ ಸಾಕಷ್ಟು ನಡೆಯುತ್ತಿವೆ.

ಕಾಡು ಹಂದಿ, ಮುಳ್ಳು ಹಂದಿ, ಬರ್ಕೆ ಇವುಗಳು ಚಿರತೆಗಳು ಬೇಟೆಯಾಡುವ ಪ್ರಾಣಿಗಳು. ಅವುಗಳ ಸಂಖ್ಯೆ ಕಡಿಮೆಯಾದಂತೆ ಚಿರತೆಗಳಿಗೆ ಆಹಾರ ಕೊರತೆ ಕಾಡುತ್ತದೆ. ಆಗ ನಾಯಿಗಳನ್ನು ಸುಲಭವಾಗಿ ಹಿಡಿಯಬಹುದಾದ ಕಾರಣ ಅವುಗಳನ್ನು ಹಿಡಿಯಲು ಚಿರತೆಗಳು ನಗರ ಪ್ರದೇಶಗಳತ್ತ ಬರುತ್ತಿವೆ ಎನ್ನುತ್ತಾರೆ ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ.

ಕಾಡು ಕೋಣಗಳು ಕೂಡ ನಾಡಿಗೆ ಬಂದು ಭತ್ತದ ಕೃಷಿಗೆ ಹಾನಿಯುಂಟು ಮಾಡುತ್ತವೆ. ಕೃಷಿ ನಾಶವಾದವರಿಗೂ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಚಿರತೆಗಳು ಜನವಾಸ ಪ್ರದೇಶಗಳಲ್ಲಿ ಕಾಣಿಸಿಕೊಂಡರೂ ಅವುಗಳು ಹೆಚ್ಚು ಅಪಾಯಕಾರಿಗಳಲ್ಲಿ, ಚಿರತೆಗಳು ಹುಲಿಗಳಂತೆ ಹೊಂಚು ಹಾಕಿ ಮನುಷ್ಯರ ಮೇಲೆ ದಾಳಿ ನಡೆಸುವುದಿಲ್ಲ ಎಂದೂ ಅವರು ಹೇಳುತ್ತಾರೆ.

ಇಂದು ವನ್ಯಜೀವಿಗಳ ಆವಾಸ ಸ್ಥಾನಗಳಿಗೆ ಧಕ್ಕೆ ಉಂಟಾಗಿದೆ. ಈ ಕಾರಣಕ್ಕೆ ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತವೆ. ಮುಖ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಚಿರತೆಗಳು ಹೆಚ್ಚಾಗಿ ಕಂಡುಬರುತ್ತವೆ. ಇವುಗಳು ಸಣ್ಣ ಪ್ರಾಣಿಗಳನ್ನು ಬೇಟೆಯಾಡಿ ಬದುಕುವವು. ಆದರೆ ಮನುಷ್ಯನಿಂದಾಗಿ ಇಂತಹ ಸಣ್ಣ ಪ್ರಾಣಿಗಳ ಸಂಖ್ಯೆಯೇ ಕಡಿಮೆಯಾಗಿದೆ ಎನ್ನುತ್ತಾರೆ ಜೀವವಿಜ್ಞಾನಿ ಎನ್.ಎ.ಮಧ್ಯಸ್ಥ.

ಜಿಲ್ಲೆಯಲ್ಲಿ ಚಿರತೆಯಿಂದ ಉಂಟಾದ ಹಾನಿವರ್ಷ;ಜಾನುವಾರು ಹತ್ಯೆ;ಪಾವತಿಸಿದ ಮೊತ್ತ (₹ ಲಕ್ಷಗಳಲ್ಲಿ)2020–21;59;4.82 2021–22;58;5.07 2022–23;66;8.29 2023–24;71;9.63 2024–25;50;10.03 ಜಿಲ್ಲೆಯಲ್ಲಿ ಚಿರತೆ ರಕ್ಷಿಸಿದ ಪ್ರಕರಣ2022–23;142023–24;92024–25(ಇದುವರೆಗೆ);8

ಚಿರತೆ ದಾಳಿಯಿಂದ ಜಾನುವಾರು ಕಳೆದುಕೊಂಡವರಿಗೆ ತಲಾ ₹30 ಸಾವಿರದಂತೆ ಪರಿಹಾರವನ್ನು ಅರಣ್ಯ ಇಲಾಖೆಯಿಂದ ನೀಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದೆ

–ಗಣಪತಿ ಕೆ ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ

ರೆಸಾರ್ಟ್‌ ಸಂಸ್ಕೃತಿ ಆರಂಭವಾದ ಬಳಿಕ ಕಾಡು ನಾಶವಾಗಿ ವನ್ಯಜೀವಿಗಳ ಬದುಕಿಗೆ ಅಪಾಯ ಎದುರಾಗಿದೆ. ಈ ಕಾರಣಕ್ಕೆ ಅವುಗಳಿಗೆ ದಿಕ್ಕು ತಪ್ಪಿದಂತಾಗಿದೆ

–ಎನ್‌.ಎ.ಮಧ್ಯಸ್ಥ ಜೀವವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.