ಉಡುಪಿ: ನಗರದ ಜ್ಯುವೆಲ್ಲರಿ ವರ್ಕ್‌ಶಾಪ್‌ನಿಂದ ಲಕ್ಷಾಂತರ ಮೌಲ್ಯದ ಚಿನ್ನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಐವರು ಅಂತರರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದ ಶುಭಂ ತಾನಾಜಿ ಸಾಥೆ (25), ಪ್ರವೀಣ ಅಪ್ಪ ಸಾಥೆ (23), ನಿಲೇಶ ಬಾಪು ಕಸ್ತೂರಿ (19), ಸಾಗರ ದತ್ತಾತ್ರೇಯ ಕಂಡಗಾಲೆ (32), ಬಾಗವ ರೋಹಿತ್ ಶ್ರೀಮಂತ್(25) ಬಂಧಿತ ಆರೋಪಿಗಳು.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನಿಮ್‌ಗಾಂವ್ ಎಂಬಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹74 ಲಕ್ಷ ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಉಡುಪಿಯ ವಾದಿರಾಜ ಮಾರ್ಗದ ಜ್ಯುವೆಲ್ಲರಿ ವರ್ಕ್‌ಶಾಪ್‌ನ ಶಟರ್ ಅನ್ನು ನಕಲಿ ಕೀ ಬಳಸಿ ತೆರೆದಿದ್ದ ಕಳ್ಳರು, ರಿಫೈನರಿ ಮೆಷಿನ್‌ನಲ್ಲಿ ಇಟ್ಟಿದ್ದ ಸುಮಾರು ₹95 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ವಿ.ಬಡಿಗೇರ ನೇತೃತ್ವದಲ್ಲಿ ಪಿಎಸ್‌ಐ ಭರತೇಶ ಕಂಕಣವಾಡಿ, ಕಾಪು ಠಾಣಾ ಪಿಎಸ್‌ಐ ತೇಜಸ್ವಿ ಟಿ.ಐ., ಕೊಲ್ಲೂರು ಠಾಣಾ ಪಿಎಸ್‌ಐ ವಿನಯಕುಮಾರ್ ಕೆ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.