ADVERTISEMENT

ರಾಷ್ಟ್ರ ರಾಜಧಾನಿ ತಲುಪಿದ ಉಡುಪಿ ಕಲ್ಪರಸ ಬೆಲ್ಲ

ಹಣಕಾಸು ಸಚಿವಾಲಯದಿಂದ ಗಣ್ಯರಿಗೆ ವಿತರಿಸಲು 500 ಬಾಟಲಿ ಖರೀದಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 20:07 IST
Last Updated 2 ನವೆಂಬರ್ 2023, 20:07 IST
ಉಡುಪಿ ಕಲ್ಪರಸ ಕೋಕೊನಟ್ ಅಂಡ್‌ ಆಲ್ ಸ್ಪೈಸಸ್ ಪ್ರೊಡ್ಯುಸರ್ಸ್‌ ರೈತ ಉತ್ಪಾದಕ ಸಂಸ್ಥೆಯಿಂದ ತಯಾರಿಸಿದ ತೆಂಗಿನ ರಸದ ಬೆಲ್ಲ
ಉಡುಪಿ ಕಲ್ಪರಸ ಕೋಕೊನಟ್ ಅಂಡ್‌ ಆಲ್ ಸ್ಪೈಸಸ್ ಪ್ರೊಡ್ಯುಸರ್ಸ್‌ ರೈತ ಉತ್ಪಾದಕ ಸಂಸ್ಥೆಯಿಂದ ತಯಾರಿಸಿದ ತೆಂಗಿನ ರಸದ ಬೆಲ್ಲ   

ಉಡುಪಿ: ತೆಂಗು ಬೆಳೆಗಾರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಕುಂದಾಪುರ ತಾಲ್ಲೂಕಿನ ಜಪ್ತಿಯಲ್ಲಿ ಆರಂಭಿಸಲಾಗಿರುವ ಕಲ್ಪರಸ ಕಂಪನಿಯ ಉತ್ಪನ್ನಗಳಿಗೆ ರಾಷ್ಟ್ರಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿದೆ.

ಉಡುಪಿ ಕಲ್ಪರಸ ಕೋಕೊನಟ್ ಆ್ಯಂಡ್‌ ಆಲ್ ಸ್ಪೈಸಸ್ ಪ್ರೊಡ್ಯುಸರ್ಸ್‌ ರೈತ ಉತ್ಪಾದಕ ಸಂಸ್ಥೆಯು (ಉಕಾಸ) ತಯಾರಿಸಿ ಮಾರುಕಟ್ಟೆಗೆ ಬಿಡಲಾಗಿರುವ ತೆಂಗಿನ ರಸದಿಂದ ತಯಾರಾದ 500 ಬಾಟಲಿ ಬೆಲ್ಲವನ್ನು ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಖರೀದಿ ಮಾಡಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ, ವಿದೇಶಿ ರಾಯಭಾರಿಗಳಿಗೆ ಹಾಗೂ ರಾಷ್ಟ್ರಮಟ್ಟದ ಗಣ್ಯರಿಗೆ ನೀಡ ಲಾಗುವ ಉಡುಗೊರೆಗಳ ಪಟ್ಟಿಯಲ್ಲಿ ಕಲ್ಪರಸದ ಬೆಲ್ಲವೂ ಸೇರ್ಪಡೆಯಾಗಿದ್ದು, ಕರಾವಳಿಯ ಸಿಹಿ ರಾಷ್ಟ್ರ ರಾಜಧಾನಿಯವರೆಗೆ ತಲುಪಿದೆ ಎಂದು ಕಂಪನಿಯ ಅಧ್ಯಕ್ಷ ಸತ್ಯನಾರಾಯಣ ಉಡುಪ ಜಪ್ತಿ ತಿಳಿಸಿದ್ದಾರೆ.

ADVERTISEMENT

‘ಉಕಾಸ’ ರೈತ ಉತ್ಪಾದಕ ಸಂಸ್ಥೆ ತಯಾರಿಸುತ್ತಿರುವ ಉತ್ಪನ್ನಗಳಿಗೆ ರಾಷ್ಟ್ರಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದೆ. ಅಬಕಾರಿ ಇಲಾಖೆಯ ಪರವಾನಗಿ ಪಡೆದು ಕಲ್ಪರಸದ ತಯಾರಿ ಮಾಡುವುದರ ಜತೆಗೆ ಉಪ ಉತ್ಪನ್ನಗಳಾದ ಶರ್ಕರ, ಗುಡ, ಮಧು ಮತ್ತು ವಿನೆಗರ್ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡಲಾಗಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆರೋಗ್ಯದ ದೃಷ್ಟಿಯಿಂದ ಸಂಸ್ಥೆಯ ಉತ್ಪನ್ನಗಳು ಗ್ರಾಹಕರ ವಿಶ್ವಾಸಾರ್ಹತೆ ಪಡೆದುಕೊಂಡಿವೆ.

ಉಡುಪಿ ಜಿಲ್ಲಾಡಳಿತದಿಂದ ರಾಜ್ಯದ ಗಣ್ಯರಿಗೆ ನೀಡುವ, ಸಂಜೀವಿನಿ ಒಕ್ಕೂಟಗಳ ಮೂಲಕ ತಯಾರಾಗುತ್ತಿರುವ 150 ಉಡುಗೊರೆ ಬುಟ್ಟಿಯಲ್ಲೂ ಕಲ್ಪರಸದ ಬೆಲ್ಲ ಸ್ಥಾನ ಪಡೆದಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಪ್ರಸನ್ನ ಅವರ ಮಾರ್ಗದರ್ಶನದಿಂದ ಸಂಸ್ಥೆಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ ಎಂದು ಉಡುಪ ಅವರು ತಿಳಿಸಿದ್ದಾರೆ.ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಪ್ರಾರಂಭವಾದ ‘ಉಕಾಸ’ ಜಿಲ್ಲೆಯಲ್ಲಿ 1,028 ರೈತ ಷೇರುದಾರರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.