ADVERTISEMENT

‘ವೇದಾಂತ ಕ್ಷೇತ್ರಕ್ಕೆ ಎ.ಐ. ಸವಾಲು’

ಮಧ್ವ ಜಯಂತಿಯ ಅಂಗವಾಗಿ ಕೃಷ್ಣ ಮಠದಲ್ಲಿ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:27 IST
Last Updated 3 ಅಕ್ಟೋಬರ್ 2025, 5:27 IST
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು   

ಉಡುಪಿ: ಕೃತಕ ಬುದ್ಧಿಮತ್ತೆ (ಎಐ) ಇಂದು ಮನುಷ್ಯನನ್ನು ಮೀರಿಸಿದೆ. ಬೌದ್ಧಿಕ ಕಸರತ್ತುಗಳನ್ನು ಅದು ನಮಗಿಂತಲೂ ವೇಗವಾಗಿ ಮಾಡುತ್ತಿದೆ. ಆದ್ದರಿಂದ ಎ.ಐ. ವೇದಾಂತ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಧ್ವ ಜಯಂತಿಯ ಅಂಗವಾಗಿ ಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶಾಸ್ತ್ರಗಳ ಪ್ರಕಾರ ಜ್ಞಾನ ಇರುವವನೇ ಜೀವ ಎಂದಾಗಿದೆ. ಆದರೆ, ಮಧ್ವಾಚಾರ್ಯರು ಭಾವನೆಯಾಧರಿತವಾದುದು ಜೀವ ಎಂದಿದ್ದಾರೆ. ಜ್ಞಾನಾಧಾರಿತವಾದುದು ಜೀವವಲ್ಲ ಎಂದೂ ಹೇಳಿದ್ದಾರೆ. ಅದು ಇಂದಿನ ಎ.ಐ. ಯುಗಕ್ಕೆ ಅನ್ವಯಿಸುತ್ತದೆ ಎಂದರು.

ADVERTISEMENT

ಎ.ಐ.ಗೆ ಬೌದ್ಧಿಕ ಸಾಮರ್ಥ್ಯ ಇದ್ದರೂ ಭಕ್ತಿ, ವೈರಾಗ್ಯ ಇತ್ಯಾದಿ ಸಾಮರ್ಥ್ಯ ಬರಲು ಸಾಧ್ಯವಿಲ್ಲ. ಆದ್ದರಿಂದ ಜೀವ ಇರುವವವರೇ ಶ್ರೇಷ್ಠರು ಎಂದು ಹೇಳಿದರು.

ಹೊಸತನ್ನು ವಿಮರ್ಶೆ ಮಾಡುವುದು ಆಚಾರ್ಯರ ಮೂಲ ಸಿದ್ಧಾಂತವಾಗಿದೆ. ಅವರು ಹೊಸ ಹೊಸ ವಿಚಾರಗಳನ್ನು ಮಂಡನೆ ಮಾಡಿ, ಆ ಮೂಲಕ ಜ್ಞಾನಕ್ರಾಂತಿಗೆ ಕಾರಣರಾಗಿದ್ದರು ಎಂದೂ ಪ್ರತಿಪಾದಿಸಿದರು.

ಪ್ರತಿಯೊಬ್ಬರಲ್ಲೂ ಚಿಂತನೆ ಪ್ರವರ್ಧಮಾನವಾಗಿರಬೇಕು ಎಂಬುದು ಮಧ್ವಾಚಾರ್ಯರ ಮೂಲ ಉದ್ದೇಶವಾಗಿತ್ತು. ಚಿಂತನೆಯು ನಿಂತ ನೀರಾಗಿರಬಾರದು. ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ನಮ್ಮ ಜ್ಞಾನವು ಬೆಳೆಯಬೇಕು ಎಂದು ತಿಳಿಸಿದರು.

ಜ್ಞಾನದಲ್ಲಿ ಎರಡು ವಿಧ. ಒಂದು ದಾಖಲೀಕರಣಗೊಂಡಿರುವ ಜ್ಞಾನವಾದರೆ ಇನ್ನೊಂದು ರಾಡರ್‌ನಂತೆ ಯಾವುದಾದರೂ ಹೊಸತು ಬಂದರೆ ಅದನ್ನು ಗ್ರಹಿಸುತ್ತಾ ಅದನ್ನು ವಿಮರ್ಶೆಗೆ ಒಳಪಡಿಸುವಂತದ್ದು. ನಮ್ಮಲ್ಲಿ ಯಾವಾಗಲೂ ತೆರೆದ ಮನಸ್ಸು ಇರಬೇಕು. ಹೊಸ ವಿಚಾರಗಳು ಬಂದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ಇರಬೇಕು ಎಂದರು.

‘ಆಧುನಿಕ ಜೀವನದಲ್ಲಿ ಮಧ್ವ ಸಿದ್ಧಾಂತದ ಪ್ರಸ್ತುತತೆ ಎಂಬ ವಿಷಯದ ಕುರಿತು ಕೃಷ್ಣರಾಜ ಕುತ್ಪಾಡಿ ಮತ್ತು ಪ್ರತೋಷ್ ಎ.ಪಿ. ಮಾತನಾಡಿದರು ಷಣ್ಮುಖ ಹೆಬ್ಬಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಡಾ. ಸುರೇಶ್ ರಾವ್, ಸಿ.ಆರ್. ಮುರಳಿ ಪಣಿಯಾಡಿ, ಮುರಳಿ ತಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.