ADVERTISEMENT

ಉಡುಪಿ | ‘ಮೇ’ ಮಳೆ: ಅನಾನಸ್‌ ಬೆಳೆಗಾರರಿಗೆ ಬರೆ

ಗಿಡದಲ್ಲೇ ಕೊಳೆತು ಹೋದ ಹಣ್ಣುಗಳು: ದರ ಕುಸಿತದಿಂದ ನಷ್ಟ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 7:04 IST
Last Updated 18 ಜೂನ್ 2025, 7:04 IST
ಫೆಡ್ರಿಕ್‌ ಅವರ ಅನಾನಸ್‌ ತೋಟ   
ಫೆಡ್ರಿಕ್‌ ಅವರ ಅನಾನಸ್‌ ತೋಟ      

ಉಡುಪಿ: ಈ ಬಾರಿ ಮೇ ತಿಂಗಳಲ್ಲಿ ನಿರಂತರವಾಗಿ ಸುರಿದ ಮುಂಗಾರು ಪೂರ್ವ ಮಳೆಯು ಜಿಲ್ಲೆಯ ಅನಾನಸ್‌ ಬೆಳೆಗಾರರಿಗೂ ಬರೆ ಎಳೆದಿದೆ.

ಸಾಮಾನ್ಯವಾಗಿ ಜೂನ್ ಮೊದಲ ವಾರದವರೆಗೆ ಬಿರುಸಿನ ಮಳೆ ಬಾರದ ಕಾರಣ ಅನಾನಸ್‌ ಬೆಳೆಯಲ್ಲಿ ಉತ್ತಮ ಫಸಲು ಸಿಗುತ್ತಿತ್ತು. ಈ ಬಾರಿ ನಿರಂತರ ಬಿರುಸಿನ ಮಳೆ ಸುರಿದ ಕಾರಣ ಅನಾನಸ್‌ ಗಿಡಗಳ ಎಲೆಗಳ ನಡುವೆ ನೀರು ನಿಂತು ಹಣ್ಣುಗಳು ಕೊಳೆತು ಹೋಗಿ ರೈತರಿಗೆ ನಷ್ಟ ಉಂಟಾಗಿದೆ.

ರಂಜಾನ್ ತಿಂಗಳಲ್ಲಿ, ಮದುವೆ ಮೊದಲಾದ ಸಮಾರಂಭಗಳು ನಡೆಯುವ ಸೀಸನ್‌ನಲ್ಲಿ ಅನಾನಸ್‌ ಹಣ್ಣುಗಳಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಮಳೆಗಾಲದಲ್ಲೂ ಬೇಡಿಕೆ ಕುಸಿಯುವುದಿಲ್ಲ ಎನ್ನುತ್ತಾರೆ ಅನಾನಸ್‌ ಬೆಳೆಗಾರರು.

ADVERTISEMENT

ಮೇ ತಿಂಗಳಲ್ಲಿ ಎಡೆಬಿಡದೆ ಮಳೆ ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಆ ಕಾರಣಕ್ಕೆ ಹಣ್ಣುಗಳ ಕಟಾವು ಮಾಡಿರಲಿಲ್ಲ. ಒಮ್ಮೆಲೆ ಮಳೆ ಆರಂಭವಾದ ಕಾರಣ ಕಟಾವು ಮಾಡಲು ಸಾಧ್ಯವಾಗದೆ ಬೆಳೆ ನಷ್ಟವಾಗಿದೆ ಎಂದೂ ಅಳಲು ತೊಡಿಕೊಂಡಿದ್ದಾರೆ.

ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳ ತಾಲ್ಲೂಕುಗಳಲ್ಲಿ ಅನಾನಸ್‌ ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿಯ ಅಕಾಲಿಕ ಮಳೆಗೆ ಹೆಚ್ಚಿನ ರೈತರಿಗೆ ನಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಬೆಳೆಯುವ ಅನಾನಸ್‌ ಹಣ್ಣುಗಳನ್ನು ದೆಹಲಿ, ಕಾಶ್ಮೀರ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಾಗಿ ಮಾರಾಟಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅವುಗಳಿಗೆ ಉತ್ತಮ ಮಾರುಕಟ್ಟೆ ಇದೆ.

ಅನಾನಸ್‌ ಹಣ್ಣಾಗುವ ಮೊದಲೇ ಕೊಯ್ದು ಬೇರೆ ರಾಜ್ಯಗಳಿಗೆ ಮಾರಾಟಕ್ಕೆ ಕಳುಹಿಸಲಾಗುತ್ತದೆ. ಹಣ್ಣಾದ ಬಳಿಕ ಹೆಚ್ಚು ದಿನಗಳವರೆಗೆ ಅದನ್ನು ಇರಿಸಲು ಸಾಧ್ಯವಾಗದ ಕಾರಣ ಬೆಳೆಗಾರರು ಈ ರೀತಿ ಮಾಡುತ್ತಾರೆ.

‘ನಾವು ಹಂತ ಹಂತವಾಗಿ ಫಸಲು ಬರುವಂತೆ ಅನಾನಸ್‌ ಬೆಳೆಯನ್ನು ಮಾಡುತ್ತೇವೆ. ಆದ್ದರಿಂದ ಪ್ರತಿ ತಿಂಗಳು ಹಣ್ಣುಗಳು ಕೊಯ್ಲಿಗೆ ಬರುತ್ತವೆ. ಆದರೆ ಮೇ ತಿಂಗಳ ಹಣ್ಣುಗಳು ಬಹುತೇಕ ಗಿಡದಲ್ಲೇ ಕೊಳೆತು ಹೋಗಿವೆ’ ಎನ್ನುತ್ತಾರೆ ಕುಂದಾಪುರದ ಹಾಲಾಡಿಯ ಅನಾನಸ್ ಬೆಳೆಗಾರ ಫೆಡ್ರಿಕ್.

‘ಉಳಿದ ಹಣ್ಣುಗಳಿಗೆ ದರ ಕುಸಿತದಿಂದ ನಷ್ಟ ಉಂಟಾಯಿತು. ಅನಾನಸ್‌ ಹಣ್ಣು ಕೆ.ಜಿ.ಗೆ ₹ 35 ರಿಂದ ₹55ರ ವರೆಗೆ ಮಾರಾಟವಾಗುತ್ತದೆ. ಕೆಲವು ಸೀಸನ್‌ಗಳಲ್ಲಿ ದರ ಕೆ.ಜಿ.ಗೆ ₹100 ದಾಟುತ್ತದೆ. ಈ ಬಾರಿ ಮಳೆ ಬಂದು ಬೇಡಿಕೆ ಕುಸಿದ ಕಾರಣ ಕೆ.ಜಿ.ಗೆ ₹ 10ರಂತೆ ಮಾರಾಟ ಮಾಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ

‘ನಾನು 100 ಎಕರೆ ಜಾಗದಲ್ಲಿ ಅನಾನಸ್ ಕೃಷಿ ಮಾಡಿದ್ದೇನೆ. ಸ್ವಂತ ಜಾಗ ಹಾಗೂ ಬಾಡಿಗೆ ಆಧಾರದಲ್ಲಿ ಪಡೆದ ಜಾಗದಲ್ಲಿ ಬೆಳೆ ಮಾಡಿದ್ದೇನೆ. ಅಕಾಲಿಕವಾಗಿ ಬಂದ ಮಳೆಗೆ ಅಂದಾಜು ₹30 ಲಕ್ಷ ನಷ್ಟ ಉಂಟಾಗಿದೆ’ ಎಂದೂ ಅವರು ತಿಳಿಸಿದರು.

ಅನಾನಸ್‌ ತೋಟ  

ಅನಾನಸ್‌ ಹಣ್ಣುಗಳಿಗೆ ಹೊರ ರಾಜ್ಯದಲ್ಲಿ ಹೆಚ್ಚು ಬೇಡಿಕೆ ಅನಾನಸ್‌ ಹಣ್ಣಿನ ಜಾಮ್‌ಗೂ ಬೇಡಿಕೆ ಹೆಚ್ಚು ಕಳೆ ತೆಗೆಯಲು ಬೇಕು ಕಾರ್ಮಿಕರು

ಅನಾನಸ್‌ ತೋಟಗಳಲ್ಲಿ ದುಡಿಯಲು ಸ್ಥಳೀಯ ಕಾರ್ಮಿಕರು ಸಿಗುವುದಿಲ್ಲ. ಆ ಕಾರಣಕ್ಕೆ ಉತ್ತರ ಭಾರತದ ಕಾರ್ಮಿಕರನ್ನು ಹೆಚ್ಚಾಗಿ ನೇಮಿಸಿಕೊಳ್ಳುತ್ತೇವೆ
ಫೆಡ್ರಿಕ್ ಅನಾನಸು ಬೆಳೆಗಾರ
ಜೂನ್‌ ಮೊದಲ ವಾರದ ವರೆಗೂ ಅನಾನಸ್‌ ಬೆಳೆಯಲ್ಲಿ ಉತ್ತಮ ಫಸಲು ಬರುತ್ತಿತ್ತು. ಈ ಬಾರಿ ಮೇ ತಿಂಗಳಲ್ಲೇ ಭಾರಿ ಮಳೆ ಸುರಿದಿರುವುದರಿಂದ ಒಂದು ಕೊಯ್ಲಿನ ಹಣ್ಣುಗಳು ಕೊಳೆತು ಹೋಗಿ ನಷ್ಟ ಉಂಟಾಗಿದೆ
ನಾಗೇಂದ್ರ ಅನಾನಸು ಬೆಳೆಗಾರ

ಬೆಳೆಗಾರರು ಮೆಚ್ಚಿದ ರಾಣಿ ತಳಿ ರಾಣಿ ತಳಿಯ ಅನಾನಸ್‌ ಗಿಡದಲ್ಲಿ ಮುಳ್ಳುಗಳು ಹೆಚ್ಚಿದ್ದರೂ ಅದರ ಹಣ್ಣುಗಳನ್ನು ತುಂಬಾ ದಿವಸದವರೆಗೆ ಇರಿಸಬಹುದಾಗಿದೆ. ಆ ಕಾರಣಕ್ಕೆ ಜಿಲ್ಲೆಯ ರೈತರು ಅದೇ ತಳಿಯ ಅನಾನಸ್‌  ಬೆಳೆಯುತ್ತಿದ್ದಾರೆ. ರಾಜಾ ತಳಿಯ ಅನಾನಸ್‌ ಗಿಡದಲ್ಲಿ ಮುಳ್ಳುಗಳು ಕಡಿಮೆ ಇರುತ್ತವೆ . ಆದರೆ ಹಣ್ಣುಗಳು ಬೇಗ ಕೊಳೆತು ಹೋಗುತ್ತವೆ. ಆ ಕಾರಣಕ್ಕೆ ಅದನ್ನು ಬೆಳೆಯುವವರ ಸಂಖ್ಯೆ ಕೂಡ ಕಡಿಮೆ ಎನ್ನುತ್ತಾರೆ ಬೆಳೆಗಾರರು. ‘ನಾವು ಕೋಳಿ ಮತ್ತು ಕುರಿ ಗೊಬ್ಬರ ಬಳಸಿ ಅನಾನಸ್‌ ಬೆಳೆ ಬೆಳೆಯುತ್ತಿದ್ದೇವೆ. ಬಿಸಿಲಿನ ವಾತಾವರಣವಿದ್ದಾಗ ಎರಡು ಬಾರಿ ನೀರು ಹಾಯಿಸಬೇಕು ಅದಕ್ಕಾಗಿ ಹೆಚ್ಚು ಕಾರ್ಮಿಕರು ಬೇಕು’ ಎನ್ನುತ್ತಾರೆ ಫೆಡ್ರಿಕ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.