ಉಡುಪಿ: ಸುಬ್ರಹ್ಮಣ್ಯ ನಗರದಲ್ಲಿ ಅಪಾರ್ಟ್‌ಮೆಂಟ್‌ವೊಂದರ ತ್ಯಾಜ್ಯ ನೀರಿನ ಹೊಂಡದಿಂದಾಗಿ ಸಮೀಪದ ಮನೆಗಳ ಬಾವಿಗಳ ನೀರು ಕಲುಷಿತವಾಗಿರುವ ವಿಚಾರದ ಕುರಿತು ಸೋಮವಾರ ನಡೆದ ಉಡುಪಿ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸದಸ್ಯೆ ಜಯಂತಿ, ಕೊಳಚೆ ನೀರಿನ ಹೊಂಡವನ್ನು ಬದಲಾಯಿಸಬೇಕೆಂದು ಸಂಬಂಧಪಟ್ಟವರಿಗೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಸುತ್ತ ಮುತ್ತಲಿನ ಸುಮಾರು 76 ಮನೆಗಳ ಬಾವಿಗಳ ನೀರು ಕಲುಷಿತಗೊಂಡು, ರೋಗ ಭೀತಿ ಕಾಡುತ್ತಿದೆ ಎಂದರು.
ಈ ಪ್ರದೇಶದ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿಯೂ ಬಂದಿದೆ. ಜನರ ಆರೋಗ್ಯದಲ್ಲಿ ಏರುಪೇರಾದರೆ ಅದಕ್ಕೆ ನಗರಸಭೆಯೇ ನೇರ ಹೊಣೆ ಎಂದು ಅವರು ಹೇಳಿದರು. ಅದಕ್ಕೆ ಹಲವು ಸದಸ್ಯರು ಧ್ವನಿಗೂಡಿಸಿ, ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ನಗರದ ಹಲವು ವಸತಿ ಸಮುಚ್ಛಯಗಳಲ್ಲಿ ಕೊಳಚೆ ನೀರಿನ ನಿರ್ವಣೆಗೆ ವ್ಯವಸ್ಥೆ ಇಲ್ಲ. ಅದರಿಂದ ಚರಂಡಿಗಳಗೆ ಕೊಳಕು ನೀರನ್ನು ನೇರವಾಗಿ ಬಿಡುವುದರಿಂದ ಬಾವಿಗಳು ಕಲುಷಿತಗೊಳ್ಳುತ್ತಿವೆ. ಎಷ್ಟು ಕಟ್ಟಡಗಳಿಗೆ ಇಂತಹ ವ್ಯವಸ್ಥೆ ಇಲ್ಲ ಎಂಬುದರ ಬಗ್ಗೆ ಸಮಿಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಅಪಾರ್ಟ್‌ಮೆಂಟ್‌ನ ಕೊಳಚೆಗುಂಡಿಯನ್ನು ಬದಲಾಯಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯಕ್ಕೆ ಭಾದಿಸುವ ಯಾವುದೇ ವಿಚಾರದಲ್ಲಿ ರಾಜಿ ಬೇಡ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಕೊಳಚೆ ನೀರು ಚರಂಡಿಗೆ ಹರಿಸಿದ್ದಕ್ಕೆ ನಗರಸಭೆ ವ್ಯಾಪ್ತಿಯಲ್ಲಿ 187 ವಸತಿ ಸಮುಚ್ಚಯಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಯಶ್‌ಪಾಲ್ ಸುವರ್ಣ, ಕೇವಲ ನೋಟಿಸ್ ನೀಡುವುದರಿಂದ ಪ್ರಯೋಜನವಾಗದು, ಅಂತಹ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮೆಸ್ಕಾಂಗೆ ಪತ್ರ ಬರೆಯಬೇಕು ಎಂದರು.
ವಸತಿ ಸಮುಚ್ಚಯ ಕಟ್ಟಡಗಳ ಮಾಲೀಕರನ್ನು ಕರೆದು ನಗರಸಭೆಯಲ್ಲಿ ಸಭೆ ನಡೆಸಿ, ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಭಾಗವಹಿಸಿದ್ದರು.
ಮರಗಳ ರೆಂಬೆ ತೆರವುಗೊಳಿಸದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಕ್ರಮಕ್ಕೆ ಆಗ್ರಹ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ
ಕಿನ್ನಿಮುಲ್ಕಿಯಲ್ಲಿ 10 ಮನೆಗಳಿಗೆ ರಸ್ತೆಯೇ ಇಲ್ಲದೆ ಹಲವು ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಅದಕ್ಕೆ ಪರಿಹಾರ ಒದಗಿಸಬೇಕುಅಮೃತಾಕೃಷ್ಣ ಮೂರ್ತಿ ನಗರಸಭೆ ಸದಸ್ಯೆ
ನಗರದ ಮೀನು ಮಾರುಕಟ್ಟೆಯಲ್ಲಿ ವಿದ್ಯುತ್ ದೀಪಗಳಿಲ್ಲದೆ ಮೀನು ಸ್ವಚ್ಛಗೊಳಿಸುವ ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಸಮಸ್ಯೆ ಪರಿಹರಿಸಬೇಕುರಮೇಶ್ ಕಾಂಚನ್ ನಗರಸಭೆ ವಿರೋಧ ಪಕ್ಷದ ನಾಯಕ
‘ವಾರದೊಳಗೆ ಇ–ಆಫೀಸ್’
ಉಡುಪಿ ನಗರಸಭೆಯು ವಾರದೊಳಗೆ ಇ–ಆಫೀಸ್ ಆಗಲಿದೆ ಎಂದು ನೂತನ ಪೌರಾಯುಕ್ತ ಮಹಾಂತೇಶ್ ಹಂಗರಗಿ ಸಭೆಗೆ ತಿಳಿಸಿದರು. ಇನ್ನು ಮುಂದೆ ಎಲ್ಲಾ ದಾಖಲೆಗಳು ಕಂಪ್ಯೂಟರೀಕೃತವಾಗಲಿದೆ. ಎಲ್ಲಾ ಕಡತಗಳು ಕಂಪ್ಯೂಟರ್ ಮೂಲಕವೇ ನಿರ್ವಹಣೆಯಾಗಲಿವೆ. ಅದರಿಂದ ಜನರಿಗೂ ಅಧಿಕಾರಿಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಮಾರ್ದನಿಸಿದ ಲೋಕಾಯುಕ್ತ ಪರಿಶೀಲನೆ
ನಗರಸಭೆಯ ಕಚೇರಿಗೆ ಲೋಕಾಯುಕ್ತ ಪೊಲೀಸರು ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿರುವ ವಿಚಾರ ಸಭೆಯಲ್ಲಿ ಮಾರ್ದನಿಸಿತು. ನಗರಸಭೆಗೆ ಪದೇ ಪದೇ ಲೋಕಾಯುಕ್ತ ಪೊಲೀಸರು ಭೇಟಿ ನೀಡುತ್ತಿರುವುದು ಮುಜುಗರ ತರಿಸುತ್ತಿದೆ ಎಂದು ಹಲವು ಸದಸ್ಯರು ತಿಳಿಸಿದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ ಲೋಕಾಯುಕ್ತ ಪೊಲೀಸರು ಭೇಟಿ ನೀಡಿದಾಗ ಹಿಂದಿನ ಆಯುಕ್ತರು ಎರಡು ದಿವಸ ಕಚೇರಿ ಕಡೆ ಬಂದಿಲ್ಲ. ಕಡತಗಳನ್ನೂ ಮನೆಗೆ ಕೊಂಡೊಯ್ದಿದ್ದಾರೆ ಯಾಕೆ ಎಂದು ಪ್ರಶ್ನಿಸಿದರು. ಆಗ ಸದಸ್ಯ ಗಿರೀಶ್ ಅಂಚನ್ ಮಾತನಾಡಿ ಹಿಂದಿನ ಆಯುಕ್ತರು ಈಗ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರಾಗಿದ್ದಾರೆ. ಅವರಿಂದ ಜನರಿಗೆ ನ್ಯಾಯಯುತ ಸೇವೆ ಸಿಗಲು ಸಾಧ್ಯವೇ. ಅಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಮೇಶ್ ಕಾಂಚನ್ ಮಾತನಾಡಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದಾಗ ಅಂತಹವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಧ್ವನಿಗೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.