ADVERTISEMENT

ಉಡುಪಿ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಡಕು

ತೀರಾ ಹದಗೆಟ್ಟಿದೆ ಸರ್ವಿಸ್‌ ರಸ್ತೆಗಳು: ವಾಹನ ಚಾಲಕರಿಗೆ ನಿತ್ಯ ಗೋಳು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 6:47 IST
Last Updated 1 ಆಗಸ್ಟ್ 2025, 6:47 IST
ಉಡುಪಿಯ ಅಂಬಲಪಾಡಿ ಬಳಿಯ ಸರ್ವಿಸ್‌ ರಸ್ತೆಯ ದುಃಸ್ಥಿತಿ
ಉಡುಪಿಯ ಅಂಬಲಪಾಡಿ ಬಳಿಯ ಸರ್ವಿಸ್‌ ರಸ್ತೆಯ ದುಃಸ್ಥಿತಿ   

ಉಡುಪಿ: ನಗರದ ಕಿನ್ನಿಮುಲ್ಕಿಯಿಂದ ಕರಾವಳಿ ಬೈಪಾಸ್‌ ವರೆಗೆ ಹಾಗೂ ಕರಾವಳಿ ಬೈಪಾಸ್‌ನಿಂದ ಕಿನ್ನಿ ಮುಲ್ಕಿ ಕಡೆಗೆ ತೆರಳುವ ಸರ್ವಿಸ್‌ ರಸ್ತೆಗಳು ತೀರಾ ಹದಗೆಟ್ಟಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ.

ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ನಿರ್ಮಾಣವಾಗಿ ಹಲವು ತಿಂಗಳುಗಳೇ ಕಳೆದಿವೆ. ಕಳೆದೆರೆಡು ವಾರಗಳಿಂದ ಭಾರಿ ಮಳೆ ಸುರಿದ ಪರಿಣಾಮವಾಗಿ ರಸ್ತೆ ತೀರಾ ಹದಗೆಟ್ಟಿದೆ.

ರಸ್ತೆಯಲ್ಲಿ ನಿರ್ಮಾಣವಾಗಿರುವ ಬೃಹದಾಕಾರದ ಹೊಂಡಗಳಿಗೆ ರೆಡಿಮಿಕ್ಸ್ ಹಾಕಿದ್ದು, ಅದು ಮಳೆಗೆ ಕೊಚ್ಚಿ ಹೋಗಿದೆ. ಹೊಂಡಮಯ ರಸ್ತೆಯಲ್ಲಿ ದಿನನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ.

ADVERTISEMENT

ಮಳೆ ಆರಂಭವಾಗುವುದಕ್ಕೂ ಮೊದಲೇ ಸಂಬಂಧಪಟ್ಟವರು ಸರ್ವಿಸ್‌ ರಸ್ತೆಯನ್ನು ದುರಸ್ತಿ ಗೊಳಿಸದಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ದೂರಿದ್ದಾರೆ.

ಅಂಬಲಪಾಡಿ ಬೈಪಾಸ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ವಾಹನಗಳು ಈ ಸರ್ವಿಸ್‌ ರಸ್ತೆಗಳಲ್ಲೇ ಸಂಚರಿಸುತ್ತವೆ.

ಒಂದು ವಾರದಿಂದ ಪ್ರತಿದಿನವೂ ಇಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಆಂಬುಲೆನ್ಸ್‌ಗಳಿಗೂ ತುರ್ತು ಸಂದರ್ಭಗಳಲ್ಲಿ ವೇಗವಾಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಂಬಲಪಾಡಿ ಬೈಪಾಸ್‌ ಬಳಿ ಈ ಸರ್ವಿಸ್‌ ರಸ್ತೆಯಲ್ಲಿ ಬೃಹತ್‌ ಗಾತ್ರದ ಹೊಂಡ ನಿರ್ಮಾಣವಾಗಿದ್ದ ಕಾರಣ ಬುಧವಾರ ವಾಹನಗಳು ತೆವಳಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಿ.ಮೀ. ಗಟ್ಟಲೆ ದೂರದವರೆಗೆ ವಾಹನ ದಟ್ಟಣೆಯೂ ಉಂಟಾಗಿತ್ತು. ಬಳಿಕ ರೆಡಿಮಿಕ್ಸ್‌ ಹಾಕಿ ತಾತ್ಕಾಲಿಕವಾಗಿ ಬೃಹತ್‌ ಹೊಂಡವೊಂದನ್ನು ಮುಚ್ಚಲಾಗಿತ್ತು. ಆದರೆ ಸಂಜೆಯ ವೇಳೆ ಜಲ್ಲಿಕಲ್ಲುಗಳು ಚದುರಿ ಹೋಗಿ ಮತ್ತೆ ಸಮಸ್ಯೆ ಉಂಟಾಗಿತ್ತು.

ಈ ರಸ್ತೆಯು ಹಲವು ಕಡೆಗಳಲ್ಲಿ ತೀರಾ ಹದಗೆಟ್ಟಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಅಂಬಲಪಾಡಿ ಬೈಪಾಸ್‌ ಬಳಿ ರಸ್ತೆ ಹೊಂಡಕ್ಕೆ ಹಾಕಿದ್ದ ಜಲ್ಲಿ ಕಲ್ಲುಗಳು ಚದುರಿಕೊಂಡಿದ್ದು, ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಸರ್ವಿಸ್‌ ರಸ್ತೆಯು ತೀರಾ ಕಿರಿದಾಗಿದ್ದು, ಮಳೆ ಬಂದರೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯು ಈ ರೀತಿಯ ದುಸ್ಥಿತಿಗೆ ತಲುಪಿದೆ ಎನ್ನುತ್ತಾರೆ ಜನರು.

ಮಳೆಗಾಲ ಆರಂಭವಾಗುವ ಮೊದಲೇ ಅಂಬಲಪಾಡಿಯಿಂದ ಬ್ರಹ್ಮಗಿರಿ ಕಡೆಗೆ ನೇರ ಸಂಪರ್ಕ ಕಲ್ಪಿಸಲಾಗುವುದು ಎಂದು ಸಂಬಂಧಪಟ್ಟವರು ಹೇಳಿದ್ದರು. ಆದರೆ ಮೇಲ್ಸೇತುವೆಯಲ್ಲಿ ಗರ್ಡರ್‌ ಅಳವಡಿಸಿಯಾದರೂ ನೇರ ಸಂಪರ್ಕ ಮಾತ್ರ ಕಲ್ಪಿಸಿಲ್ಲ ಎಂದೂ ಹೇಳಿದ್ದಾರೆ.

ಪ್ರತಿ ದಿನ ವಾಹನ ದಟ್ಟಣೆ ಸಮಸ್ಯೆ ಮಳೆ ಬಂದರೆ ತೋಡಿನಂತಾಗುವ ರಸ್ತೆ ಆಯತಪ್ಪಿ ಬಿದ್ದು ಗಾಯಗೊಂಡಿರುವ ದ್ವಿಚಕ್ರ ವಾಹನ ಸವಾರರು

ಸರ್ವಿಸ್‌ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಅಲ್ಲಲ್ಲಿ ನಿರ್ಮಾಣವಾಗಿದೆ. ಮಳೆ ಬರುವಾಗ ಮತ್ತು ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ತೆರಳಲು ಸಮಸ್ಯೆ ಉಂಟಾಗುತ್ತಿದೆ

-ಕರುಣಾಕರ್‌ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.