ADVERTISEMENT

ಉಡುಪಿ | ಗಗನಕ್ಕೇರಿದ ದಾಳಿಂಬೆ ಬೆಲೆ: ವರ್ಷಾರಂಭದಲ್ಲೇ ತರಕಾರಿ ತುಟ್ಟಿ

ಗ್ರಾಹಕರಿಗೆ ದುಬಾರಿಯಾದ ಹಣ್ಣು ಹಂಪಲು

​ಪ್ರಜಾವಾಣಿ ವಾರ್ತೆ
ನವೀನ ಕುಮಾರ್ ಜಿ.
Published 3 ಜನವರಿ 2025, 7:14 IST
Last Updated 3 ಜನವರಿ 2025, 7:14 IST
ತೊಂಡೆಕಾಯಿ
ತೊಂಡೆಕಾಯಿ   

ಉಡುಪಿ: ಹೊಸ ವರ್ಷದ ಆರಂಭದಲ್ಲೇ ತರಕಾರಿ, ಹಣ್ಣು ಹಂಪಲುಗಳ ಬೆಲೆ ತುಟ್ಟಿಯಾಗಿ ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಕೆ.ಜಿಗೆ ₹80ರಿಂದ ₹90ರ ಗಡಿಯಲ್ಲಿದ್ದ ತೊಂಡೆಕಾಯಿ ದರವು ₹140ಕ್ಕೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಹೊರೆಯಾಗಿದೆ.

ಸಗಟು ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿರುವುದರಿಂದ ತೊಂಡೆಕಾಯಿ ದರ ಅಧಿಕವಾಗಿದೆ ಎಂದು ಮಾರಾಟಗಾರರು ಹೇಳುತ್ತಾರೆ.

ADVERTISEMENT

ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ತೊಂಡೆಕಾಯಿ ದರ ಇಳಿಕೆಯಾಗುತ್ತದೆ. ಈ ಬಾರಿ ದಿಢೀರನೆ ಏರಿಕೆಯಾಗಿದೆ ಎನ್ನುತ್ತಾರೆ ಉಡುಪಿಯ ತರಕಾರಿ ಮಾರಾಟಗಾರ ಜಯಾನಂದ.

ಅಯ್ಯಪ್ಪ ಮಾಲಾಧಾರಣೆ ಋತು ಆರಂಭವಾಗುತ್ತಿದ್ದಂತೆ ತರಕಾರಿ ದರ ಸಾಮಾನ್ಯವಾಗಿ ಏರಿಕೆಯಾಗುತ್ತದೆ. ಜನವರಿ ಆರಂಭವಾಗುತ್ತಿದ್ದಂತೆ ಕೆಲವು ತರಕಾರಿಗಳ ದರ ಇಳಿಕೆಯಾಗುತ್ತಿತ್ತು. ಆದರೆ, ಈ ಬಾರಿ ಕೆಲ ತರಕಾರಿಗಳ ಬೆಲೆ ಗಗನಕ್ಕೇರಿದೆ ಎನ್ನುತ್ತಾರೆ ಅವರು.

ಬೀನ್ಸ್ ದರ ಕೆ.ಜಿ.ಗೆ ₹100ಕ್ಕೆ ಏರಿಕೆಯಾದರೆ, ಬೆಂಡೆಕಾಯಿ ದರವು ಕೆ.ಜಿಗೆ ₹90ಕ್ಕೆ ಏರಿದೆ. ಕಳೆದ ವಾರ ಬೀನ್ಸ್ ದರವು ಕೆ.ಜಿಗೆ ₹80 ಮತ್ತು ಬೆಂಡೆಕಾಯಿ ದರವು ಕೆ.ಜಿಗೆ ₹60 ಇತ್ತು.

ತೊಂಡೆಕಾಯಿ, ಬೀನ್ಸ್ ಮತ್ತು ಬೆಂಡೆಕಾಯಿ ದರವು ವಿಪರೀತ ಏರಿಕೆಯಾಗಿರುವುದರಿಂದ ಈ ತರಕಾರಿಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಮಾರಾಟಗಾರರ ಅಳಲಾಗಿದೆ.

ಕಳೆದ ವಾರ ಕೆ.ಜಿಗೆ ₹80ರ ಆಸುಪಾಸಿನಲ್ಲಿದ್ದ ಅಲಸಂಡೆ ದರ ₹110ಕ್ಕೆ ಏರಿಕೆಯಾಗಿದೆ. ಕೆ.ಜಿಗೆ ₹60 ಇದ್ದ ಸಿಹಿ ಗೆಣಸು ದರ ₹70 ಕ್ಕೇರಿದರೆ, ಕ್ಯಾರೆಟ್ ಹಾಗೂ ಹೀರೇಕಾಯಿ ದರ ಕೆ.ಜಿಗೆ ₹80 ಆಗಿದೆ.

ಇನ್ನು ಹಣ್ಣು ಹಂಪಲುಗಳ ದರವೂ ಏರುಮುಖವಾಗಿದೆ. ದಾಳಿಂಬೆ ದರ ಕೆ.ಜಿಗೆ ₹220 ಕ್ಕೇರಿದರೆ, ಆ್ಯಪಲ್ ಕೆ.ಜಿಗೆ ₹180ಕ್ಕೇರಿದೆ.

ಈ ಬಾರಿ ಡಿಸೆಂಬರ್‌ ತಿಂಗಳಿನಿಂದಲೇ ಬಿಸಿಲಿನ ಝಳ ಜಾಸ್ತಿಯಾಗಿದೆ. ಈ ಕಾರಣಕ್ಕೆ ತಂಪು ಪಾನೀಯ, ಹಣ್ಣಿನ ಜ್ಯೂಸ್‌ಗೆ ಹೆಚ್ಚಿನ ಬೇಡಿಕೆ ಇದೆ. ಈ ಕಾರಣಕ್ಕೆ ಜನವರಿ ಆರಂಭದಲ್ಲೇ ಹಣ್ಣುಗಳ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಉಡುಪಿಯ ಸರ್ವಿಸ್ ಬಸ್ ನಿಲ್ದಾಣ ಬಳಿಯ ಹಣ್ಣಿನ ವ್ಯಾಪಾರಿ ಸಾದಿಕ್.

ದಾಳಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಅದರ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ ಎಂದು ಅವರು ಹೇಳುತ್ತಾರೆ.

ಕಳೆದ ವಾರ ಕೆ.ಜಿಗೆ ₹40 ಇದ್ದ ಪಪ್ಪಾಯ ಹಣ್ಣಿನ ಬೆಲೆ ಕೆ.ಜಿಗೆ ₹50ಕ್ಕೇರಿದರೆ, ಕೆ.ಜಿಗೆ ₹60ರ ಆಸುಪಾಸಿನಲ್ಲಿದ್ದ ನೇಂದ್ರ ಬಾಳೆ ಹಣ್ಣಿನ ದರವು ₹80ಕ್ಕೇರಿದೆ. ಏಲಕ್ಕಿ ಬಾಳೆ ಹಣ್ಣಿನ ಬೆಲೆಯು ಕೆ.ಜಿಗೆ ₹60 ಇದೆ.

ಈ ಬಾರಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ತರಕಾರಿ ದರವು ಗಗನಕ್ಕೇರಿದೆ. ಮನೆಗೆ ಬೇಕಾದ ತರಕಾರಿ ಖರೀದಿಸಬೇಕಾದರೆ ದೊಡ್ಡ ಮೊತ್ತ ವ್ಯಯಿಸಬೇಕಾಗಿದೆ.
–ಶ್ರೀನಿವಾಸ, ಗ್ರಾಹಕ
ಕೆಲವು ಹಣ್ಣು ಹಂಪಲುಗಳ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಬೆಲೆ ಜಾಸ್ತಿಯಾದರೂ ಖರೀದಿಸುವುದು ಅನಿವಾರ್ಯವಾಗಿದೆ.
–ಸೀತಾರಾಮ ಶೆಟ್ಟಿ, ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.