ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಸೋಲಿನ ಕಾರಣಗಳನ್ನು ಪರಾಮರ್ಶಿಸಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಕೆಪಿಸಿಸಿ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ನಿರೀಕ್ಷಿಸಿದ್ದೆವು ಆದರೆ ಕೇವಲ 9 ಸ್ಥಾನಗಳಲ್ಲಷ್ಟೇ ಗೆಲ್ಲಲು ಸಾಧ್ಯವಾಯಿತು. ಕೆಲವೆಡೆ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದರೂ ಸೋಲಾಗಿದೆ ಎಂದರು.
ದೇಶ ಮತ್ತು ರಾಜ್ಯದಲ್ಲಿ ಇಂದು ರಾಜಕಾರಣ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ರಾಷ್ಟ್ರ ರಾಜಕಾರಣದಲ್ಲಿ ವಿರೋಧ ಪಕ್ಷಗಳ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ರಾಜ್ಯದಲ್ಲೂ ಕೂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಿರ್ದೇಶನದಂತೆ ಕಾಂಗ್ರೆಸ್ ನಾಯಕರ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಯಾವುದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬಹುದು. ನಮ್ಮ ಪಕ್ಷದಲ್ಲಿ ಎರಡನೇ ಸಾಲಿನ ಮುಖಂಡರನ್ನು ಬೆಳೆಸುವಲ್ಲಿ ಈ ಚುನಾವಣೆಗಳು ಮಹತ್ವದ್ದು. ಆದ್ದರಿಂದ ಬೂತ್ ಮಟ್ಟದಿಂದಲೇ ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸೋಲಿನ ಕುರಿತು ತಳ ಹಂತದ ಮುಖಂಡರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ಸತ್ಯಶೋಧನಾ ಸಮಿತಿ ನೇಮಿಸಲಾಗಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳ ನಾಯಕರ ನಿರೀಕ್ಷೆಗಳು ಹುಸಿಯಾಗಿವೆ. ನಾವು ಇನ್ನೂ 20ರಿಂದ 25 ಸ್ಥಾನಗಳನ್ನು ಗೆದ್ದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಮನೆಗೆ ಹೋಗಬೇಕಿತ್ತು ಎಂದರು.
ನಮ್ಮ ಪಕ್ಷವು ಜನರ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದೆ. ಇದಕ್ಕಾಗಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಿದರು.
ಬಿಜೆಪಿಯು ಜನರ ಸೂಕ್ಷ್ಮ ಭಾವನೆಗಳನ್ನು ಕೆರಳಿಸುತ್ತದೆ. ಧರ್ಮ, ಜಾತಿ , ಭಾಷೆ ಮತ್ತು ದೇವರ ಹೆಸರುಗಳನ್ನು ಚುನಾವಣೆಯಲ್ಲಿ ಬಳಸಿಕೊಂಡು ಗೆಲ್ಲುತ್ತಿದೆ ಎಂದು ಟೀಕಿಸಿದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ ಅಜಯ್ ಕುಮಾರ್ ಸರ್‌ನಾಯಕ್, ಎಂ.ಎಸ್. ಮುಹಮ್ಮದ್, ಸಯ್ಯದ್ ಅಹಮ್ಮದ್ ಪಾಲ್ಗೊಂಡಿದ್ದರು.
‘ಮೋದಿ ಮಹಾನ್ ಸುಳ್ಳುಗಾರ’ ‘ನರೇಂದ್ರ ಮೋದಿ ಅವರು ಮಹಾನ್ ಸುಳ್ಳುಗಾರ ಮತ್ತು ಸಮಯಸಾಧಕ ರಾಜಕಾರಣಿ’ ಎಂದು ಉಗ್ರಪ್ಪ ಟೀಕಿಸಿದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಚುನಾವಣೆಯಲ್ಲಿ 400 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಸುಳ್ಳು ಪ್ರಚಾರ ಮಾಡಿದ್ದರು ಎಂದು ಹೇಳಿದರು. ರಾಜ್ಯದ ವಿವಿಧೆಡೆ ಜನರು ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದು ಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರಿಗೆ ಬದ್ಧತೆ ಇದ್ದರೆ ಪ್ರಧಾನಿ ಮೋದಿ ಅವರಿಗೆ ವೈಮಾನಿಕ ಸಮೀಕ್ಷೆ ನಡೆಸಲು ಹೇಳಲಿ ಮತ್ತು ಅನುದಾನ ಬಿಡುಗಡೆಗೊಳಿಸಲು ಒತ್ತಾಯಿಸಲಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.