ADVERTISEMENT

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘ: ಉತ್ತರಾಖಂಡ ಸಹಕಾರಿ ಸಚಿವ ಭೇಟಿ

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:22 IST
Last Updated 27 ಜುಲೈ 2025, 5:22 IST
ಉತ್ತರಾಖಂಡ ಸಹಕಾರಿ ಸಚಿವ ಧಹನ್ ಸಿಂಗ್ ರಾವತ್ ಮತ್ತು ತಂಡವನ್ನು ಸುಧೀರ್ ಕುಮಾರ್ ಸ್ವಾಗತಿಸಿದರು
ಉತ್ತರಾಖಂಡ ಸಹಕಾರಿ ಸಚಿವ ಧಹನ್ ಸಿಂಗ್ ರಾವತ್ ಮತ್ತು ತಂಡವನ್ನು ಸುಧೀರ್ ಕುಮಾರ್ ಸ್ವಾಗತಿಸಿದರು   

ಪಡುಬಿದ್ರಿ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿಗೆ ಉತ್ತರಾಖಂಡ ಸಹಕಾರಿ ಸಚಿವ ಧಹನ್ ಸಿಂಗ್ ರಾವತ್ ಅವರು ತಂಡದೊಂದಿಗೆ ಭೇಟಿ ನೀಡಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ಸಚಿವರ ತಂಡವನ್ನು ಸ್ವಾಗತಿಸಿ, ಸಂಘದ ಅಭಿವೃದ್ಧಿ, ರೈತ ಸಂಪರ್ಕ, ಬ್ಯಾಂಕ್ ವಹಿವಾಟುಗಳು, ಸಾಮಾಜಿಕ ಚಿಂತನೆ, ಸಾಲ ವಿತರಣೆ– ವಸೂಲಾತಿ ಮುಂತಾದ ಮಾಹಿತಿ ನೀಡಿದರು. ಸಂಘದ ಬೆಳವಣಿಗೆಗೆ ಸಹಕಾರಿಗಳ ಬೆಂಬಲ, ಸಂಘದ ದೂರದೃಷ್ಟಿ ಯೋಜನೆಗಳೇ ಕಾರಣ ಎಂದು ತಿಳಿಸಿದರು.

ಸಚಿವ ಧಹನ್ ಸಿಂಗ್ ಮಾತನಾಡಿ, ಉತ್ತರಾಖಂಡದಲ್ಲಿ 2017ರಲ್ಲೇ ಮಲ್ಟಿ ಪರ್ಪಸ್ ಸೊಸೈಟಿಗಳಾಗಿ ಪರಿವರ್ತಿಸಲಾಗಿದೆ. ಸಹಕಾರಿ ಸಂಘಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ನೀಡಲಾಗಿದೆ. 1 ಲಕ್ಷ ಸೊಸೈಟಿಗಳನ್ನು ಗಣಕೀಕೃತಗೊಳಿಸಲಾಗಿದೆ. ರೈತಾಪಿ ವರ್ಗ ಸಂಘಗಳಲ್ಲೇ ವಿದ್ಯುತ್ ಬಿಲ್ ಪಾವತಿ, ರೈಲ್ ಟಿಕೆಟ್ ಬುಕಿಂಗ್‌ಗಳನ್ನೂ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ನಿಮ್ಮ ಸಂಘವು ಇಫ್ಕೋಗಿಂತಲೂ ಅಧಿಕ ಶೇ 25 ಡಿವಿಡೆಂಟ್ ಹದಿನೈದು ವರ್ಷಗಳಿಂದ ನೀಡುತ್ತಿದೆ. ಪ್ರಧಾನ ಕಚೇರಿಯನ್ನೂ ಲಾಭಾಂಶದಿಂದಲೇ ಸಾಲ ರಹಿತವಾಗಿ ಕಟ್ಟಿಕೊಂಡಿದ್ದೀರಿ. ಹಾಗಾಗಿ ನಿಮ್ಮನ್ನು ಅಭಿನಂದಿಸಲು, ನಿಮ್ಮೊಂದಿಗೆ ಸಹಕಾರಿ ರಂಗದಲ್ಲಿ ಭಾಗಗಿಯಾಗಲು ಬಂದಿರುವುದಾಗಿ ಅವರು ಹೇಳಿದರು.

ಪರಸ್ಪರ ವಿನಿಮಯ: ಭವಿಷ್ಯದಲ್ಲಿ ಉತ್ತರಾಖಂಡ ಸರ್ಕಾರ ಕರ್ನಾಟಕದ ತೆಂಗು ಬೆಳೆ ಹಾಗೂ ಅಲ್ಲಿನ ಮಿಲ್ಲೆಟ್ ಕುರಿತಾದ ಜಂಟಿ ಯೋಜನೆ  ರೂಪಿಸಿಕೊಂಡು ಸಹಕಾರಿ ರಂಗದಲ್ಲೇ ಅಗ್ರಣಿಯಾಗಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದೊಂದಿಗೆ ಪರಸ್ಪರ ವಿಚಾರ ವಿನಿಮಯ ಮುಂದುವರಿಯಲು ಬಯಸಿರುವುದಾಗಿ ಸಚಿವ ಹೇಳಿದರು.

ಉತ್ತರಾಖಂಡದ ಸಂಸ್ಕೃತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ದೀಪಕ್ ಕುಮಾರ್, ಸಂಸ್ಕೃತ ಪೀಠದ ಕುಲಪತಿ ಪ್ರೊ.ಮಹೇಶ್‌ಚಂದ್ರ ಶಾಸ್ತ್ರಿ, ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕಿ ಲಾವಣ್ಯ ಕೆ.ಆರ್., ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್, ಸಹಾಯಕ ನಿಬಂಧಕ ಸುಧೀರ್ ಕುಮಾರ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿರ್ದೇಶಕರಾದ ಶಿವರಾಮ ಶೆಟ್ಟಿ, ಗಿರೀಶ್ ಪಲಿಮಾರು, ವಾಸುದೇವ, ಜಿತೇಂದ್ರ ಫುರ್ಟಾಡೊ, ಕೃಷ್ಣ ಬಂಗೇರ, ರಾಜಾರಾಮ, ಮಾಧವ ಆಚಾರ್ಯ, ರೋಹಿಣಿ ಎ, ಸೊಸೈಟಿಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್. ಪುತ್ರನ್, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ದೀಪಕ್ ಸಾಲ್ಯಾನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.