ADVERTISEMENT

ಉಡುಪಿ | ಪ್ರಜಾಪ್ರಭುತ್ವದ ಬೀಜ ಬಿತ್ತಿದ್ದ ವಾದಿರಾಜರು: ಬಿ‌.ಎ. ವಿವೇಕ ರೈ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:51 IST
Last Updated 29 ಡಿಸೆಂಬರ್ 2025, 5:51 IST
ಕಾರ್ಯಕ್ರಮವನ್ನು ವಿಶ್ರಾಂತ ಕುಲಪತಿ ಬಿ‌.ಎ. ವಿವೇಕ ರೈ ಉದ್ಘಾಟಿಸಿದರು
ಕಾರ್ಯಕ್ರಮವನ್ನು ವಿಶ್ರಾಂತ ಕುಲಪತಿ ಬಿ‌.ಎ. ವಿವೇಕ ರೈ ಉದ್ಘಾಟಿಸಿದರು   

ಉಡುಪಿ: ಶ್ರೀಕೃಷ್ಣ ಪೂಜೆಯಲ್ಲಿ ಪರ್ಯಾಯದ ಚಿಂತನೆಯನ್ನು ಕೊಡಮಾಡುವ ಮೂಲಕ ಜನಪರ ಯತಿ ವಾದಿರಾಜರು ಉಡುಪಿಯಲ್ಲಿ ಪ್ರಜಾಪ್ರಭುತ್ವದ ಬೀಜವನ್ನು ಬಿತ್ತಿದ್ದರು ಎಂದು ವಿಶ್ರಾಂತ ಕುಲಪತಿ ಬಿ‌.ಎ. ವಿವೇಕ ರೈ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಹಾಗೂ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವತಿಯಿಂದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 47 ನೇ ವಾದಿರಾಜ ಕನಕದಾಸ ಸಂಗೀತೋತ್ಸವ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಂತನೆ, ಧ್ಯಾನ ಶೂನ್ಯದಿಂದ ನಿರ್ಮಾಣವಾಗುವುದಿಲ್ಲ. ಲೋಕ ಸಂಚಾರದಿಂದ ಬರುತ್ತದೆ. ಅದ್ದರಿಂದಲೇ ವಾದಿರಾಜರ ಕೀರ್ತನೆಗಳಲ್ಲಿ ಲೋಕಜ್ಞಾನ ಅಡಕವಾಗಿದೆ ಎಂದು ಹೇಳಿದರು.

ADVERTISEMENT

ವಾದಿರಾಜರು ಮತ್ತು ಕನಕದಾಸರು ಹಾಡುಗಳ ಮೂಲಕ ಸಂದೇಶಗಳನ್ನು ಜನರಿಗೆ ತಲುಪಿಸಿದ್ದರು. ಇಂದಿನ ಪ್ರಕ್ಷುಬ್ಧ ಬದುಕಿನಲ್ಲಿ ಸಾಂತ್ವನ ನೀಡುವ ಗುಣ ಸಂಗೀತಕ್ಕಿದೆ ಎಂದರು.

ವಾದಿರಾಜರು ಮತ್ತು ಕನಕದಾಸರು ಲೋಕಸಂಚಾರಿಗಳು. ಭಾರತವನ್ನು ಸುತ್ತಿ ಬದುಕಿನ ಎಲ್ಲಾ ಸ್ವರೂಪಗಳನ್ನು, ಲೋಕ ವೈಶಿಷ್ಟ್ಯಗಳನ್ನು ಕಂಡುಕೊಂಡು ಅದನ್ನು ಕೃತಿಗಳ ಮೂಲಕ ಧಾರೆ ಎರೆದಿದ್ದಾರೆ. ಕನಕದಾಸರೂ ಕೂಡ ಆಧ್ಯಾತ್ಮಿಕಕ್ಕೆ ವೈಚಾರಿಕತೆಯ ಲೇಪನವನ್ನು ಮಾಡಿ ಭಕ್ತಿಯಲ್ಲಿ ಚಿಂತನೆಯ ಹೊಳಹುಗಳನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದರು.

ವಾದಿರಾಜರು ಮತ್ತು ಕನಕದಾಸರು ಬದುಕಿನಲ್ಲಿ ಹಲವು ಬಾರಿ ಮುಖಾಮುಖಿಯಾಗುತ್ತಾರೆ, ಚಿಂತನೆಗಳಲ್ಲಿ ಒಂದಾಗುತ್ತಾರೆ. ಇವರಿಬ್ಬರ ಸಾಹಿತ್ಯ ರಚನೆಗಳು ಕೇವಲ ಭಕ್ತಿಯ ಅನುಭೂತಿಯನ್ನು ಕೊಡುವಂಥದ್ದಲ್ಲ, ಬದುಕಿನಲ್ಲಿ ತಾಳ್ಮೆಯನ್ನು ತಂದುಕೊಳ್ಳುವಂತೆ ನಿರ್ದೇಶಿಸುತ್ತವೆ. ಶಾಸ್ತ್ರೀಯ ಸಂಗೀತವು ಇವರಿಬ್ಬರ ರಚನೆಗಳನ್ನು ಜನರಿಗೆ ತಲುಪುವಂತೆ ಮಾಡಿದವು ಎಂದರು.

ಶಾಸ್ರಗ್ರಂಥಗಳು ಮತ್ತೆ ಮತ್ತೆ ವಿಮರ್ಶೆಗೆ ಒಳಗಾಗಬೇಕು. ಕನ್ನಡ ಮತ್ತು ಸಂಸ್ಕೃತದ ಶಾಸ್ತ್ರಗ್ರಂಥಗಳು ಕೇವಲ ಪಠ್ಯ ಪುಸ್ತಕಗಳಲ್ಲ ಬದುಕಿಗೆ ಮಾರ್ಗದರ್ಶನ ನೀಡುವವುಗಳು. ಮಕ್ಕಳಿಗೆ ಕೇವಲ ಪಠ್ಯ ಪುಸ್ತಕಗಳನ್ನು ಓದಿಸಿ ಪ್ರಯೋಜನವಿಲ್ಲ. ಕಲೆ, ಸಂಗೀತದ ಆಸಕ್ತಿಯನ್ನೂ ಅವರಲ್ಲಿ ಬೆಳೆಸಬೇಕು ಎಂದು ತಿಳಿಸಿದರು.

ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಬಿ. ಜಗದೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ಉಮಾ ಉದಯ ಶಂಕರ್ ಉಪಸ್ಥಿತರಿದ್ದರು.
ಅರುಣ್ ಕುಮಾರ್ ಎಸ್‌. ಆರ್‌. ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಎಂ.ಜಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಉಪಸ್ಥಿತರಿದ್ದರು. ಬಳಿಕ ಉಷಾ ರಾಮಕೃಷ್ಣ ಭಟ್ ಬೆಂಗಳೂರು ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಿತು.

ಸ್ಪರ್ಧಾ ವಿಜೇತರಿಂದ ಗಾಯನ ಪ್ರಸ್ತುತಿ ವಿಭಾ ಎಸ್‌. ನಾಯಕ್‌ ಅವರಿಂದ ಹಿಂದೂಸ್ತಾನಿ ಸಂಗೀತ

‘ಲೌಕಿಕತೆಗೆ ಅಲೌಕಿಕತೆಯ ಮೆರುಗು’
ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ರಮೇಶ್ ಟಿ.ಎಸ್. ಮಾತನಾಡಿ ವಾದಿರಾಜರು ಪರಮ ಧಾರ್ಮಿಕರಾಗಿಯೂ ಸಾಮಾಜಿಕ ಸುಧಾರಕರಾಗಿಯೂ ದಾರಿದೀಪವಾಗಿದ್ದಾರೆ ಎಂದರು. ಲೌಕಿಕತೆಗೆ ಅಲೌಕಿಕತೆಯ ಮೆರುಗು ನೀಡಿ ಹಾಡಿನ ಮೂಲಕ ಭಾಗವತ ಪರಂಪರೆಯನ್ನು ನಾಡಿಗೆ ನೀಡುವ ಕೆಲಸವನ್ನು ವಾದಿರಾಜರು ಮಾಡಿದ್ದರು ಎಂದು ಹೇಳಿದರು. ಕನಕದಾಸರು ಅತೀ ಸರಳವಾದ ಕೀರ್ತನೆಗಳ ಮೂಲಕ ಜಗತ್ತಿನ ಉದ್ಧಾರಕ್ಕೆ ಶ್ರಮಿಸಿದ್ದರು. ಅವರ ಭಾಷಾಸಾಹಿತ್ಯವು ಅಸಾಧಾರಣವಾಗಿತ್ತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.