ಉಡುಪಿ: ಏಪ್ರಿಲ್, ಮೇ ತಿಂಗಳು ಬರುತ್ತಿದ್ದಂತೆ ನೀರಿಗೆ ಹಾಹಾಕಾರ ಕೇಳಿ ಬರುತ್ತಿದ್ದ ಉಡುಪಿ ನಗರಕ್ಕೆ ವಾರಾಹಿಯ ನೀರು ತಲುಪಿರುವುದರಿಂದ ಈ ಬಾರಿ ನಗರವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ಫೆಬ್ರುವರಿ 18ರಿಂದಲೇ ನಗರಕ್ಕೆ ಪ್ರಾಯೋಗಿಕವಾಗಿ 25 ಎಂಎಲ್‌ಡಿ ವಾರಾಹಿ ನೀರನ್ನು ಪೂರೈಸುತ್ತಿರುವ ಕಾರಣ, ನಗರದ ಜನರಿಗೆ ನೀರುಣಿಸುವ ಸ್ವರ್ಣಾ ನದಿಯ ಬಜೆ ಜಲಾಶಯದಲ್ಲಿ ಏಪ್ರಿಲ್ ತಿಂಗಳಲ್ಲೂ ನೀರಿನ ಮಟ್ಟ ಕಡಿಮೆಯಾಗಿಲ್ಲ.
6.5 ಮೀಟರ್ ನೀರು ಸಂಗ್ರಹಣ ಸಾಮರ್ಥ್ಯವಿರುವ ಬಜೆ ಜಲಾಶಯದಲ್ಲಿ ಇನ್ನೂ 5.1 ಮೀಟರ್‌ನಷ್ಟು ನೀರಿನ ಸಂಗ್ರಹವಿದೆ. ಇದರಿಂದಾಗಿ ಈ ಬಾರಿ ನಗರದಲ್ಲಿ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಎದುರಾಗದು ಎನ್ನುತ್ತಾರೆ ನಗರ ಸಭೆಯ ಅಧಿಕಾರಿಗಳು.
ನಗರಕ್ಕೆ 24 ಗಂಟೆಯೂ ನೀರು ಸರಬರಾಜು ಮಾಡುವ ಗುರಿಯನ್ನು ಹೊಂದಿರುವ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಬಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ಅಡಿಯಲ್ಲಿ 2017ರಲ್ಲಿ ಆರಂಭಿಸಲಾಗಿತ್ತು. ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ನೀರಿನ ಮಾದರಿಯ ಪರೀಕ್ಷೆಯ ವರದಿ ಬಂದ ಬಳಿಕ ಪ್ರಾಯೋಗಿಕ ನೆಲೆಯಲ್ಲಿ ನೀರು ಪೂರೈಕೆ ಪ್ರಾರಂಭಿಸಲಾಗಿತ್ತು.
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ (ಎಡಿಬಿ) ಧನ ಸಹಾಯದ ಮೂಲಕ ಅಮೃತ್ ಯೋಜನೆಯಡಿಯಲ್ಲಿ ರೂಪಿಸಲಾದ ₹300 ಕೋಟಿ ವೆಚ್ಚದ ವಾರಾಹಿ ಕುಡಿಯುವ ಯೋಜನೆಯು ಪೂರ್ಣಗೊಂಡರೆ ನಗರಕ್ಕೆ ನೀರಿನ ಸಮಸ್ಯೆ ಕಾಡದು ಎಂಬುದು ಜನರ ನಂಬಿಕೆ.
‘ವಾರಾಹಿ ಯೋಜನೆ ಪೂರ್ಣಗೊಂಡ ಬಳಿಕ ಎಂಟು ವರ್ಷಗಳ ಕಾಲ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ನಿರ್ವಹಣೆಯನ್ನು ವಾರಾಹಿಯವರೇ ಮಾಡಲಿದ್ದಾರೆ. ಈ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ ಎಂಟು ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ’ ಎಂದು ನಗರಸಭೆಯ ಕಾರ್ಯಪಾಲಕ ಎಂಜಿನಿಯರ್ ದುರ್ಗಾಪ್ರಸಾದ್ ತಿಳಿಸಿದರು.
‘ನಗರಸಭೆಯ ವ್ಯಾಪ್ತಿಗೆ ನೀರುಣಿಸಲು ಇದುವರೆಗೆ ಬಜೆ ಜಲಾಶಯವನ್ನೇ ಅವಲಂಬಿಸಬೇಕಾಗಿತ್ತು. ಆದರೆ, ಈ ಬಾರಿ ವಾರಾಹಿಯ ನೀರು ಬಂದಿರುವುದರಿಂದ ಬಜೆ ಜಲಾಶಯದ ನೀರಿನ ಬಳಕೆ ಅಲ್ಪ ಕಡಿಮೆಯಾಗಿ ಅಲ್ಲಿನ ನೀರಿನ ಮಟ್ಟ ಇಳಿಕೆಯಾಗಿಲ್ಲ. ಪೆರ್ಡೂರು, ಹೆಬ್ರಿ, ಹಿರಿಯಡಕ, ಕಾರ್ಕಳ ಪ್ರದೇಶದಲ್ಲಿ ಮಳೆ ಬಂದರೆ ಬಜೆ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ಭವಿಷ್ಯದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯ ಕೆರೆಗಳನ್ನೂ ಪುನಶ್ಚೇತನಗೊಳಿಸುವ ಯೋಜನೆಯೂ ಇದೆ’ ಎಂದು ಅವರು ಹೇಳಿದರು.
ವಾರಾಹಿ ಯೋಜನೆ ಪೂರ್ಣಗೊಂಡರೆ ನಗರಕ್ಕೆ 24 ಗಂಟೆಯೂ ನೀರು ಲಭಿಸಬಹುದು. ಈಗ ಪ್ರಾಯೋಗಿಕವಾಗಿ ನೀರು ಹರಿಸುತ್ತಿದ್ದೇವೆಅರ್ಕೇಶ್ ಗೌಡ ಕೆಯುಐಡಿಎಫ್‌ಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.