ADVERTISEMENT

ಲೋಕಸಭಾ ಚುನಾವಣೆ: 18ರಂದು ಮತದಾನ

ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತ ಚಲಾಯಿಸಲು ಅವಕಾಶ; ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 14:53 IST
Last Updated 16 ಏಪ್ರಿಲ್ 2019, 14:53 IST
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಂಗಳವಾರ ಕಚೇರಿಯಲ್ಲಿ ಮತದಾನದ ಮಹತ್ವ ಸಾರುವ ಮಾಹಿತಿಗಳನ್ನೊಳಗೊಂಡ ಕೊಡೆಯನ್ನು ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಂಗಳವಾರ ಕಚೇರಿಯಲ್ಲಿ ಮತದಾನದ ಮಹತ್ವ ಸಾರುವ ಮಾಹಿತಿಗಳನ್ನೊಳಗೊಂಡ ಕೊಡೆಯನ್ನು ಪ್ರದರ್ಶಿಸಿದರು.   

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಏ.18ರಂದು ನಡೆಯಲಿದ್ದು, ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮತದಾನ ಆರಂಭಕ್ಕೂ ಒಂದು ಗಂಟೆ ಮುನ್ನ ಪೋಲಿಂಗ್ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಲಾಗುವುದು. ಪ್ರತಿ ಬ್ಯಾಲೆಟ್‌ ಯುನಿಟ್‌ನಲ್ಲಿ 50 ಮತಗಳನ್ನು ಚಲಾಯಿಸಿ, ಬಳಿಕ ಅದನ್ನು ಅಳಿಸಿ ಮತದಾನ ಶುರುಮಾಡಲಾಗುವುದು ಎಂದರು.

ಅಂಗವಿಕಲ ಮತದಾರರಿಗೆ ಗಾಲಿ ಕುರ್ಚಿ, ಭೂತಕನ್ನಡಿ, ಬ್ರೈಲ್‌ ಲಿಪಿಯ ಮಾದರಿ ಮತಪತ್ರ, ರ‍್ಯಾಂಪ್‌ ನಿರ್ಮಾಣ, ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಚುನಾವಣಾ ಕರ್ತವ್ಯಕ್ಕಾಗಿ 206 ಮೈಕ್ರೋ ಅಬ್ಸರ್ವರ್, 6,489 ಸಿಬ್ಬಂದಿ ನಿಯೋಜಿಸಲಾಗಿದೆ. ಮತದಾರರಿಗೆ ಶೇ 99.5 ವೋಟರ್ ಸ್ಲಿಪ್‌ಗಳನ್ನು ವಿತರಿಸಲಾಗಿದೆ ಎಂದರು.

ADVERTISEMENT

ಜಿಪಿಎಸ್ ಅಳವಡಿಸಿರುವ 244 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಮತಯಂತ್ರಗಳನ್ನು ವಿಧಾನಸಭಾ ಕ್ಷೇತ್ರದ ಭದ್ರತಾ ಕೊಠಡಿಯಿಂದ, ಮತ ಎಣಿಕೆಯ ಕೇಂದ್ರವಾಗಿರುವ ಸೈಂಟ್ ಸಿಸಿಲಿಸ್ ಶಿಕ್ಷಣ ಸಂಸ್ಥೆಗೆ ತರುವ ಕಂಟೈನರ್ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಭದ್ರತಾ ಬೆಂಗಾವಲಿನಲ್ಲಿ ಭದ್ರತಾ ಕೊಠಡಿಗೆ ಕೊಂಡೊಯ್ಯಲಾಗುವುದು ಎಂದರು.

1,379 ಬ್ಯಾಲೆಟ್ ಯೂನಿಟ್, 1,280 ಕಂಟ್ರೋಲ್ ಯೂನಿಟ್, 1,477 ವಿವಿ ಪ್ಯಾಟ್‌ಗಳನ್ನು ಚುನಾವಣೆಗೆ ಬಳಸಲಾಗುವುದು. ಮತಯಂತ್ರಗಳ ನಿರ್ವಹಣೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರು ಬಿಇಎಲ್ ಕಂಪೆನಿಯ ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ.

54 ಮತಗಟ್ಟೆಗಳಿಗೆ ವೆಬ್ ಕ್ಯಾಮೆರಾ ಅಳವಡಿಕೆ, 15 ಮತಗಟ್ಟೆಗಳಿಗೆ ವೀಡಿಯೋ ಗ್ರಾಫರ್ಸ್‌ಗಳ ನಿಯೋಜನೆ, 21 ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ ಸಿಬ್ಬಂದಿ ನೇಮಿಸಲಾಗಿದೆ. ಚುನಾವಣ ಕರ್ತವ್ಯಕ್ಕೆ ನಿಯೋಜನೆಗೊಂಡವರಿಗೆ 584 ಅಂಚೆ ಮತಪತ್ರ, 3,619 ಇಡಿಸಿ ವಿತರಿಸಲಾಗಿದ್ದು, 575 ಸೇವಾ ಮತದಾರರಿಗೆ ಇಟಿಪಿಬಿಎಸ್ ಮೂಲಕ ಅಂಚೆ ಮತಪತ್ರ ಕಳುಹಿಸಲಾಗಿದೆ ಎಂದರು.

ಚುನಾವಣಾ ಅಕ್ರಮಗಳು ಕಂಡುಬಂದರೆ, ಮತದಾರರಿಗೆ ಆಮಿಷವೊಡ್ಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮತದಾನದ ದಿನ ಅಕ್ರಮಗಳು ಕಂಡುಬಂದರೆ ಸೀ ವಿಜಿಲ್ ಆ್ಯಪ್‌ ಅಥವಾ ಸಹಾಯವಾಣಿ 1950ಗೆ ಕರೆ ಮಾಡಿ ದೂರು ನೀಡಬಹುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಾತನಾಡಿ, ಜಿಲ್ಲೆಯಲ್ಲಿಸೂಕ್ಷ್ಮ, ಸಾಮಾನ್ಯ, ನಕ್ಸಲ್ ಪೀಡಿತ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಸೂಕ್ತ ಭದ್ರತೆ ಒದಗಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಪೊಲೀಸರ ಜತೆಗೆ, ಕಾರಾಗೃಹ ಇಲಾಖೆ, ಹೋಂಗಾರ್ಡ್ಸ್‌, ಅರಣ್ಯ ಗಾರ್ಡ್ಸ್‌ಗಳು, 4 ಕೆಎಸ್ಆರ್‌ಪಿ ತುಕಡಿ, 2 ಐಟಿಡಿಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದರು.

ನಕ್ಸಲ್ ಪೀಡಿತ ಪ್ರದೇಶದಲ್ಲಿ 8 ಬಾರಿ ಜಂಟಿ ಕೂಂಬಿಂಗ್ ನಡೆಸಲಾಗಿದೆ. ಚುನಾವಣೆಗೆ ಅಡ್ಡಿಪಡಿಸುವ ಸಾದ್ಯತೆ ಇರುವ 148 ಮಂದಿಯನ್ನು ಗುರುತಿಸಿದ್ದು, 127 ಮಂದಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಒಟ್ಟು ಮತದಾರರು–15,13,231

ಪುರುಷರು–7,38,503

ಮಹಿಳೆಯರು–7,74,674

ಇತರರು–54

ಮತಗಟ್ಟೆ ಸಂಖ್ಯೆ–1,837

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.