ADVERTISEMENT

ವಾರಾಂತ್ಯ ಕರ್ಫ್ಯೂ: ಸಂಚಾರಕ್ಕಿಲ್ಲ ನಿರ್ಬಂಧ

ಬಸ್‌ಗಳ ಸಂಚಾರಕ್ಕೆ ಅಡ್ಡಿ ಇಲ್ಲ: ಅಗತ್ಯ ವಸ್ತುಗಳ ಖರೀದಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 16:11 IST
Last Updated 8 ಜನವರಿ 2022, 16:11 IST
ವಾರಾಂತ್ಯದ ಕರ್ಫ್ಯೂ ದಿನವಾದ ಶನಿವಾರ ಉಡುಪಿಯ ಕೆಎಂ ಮಾರ್ಗ ಕಂಡುಬಂದಿದ್ದು ಹೀಗೆ.ಪ್ರಜಾವಾಣಿ ಚಿತ್ರ: ಉಮೇಶ್ ಮಾರ್ಪಳ್ಳಿ
ವಾರಾಂತ್ಯದ ಕರ್ಫ್ಯೂ ದಿನವಾದ ಶನಿವಾರ ಉಡುಪಿಯ ಕೆಎಂ ಮಾರ್ಗ ಕಂಡುಬಂದಿದ್ದು ಹೀಗೆ.ಪ್ರಜಾವಾಣಿ ಚಿತ್ರ: ಉಮೇಶ್ ಮಾರ್ಪಳ್ಳಿ   

ಉಡುಪಿ: ಹೆಚ್ಚುತ್ತಿರುವ ಕೋವಿಡ್‌–19 ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಜ.19ರವರೆಗೆ ಹೆಚ್ಚುವರಿ ನಿಯಂತ್ರಣಾ ಕ್ರಮ ಹಾಗೂ ವಾರಾಂತ್ಯದ ಕರ್ಫ್ಯೂ ಹಾಕಲಾಗಿದ್ದು, ಜಿಲ್ಲೆಯಲ್ಲೂ ವೀಕೆಂಡ್‌ ಕರ್ಫ್ಯೂ ಜಾರಿಯಾಗಿತ್ತು. ಆದರೆ, ಹಿಂದಿನಂತೆ ಜನಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಇರಲಿಲ್ಲ. ಜನ ಸಂಚಾರ ಕಂಡುಬಂತು.

ಈ ಬಾರಿ ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ವಿಸ್ತರಿಸಿದ್ದರಿಂದ ಬೆಳಿಗ್ಗೆ ಮಾರುಕಟ್ಟೆಯಲ್ಲಿ ದಟ್ಟಣೆ ಹೆಚ್ಚಾಗಿರಲಿಲ್ಲ. ಕೆಎಸ್‌ಆರ್‌ಟಿಸಿ, ಖಾಸಗಿ ಹಾಗೂ ನಗರ ಸಾರಿಗೆ ಬಸ್‌ಗಳ ಸಂಚಾರವೂ ಇದ್ದಿದ್ದರಿಂದ ಸಾರ್ವಜನಿಕರ ಓಡಾಟವೂ ಕಂಡುಬಂತು. ಕರ್ಫ್ಯೂ ಅನುಭವವಾಗಲಿಲ್ಲ. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಸಾರ್ವಜನಿಕರು ಕಾರು, ಬೈಕ್‌ಗಳಲ್ಲಿ ಓಡಾಡುತ್ತಿದ್ದ ದೃಶ್ಯ ಕಂಡುಬಂತು. ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಪಾರ್ಸೆಲ್‌ ವ್ಯವಸ್ಥೆ ಇತ್ತು. ಹೋಂ ಡೆಲಿವರಿಗೂ ವ್ಯವಸ್ಥೆ ಮಾಡಲಾಗಿತ್ತು. ಬೇಕರಿಗಳು, ಹಣ್ಣು ತರಕಾರಿ ಅಂಗಡಿಗಳು, ಹೂ ಮಾರಾಟ ಕೇಂದ್ರಗಳು, ಕಿರಾಣಿ ಅಂಗಡಿಗಳು, ಮೀನು ಮಾಂಸ ಮಾರಾಟ, ಪ್ರಾಣಿಗಳ ಮೇವು ಮಾರಾಟ ಮಳಿಗೆಗಳು ಎಂದಿನಂತೆ ತೆರೆದಿದ್ದವು. ಆದರೆ, ದಟ್ಟಣೆ ಕಡಿಮೆ ಇತ್ತು.

ADVERTISEMENT

ಮೆಡಿಕಲ್‌ ಶಾಪ್‌ಗಳು, ಪೆಟ್ರೋಲ್ ಬಂಕ್‌ಗಳು, ಹಾಲಿನ ಬೂತ್‌ಗಳು, ಆಸ್ಪತ್ರೆಗಳು ಎಂದಿನಂತೆ ತೆರೆದಿದ್ದವು. ಬಟ್ಟೆ ಅಂಗಡಿಗಳು, ಮಾಲ್‌ಗಳು, ವ್ಯಾಪಾರ ಮಳಿಗೆಗಳು, ಚಿತ್ರಮಂದಿರಗಳು, ಉದ್ಯಾನಗಳು, ಶಾಲಾ ಕಾಲೇಜುಗಳು ಬಂದ್ ಆಗಿದ್ದವು. ಸೋಮವಾರ ಬೆಳಿಗ್ಗೆ 5ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದ್ದು, ರ‍್ಯಾಲಿ, ಧರಣಿ, ಪ್ರತಿಭಟನೆಗಳಿಗೆ ನಿಷೇಧವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.