ADVERTISEMENT

ಭಾರತ ಎಚ್ಚರವಾದರೆ ವಿಶ್ವ ಎಚ್ಚರ

ದುರ್ಗಾದೌಡ್ ಕಾರ್ಯಕ್ರಮದಲ್ಲಿ ವರ್ಚುವಲ್ ಸಂದೇಶ ನೀಡಿದ ಸಂಸದೆ ಸಾದ್ವಿ ಪ್ರಗ್ಯಾಸಿಂಗ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 3:57 IST
Last Updated 3 ಅಕ್ಟೋಬರ್ 2022, 3:57 IST
ಹಿಂದೂ ಜಾಗರಣ ವೇದಿಕೆಯಿಂದ ಭಾನುವಾರ ನಗರದಲ್ಲಿ ದುರ್ಗಾದೌಡ್ ಕಾರ್ಯಕ್ರಮ ನಡೆಯಿತು.
ಹಿಂದೂ ಜಾಗರಣ ವೇದಿಕೆಯಿಂದ ಭಾನುವಾರ ನಗರದಲ್ಲಿ ದುರ್ಗಾದೌಡ್ ಕಾರ್ಯಕ್ರಮ ನಡೆಯಿತು.   

ಉಡುಪಿ: ಭಾರತ ಎಚ್ಚರವಾದರೆ ವಿಶ್ವ ಎಚ್ಚರವಾಗುತ್ತದೆ, ಹಿಂದೂಗಳು ಎಚ್ಚರವಾದರೆ ವಿಶ್ವ ಎಚ್ಚರವಾಗುತ್ತದೆ. ಇದಕ್ಕೆ ಪೂರಕವಾಗಿ ಹಿಂದೂಗಳು ಜಾಗೃತರಾಗಬೇಕು, ಜಾಗೃತಗೊಳಿಸಬೇಕು. ಭಾರತವನ್ನು ವಿಶ್ವಗುರು ಸ್ಥಾನಕ್ಕೇರಿಸುವ ಸಂಕಲ್ಪ ಮಾಡಬೇಕು ಎಂದು ಸಂಸದೆ ಸಾದ್ವಿ ಪ್ರಗ್ಯಾಸಿಂಗ್ ಹೇಳಿದರು.

ಹಿಂದೂ ಜಾಗರಣ ವೇದಿಕೆಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ದುರ್ಗಾದೌಡ್ ಮೆರವಣಿಗೆ ಸಂದರ್ಭ ವರ್ಚುವಲ್ ಸಂದೇಶ ನೀಡಿದ ಅವರು, ಹಿಂದೂಗಳು ಜಾಗೃತರಾದರೆ ಭಾರತ ವಿಶ್ವಕ್ಕೆ ಆಧ್ಯಾತ್ಮ, ತ್ಯಾಗ, ವೈರಾಗ್ಯ ಹಾಗೂ ರಾಷ್ಟ್ರ ಜಾಗೃತಿಯ ಸಂದೇಶ ನೀಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ನಾಯಕಿ ಕಾಜಲ್ ಹಿಂದೂಸ್ತಾನಿ ಮಾತನಾಡಿ, ‘ಹೆಣ್ಣುಮಕ್ಕಳ ರಕ್ಷಣೆ, ಶಿಕ್ಷಣಕ್ಕೆ ಒತ್ತು ನೀಡುವುದರ ಜತೆಗೆ ಅವರಿಗೆ ತಲವಾರುಗಳನ್ನು ಕೊಟ್ಟು ಸಶಕ್ತಗೊಳಿಸಬೇಕು. ಲವ್ ಜಿಹಾದ್‌ಗೆ ಬಲಿಯಾಗದಂತೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಕರೆ ನೀಡಿದರು.

ADVERTISEMENT

ವಕ್ಫ್‌ ಹೆಸರಿನಲ್ಲಿ ಹಿಂದೂಗಳ ಆಸ್ತಿಯನ್ನು ಕಬಳಿಸಲಾಗುತ್ತಿದೆ. 2010ರಲ್ಲಿ 4 ಲಕ್ಷ ಎಕರೆಯಿದ್ದ ವಕ್ಫ್‌ ಆಸ್ತಿ 8 ಲಕ್ಷಕ್ಕೆ ಹೆಚ್ಚಳವಾಗಿದೆ. ತಮಿಳುನಾಡಿನಲ್ಲಿ ಒಂದು ಹಳ್ಳಿ ಪೂರ್ತಿಯಾಗಿ ವಕ್ಫ್‌ಗೆ ಸೇರಿದೆ. ಹಿಂದೂಗಳ ಆಸ್ತಿ ಕಬಳಿಕೆ ವಿರುದ್ಧ ಕೆಳ ಹಂತದ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸುವ ಅವಕಾಶವೂ ಇಲ್ಲ ಎಂದು ದೂರಿದರು.

ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂ ರಾಷ್ಟ್ರದ ಕನಸನ್ನು ಹೊತ್ತಿರುವ ಸಮರ್ಪಣಾ ಭಾವದಿಂದ ಹಗಲಿರುಳು ದುಡಿಯುವ ಸೈನಿಕರು ದುರ್ಗಾ ದೌಡ್ ಪಥ ಸಂಚಲನದಲ್ಲಿ ಹಿಂದೂಗಳು ಸ್ವಾವಲಂಬಿಯಾಗಿ ಬದುಕಬೇಕು ಎಂಬ ದೃಢ ಸಂದೇಶವನ್ನು ನೀಡಿದ್ದಾರೆ ಎಂದರು.

ಖಡ್ಗ ಹಿಡಿದು ಮೆರವಣಿಗೆ ಮಾಡುವುದು ಸಂಸ್ಕೃತಿ ಪರಂಪರೆಯಾದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ಸಂಚು ನಡೆಯುತ್ತದೆ. ಪಿಎಫ್‌ಐ ಹಾಗೂ ಹಿಂದೂ ಜಾಗರಣ ವೇದಿಕೆಯನ್ನು ಒಟ್ಟಾಗಿ ನೋಡುವ ಕೆಲಸವನ್ನು ಎಡಪಂಥೀಯರು ಮಾಡುತ್ತಾರೆ. ಹಾಗಾಗಿ, ಬಹಿರಂಗವಾಗಿ ಖಡ್ಗಗಳನ್ನು ಪ್ರದರ್ಶನ ಮಾಡುವ ಅಗತ್ಯವಿಲ್ಲ. ಯಾವ ಸಂದರ್ಭದಲ್ಲಿ ಬಳಕೆ ಮಾಡಬೇಕೋ ಆಗ ಬಳಕೆ ಮಾಡಲು ಸಿದ್ಧರಿದ್ಧೇವೆ ಎಂದರು.

ಜಾತಿ, ಮತ, ಪಂಥ ಹಾಗೂ ಪ್ರಾದೇಶಿಕ ವಿಚಾರಗಳಲ್ಲಿ ಹರಿದು ಹಂಚಿಹೋಗಿರುವ ಹಿಂದೂ ಸಮಾಜವನ್ನು ಏಕಸೂತ್ರದಡಿ ತರಬೇಕು ಎಂಬುದು ಸಂಘದ ನಿರ್ಣಯವಾಗಿದ್ದು, ಪ್ರತಿ ಮನೆ ಮನೆಗೂ ಸಂಘ ತಲುಪಬೇಕು. ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ಶಸ್ತ್ರಗಳ ಪೂಜೆ ನಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಎಂ.ಅಣ್ಣಯ್ಯ ಕುಲಾಲ್‌, ಸುಮತಾ ರಮೇಶ್ ನಾಯಕ್, ಎರ್ಮಾಳ್ ಹರೀಶ್ ಶೆಟ್ಟಿ, ವಿಶ್ವನಾಥ್ ಪೂಜಾರಿ, ಧರ್ಮಪಾಲ್ ದೇವಾಡಿಗ, ರತ್ನಾಕರ ಶೆಟ್ಟಿ, ಅರವಿಂದ ಆನಂದ್ ಶೆಟ್ಟಿ, ಮಹೇಶ್ ಶೆಟ್ಟಿ ಕುಡುಪಲಾಜೆ, ಗೋಕುಲ್‌ದಾಸ್ ಬಾರ್ಕೂರ್, ಮಧು ಆಚಾರ್ಯ, ಉಮೇಶ್ ನಾಯಕ್ ಸೂಡಾ, ಡಾ.ರವಿರಾಜ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.