ADVERTISEMENT

ಪೂರ್ಣ ವೇತನಕ್ಕೆ ಅಲೆದು ದಣಿದ ಕಲಾವಿದರು

ಕಮಶಿಲೆ ಮೇಳ: ಸರ್ಕಾರ, ಜಿಲ್ಲಾಡಳಿತದ ಆದೇಶಕ್ಕೂ ಬೆಲೆ ಇಲ್ಲ!

ಸಂದೇಶ್ ಶೆಟ್ಟಿ ಆರ್ಡಿ
Published 26 ಅಕ್ಟೋಬರ್ 2021, 3:40 IST
Last Updated 26 ಅಕ್ಟೋಬರ್ 2021, 3:40 IST
ಸರ್ಕಾರದ ಆದೇಶ ಪ್ರತಿ 
ಸರ್ಕಾರದ ಆದೇಶ ಪ್ರತಿ    

ಸಿದ್ದಾಪುರ: ಸರ್ಕಾರದ ಆದೇಶ, ಜಿಲ್ಲಾಡಳಿತದ ಸೂಚನೆ ಬಳಿಕವೂ ಲಾಕ್‌ಡೌನ್ ಅವಧಿಯ ಪೂರ್ಣ ವೇತನ ಪಡೆಯಲು ಸಾಧ್ಯವಾಗದ ಯಕ್ಷಗಾನ ಕಲಾವಿದರು, ಅದಕ್ಕಾಗಿ ಕಚೇರಿಗಳಿಗೆ ಅಲೆದಾಡಿ ಹೈರಾಣಾಗಿದ್ದಾರೆ.

ಕೋವಿಡ್ ಹಾಗೂ ಲಾಕ್‌ಡೌನ್‌ ಪರಿಣಾಮ ಸಂಕಷ್ಟಕ್ಕೆ ಸಿಲುಕಿದಕಲಾವಿದರಿಗೆ ಪೂರ್ಣ (ಕಡಿತ ಮಾಡದೇ) ವೇತನ ಪಾವತಿಸುವಂತೆ ಸರ್ಕಾರವು ಜೂನ್ 23ರಂದು ಆದೇಶಿಸಿತ್ತು. ಆದೇಶದ ಅನ್ವಯ ವೇತನನ್ನು ನೀಡಿ ಎಂದುಕಮಲಶಿಲೆ ಮೇಳದ ಕಲಾವಿದರು ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮಂಡಳಿಯ ಮೊರೆ ಹೋಗಿದ್ದರು. ಸರ್ಕಾರ ಆದೇಶ ಬಂದು ನಾಲ್ಕು ತಿಂಗಳು ಕಳೆದರೂ, ಪೂರ್ಣ ವೇತನ ಲಭಿಸದ ಕಾರಣ ಜೀವನ ನಿರ್ವಹಣೆಗೆ ಹೈರಾಣಾಗಿದ್ದೆವೆ ಎಂದು ನೋವು ತೋಡಿಕೊಂಡಿದ್ದಾರೆ.

ತಿರುಗಾಟ:

ADVERTISEMENT

ಯಕ್ಷಗಾನ ಮೇಳಗಳು ನವೆಂಬರ್‌ನಿಂದ ಮುಂದಿನ ವರ್ಷದ ಮೇ ತನಕ ವೃತ್ತಿ ತಿರುಗಾಟ ನಡೆಸುವುದು ವಾಡಿಕೆ. ಈ ನಡುವೆ ಸುಮಾರು 180ರಿಂದ 190 ಪ್ರದರ್ಶನಗಳು ನಡೆಯುತ್ತವೆ. ಕಲಾವಿದರ ಜೊತೆ ಆರು ತಿಂಗಳ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ವರ್ಷಾವಧಿ ವೇತನದ ಬೇಡಿಕೆ ಇದ್ದರೂ, ನೀಡಿದ ಉದಾಹರಣೆಗಳಿಲ್ಲ‌. ಆದರೆ, ಈ ಬಾರಿ ಕೋವಿಡ್‌ ಲಾಕ್‌ಡೌನ್ ಕಾರಣ ಪ್ರದರ್ಶನ ಸ್ಥಗಿತಗೊಂಡು ಕಲಾವಿದರ ಬದುಕು ನಿರ್ವಹಣೆ ದುಸ್ತರವಾಗಿತ್ತು.

ಸಚಿವರ ಆದೇಶ:

ಯಕ್ಷಗಾನ ಕಲಾವಿದರು ಅಂದಿನ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನದ ಮೇಳಗಳು ಕಲಾವಿದರಿಗೆ ಒಪ್ಪಂದ ಪ್ರಕಾರ ವೇತನ ನೀಡುವಂತೆ ಕ್ರಮಕೈಗೊಳ್ಳಲು ಮನವಿ ಸಲ್ಲಿಸಿದ್ದರು. ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ವೇತನ ನೀಡುವಂತೆ ಸರ್ಕಾರ ಆದೇಶಿಸಿತ್ತು. ಅದರಂತೆ ಮಂದಾರ್ತಿ, ಅಮೃತೇಶ್ವರಿ, ಮಾರಣಕಟ್ಟೆ ಮೇಳಗಳು ಪೂರ್ಣ ವೇತನ ನೀಡಿದ್ದವು. ಆದರೆ ಪ್ರವರ್ಗ ‘ಎ’ ವ್ಯಾಪ್ತಿಯಲ್ಲಿರುವ ಕಮಲಶಿಲೆ ದೇವಳವು ಪೂರ್ಣ ವೇತನ ಪಾವತಿಸಿಲ್ಲ ಎಂದು ಅಲ್ಲಿನ ಕಲಾವಿದರು ದೂರಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಆದೇಶ:

‘ಕಮಲಶಿಲೆ ಎರಡೂ ಮೇಳಗಳಲ್ಲಿ ಸುಮಾರು 80ಕ್ಕೂ ಅಧಿಕ ಕಲಾವಿದರು ಹಾಗೂ ನೇಪಥ್ಯ ಕೆಲಸಗಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೂರ್ಣ ವೇತನ ನೀಡುವಂತೆ ಕಲಾವಿದರು ಮತ್ತು ಕಾರ್ಮಿಕರು ಒಂದಾಗಿ ದೇವಳದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದು, ಆಡಳಿತ ಮಂಡಳಿಯವರು ವೇತನ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆಗಸ್ಟ್ 6ರಂದು ಉಡುಪಿಯ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಆಗಸ್ಟ್ 24ರಂದು ಅವರು ನಿರ್ದೇಶನ ನೀಡಿದ್ದರೂ, ಆಡಳಿತ ಮಂಡಳಿ ಸ್ಪಂದಿಸಿಲ್ಲ. ಬಳಿಕ ಸೆಪ್ಟೆಂಬರ್ 14ರಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೆವು. ಆದರೆ, ಇದುವರೆಗೆ ಪೂರ್ಣ ವೇತನ ನೀಡಿಲ್ಲ. ಕೇವಲ 140 ದಿನದ ಲೆಕ್ಕಾಚಾರ ಮಾಡಿ ಕಳುಹಿಸಿದ್ದಾರೆ’ ಎಂದು ಕಲಾವಿದರು ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.