ADVERTISEMENT

‘ಮಕ್ಕಳಿಂದ ಮಕ್ಕಳಿಗೆ ಯಕ್ಷ ಕಲಿಕೆ’

ಯಡಾಡಿ-ಮತ್ಯಾಡಿಯಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:09 IST
Last Updated 29 ಅಕ್ಟೋಬರ್ 2025, 4:09 IST
ಕುಂದಾಪುರ ತಾಲ್ಲೂಕಿನ ಯಡಾಡಿ-ಮತ್ಯಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ಯಲ್ಲಿ ಶೈಲಾ ಎಂ. ಶೇಟ್ ದೀಪ ಬೆಳಗಿದರು
ಕುಂದಾಪುರ ತಾಲ್ಲೂಕಿನ ಯಡಾಡಿ-ಮತ್ಯಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ಯಲ್ಲಿ ಶೈಲಾ ಎಂ. ಶೇಟ್ ದೀಪ ಬೆಳಗಿದರು   

ಕುಂದಾಪುರ: ಸರ್ಕಾರಿ ವ್ಯವಸ್ಥೆಯ ವಸತಿ ನಿಲಯದ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಯಕ್ಷಗಾನದ ಮೂಲ ಸ್ವರೂಪವನ್ನು ಬಿತ್ತರಿಸುವ ಕಾರ್ಯ ಅಮೂಲ್ಯವಾದದ್ದು. ದಿನವಿಡೀ ಓದು ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ನಿರತರಾದ ಮಕ್ಕಳಿಗೆ, ಮಕ್ಕಳಿಂದಲೇ ಯಕ್ಷಗಾನದ ಪರಂಪರೆಯನ್ನು ತಿಳಿಸುವ ಪ್ರಯತ್ನ ಶ್ಲಾಘನೀಯ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶೈಲಾ ಎಂ. ಶೇಟ್ ಹೇಳಿದರು.

ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ ಆಶ್ರಯದಲ್ಲಿ ಯಡಾಡಿ- ಮತ್ಯಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಪ್ರಸಂಗ- ಪ್ರಯೋಗ– ಪ್ರಾತ್ಯಕ್ಷಿಕೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಂಗದಲ್ಲಿ ಕಳೆದು ಹೋದ ಯಕ್ಷಗಾನದ ಯುದ್ಧ ಕುಣಿತ, ಪ್ರಯಾಣ ಕುಣಿತ, ಕಿರಾತನ ಒಡ್ಡೋಲಗವನ್ನು ಬಳಸಿಕೊಂಡು ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುವ ಬಗೆಯನ್ನು ಯಶಸ್ವಿ ಕಲಾವೃಂದ ಮಾಡುತ್ತಿದೆ. ಈ ಶಾಸ್ತ್ರೀಯ ಕಲೆಯನ್ನು ಮಕ್ಕಳಿಗೆ ಕಲಿಸಿದರೆ ಇದನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ. ಇಂತಹ ಹಲವು ಪ್ರಕಾರಗಳನ್ನು ಉಳಿಸುವ ಯತ್ನ ನಡೆದಿದೆ ಎಂದು ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ಹೇಳಿದರು.

ADVERTISEMENT

ಯಲ್ಲಾಪುರ ಗಣಪತಿ ಭಟ್, ಸುಬ್ರಹ್ಮಣ್ಯ ವೈದ್ಯ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ವಿದ್ಯಾರ್ಥಿ ಹರೀಶ್ ಕಾವಡಿ, ರಂಗ ನಿರ್ದೇಶಕ ಶ್ರೀಶ ಭಟ್ ತೆಕ್ಕಟ್ಟೆ ಇದ್ದರು. ಸಭಾ ಕಾರ್ಯಕ್ರಮದ ಬಳಿಕ ಯಶಸ್ವಿ ಕಲಾವೃಂದದ ಮಕ್ಕಳಿಂದ ‘ಪ್ರಸಂಗ- ಪ್ರಯೋಗ- ಪ್ರಾತ್ಯಕ್ಷಿಕೆ’ ರಂಗ ಪ್ರಸ್ತುತಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.