ADVERTISEMENT

ಇಸ್ರೇಲ್‌ನಲ್ಲಿ ಯಕ್ಷಗಾನದ ಕಂಪು: ‘ಕಂಸ ವಧೆ’ ಯಕ್ಷಗಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:56 IST
Last Updated 9 ನವೆಂಬರ್ 2025, 4:56 IST
ಇಸ್ರೇಲ್‌ನಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಬೆಂಗಳೂರಿನ ಯಕ್ಷದೇಗುಲ ತಂಡವನ್ನು ಗೌರವಿಸಲಾಯಿತು
ಇಸ್ರೇಲ್‌ನಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಬೆಂಗಳೂರಿನ ಯಕ್ಷದೇಗುಲ ತಂಡವನ್ನು ಗೌರವಿಸಲಾಯಿತು   

ಬ್ರಹ್ಮಾವರ: ಇಸ್ರೇಲ್‌ನ ಪೆಟಾ ಟಿಕ್ವಾದಲ್ಲಿ ನಡೆದ ಹಡೋಫೆನ್ ಫ್ರಿಂಜ್ ರಂಗಭೂಮಿ ಉತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರಿನ ಯಕ್ಷದೇಗುಲ ತಂಡ ‘ಕಂಸ ವಧೆ’ ಮತ್ತು ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನ ನೀಡಿತು.

ಇಸ್ರೇಲ್ ನಗರದ ಪುರಸಭೆಗಳು, ಹಡೋಫೆನ್ ರಂಗಮಂದಿರದ ಸಹಯೋಗದೊಂದಿಗೆ ಇಸ್ರೇಲ್‌ನಲ್ಲಿನ ರಾಯಭಾರ ಕಚೇರಿಯ ಸಹಭಾಗಿತ್ವದಲ್ಲಿ ನಡೆದ ಈ ಪ್ರದರ್ಶನಕ್ಕೆ ಭಾರತದ ರಾಯಭಾರಿ ಜೆ.ಪಿ.ಸಿಂಗ್, ಪೆಟಾ ಟಿಕ್ವಾ ಮೇಯರ್ ರಾಮಿ ಗ್ರೀನ್‌ಬರ್ಗ್ ಚಾಲನೆ ನೀಡಿದರು.

ಮೇಯರ್ ರಾಮಿ ಗ್ರೀನ್‌ಬರ್ಗ್ ಮಾತನಾಡಿ, ಭಾರತದ ಈ ಸಾಂಸ್ಕೃತಿಕ ತಂಡ ಭಾರತ ಮತ್ತು ಇಸ್ರೇಲ್ ಸರ್ಕಾರದಿಂದ ಸರ್ಕಾರಿ ಮಟ್ಟದಲ್ಲಿ ಉತ್ತಮ ಸಂಬಂಧಗಳನ್ನು ಹಂಚಿಕೊಳ್ಳುವುದಲ್ಲದೆ, ಜನರ ನಡುವಿನ ಸಂಬಂಧವನ್ನು ಹಂಚಿಕೊಳ್ಳುತ್ತದೆ ಎಂದರು.

ADVERTISEMENT

ಇಸ್ರೇಲ್‌ನ ಭಾರತದ ರಾಯಭಾರಿ ಜೆ.ಪಿ.ಸಿಂಗ್ ಮಾತನಾಡಿ, ಎರಡೂ ರಾಷ್ಟ್ರಗಳು ಎಷ್ಟು ವಿಶೇಷ ಸಂಬಂಧವನ್ನು ಹೊಂದಿವೆ ಎನ್ನುವುದನ್ನು ಪ್ರದರ್ಶನ ತೋರಿಸಿದೆ. ಯಕ್ಷದೇಗುಲ ತಂಡವು ಯಕ್ಷಗಾನದ ಸಂಪ್ರದಾಯ ಸಂರಕ್ಷಿಸಲು, ಮರುಕಲ್ಪಿಸಲು ಸಮರ್ಪಿತವಾಗಿದೆ. ಇದು ಇಸ್ರೇಲ್‌ನಲ್ಲಿ ನಡೆದ ಮೊದಲ ಯಕ್ಷಗಾನ ಪ್ರದರ್ಶನ. ಪ್ರೇಕ್ಷಕರಿಗೆ ಭಾರತದ ಅತ್ಯಂತ ರೋಮಾಂಚಕ, ಅಭಿವ್ಯಕ್ತಿಶೀಲ ನಾಟಕ ಸಂಪ್ರದಾಯಗಳಲ್ಲಿ ಒಂದರ ಅಪರೂಪದ ನೋಟ ನೀಡಿದೆ ಎಂದು ಹೇಳಿದರು.

ಇಸ್ರೇಲ್‌ನ ಶಾಲಾ ಶಿಕ್ಷಕಿ ಓರ್ನಾರೂಚಿನ್ ಅನುಭವ ಹಂಚಿಕೊಂಡರು. ಕೆ. ಮೋಹನ್ ಯಕ್ಷದೇಗುಲ ತಂಡದ ಉಸ್ತುವಾರಿ ವಹಿಸಿಕೊಂಡಿದ್ದರು. ಕಲಾವಿದರಾದ ಸುದರ್ಶನ ಉರಾಳ, ಪ್ರಿಯಾಂಕ ಕೆ. ಮೋಹನ್, ಲಂಬೋದರ ಹೆಗಡೆ, ಸುಜಯೀಂದ್ರ ಹಂದೆ, ಉದಯ ಕಡಬಾಳ, ದಿನೇಶ ಕನ್ನಾರು, ವಿಶ್ವನಾಥ ಉರಾಳ, ಸುದೀಪ ಉರಾಳ, ದೇವರಾಜ ಕರಬ, ಶ್ರೀರಾಮ ಹೆಬ್ಬಾರ್, ವಿದ್ಯಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.