ADVERTISEMENT

ಅಜ್ಜಿಯ ಯುಗಾದಿಗೆ ನೂರರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2011, 9:45 IST
Last Updated 27 ಮಾರ್ಚ್ 2011, 9:45 IST
ಅಜ್ಜಿಯ ಯುಗಾದಿಗೆ ನೂರರ ಸಂಭ್ರಮ
ಅಜ್ಜಿಯ ಯುಗಾದಿಗೆ ನೂರರ ಸಂಭ್ರಮ   

ಸಿದ್ದಾಪುರ: ಈ ಅಜ್ಜಿ ಇದೇ ಯುಗಾದಿ (ಏ.4) ಗೆ ನೂರನೇ ವರ್ಷಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ತಾಲ್ಲೂಕಿನ ಕಾನಗೋಡಿನ ಈರಮ್ಮ ವೀರಬಸಪ್ಪ ಕುಂಬಾರ ಎಂಬ ಈ ಶತಾಯುಷಿ ಅಜ್ಜಿ ಮದುವೆಯಾಗಿದ್ದು ತನ್ನ 13ನೇ ವಯಸ್ಸಿನಲ್ಲಿ. ಈಕೆಯ ಪತಿ ವೀರಬಸಪ್ಪನವರೂ ತಾಲ್ಲೂಕಿನ ಕಾನಗೋಡಿನವರು. ಈಕೆಯ ತವರು ಮನೆಯೂ ಕೂಡ ಕಾನಗೋಡಿನ ಮತ್ತೊಂದು ಕೇರಿ. ಆದ್ದರಿಂದ ಈರಮ್ಮನ ತವರುಮನೆ ಮತ್ತು ಗಂಡನ ಮನೆಗಳೆರಡೂ ಒಂದೇ ಊರಿನಲ್ಲಿವೆ.

ಈರಮ್ಮನವರನ್ನು ಆಗಿನ ಕಾಲದ ಸಂಪ್ರದಾಯದಂತೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಟ್ಟರು. ಆ ನಂತರ ಆಕೆಗೆ ನಾಲ್ಕು ಗಂಡುಮಕ್ಕಳು ಜನಿಸಿದ್ದರೂ, ಹುಟ್ಟಿದ ಒಂದು ವರ್ಷದ ಅವಧಿಯೊಳಗೆ ತೀರಿಕೊಂಡರಂತೆ. ಆದ್ದರಿಂದ ವೀರಬಸಪ್ಪ ಮತ್ತು ಈರಮ್ಮ ದಂಪತಿ ತಮ್ಮ ಕುಟುಂಬದ ಹುಡುಗನೇ ಆಗಿದ್ದ ಚನ್ನಬಸಪ್ಪ ಅವರನ್ನು ಸಾಕು ಮಗನಾಗಿ ಸ್ವೀಕರಿಸಿ ಸಾಕಿದರು. ಈರಮ್ಮನವರ ಪತಿಯೂ ದೈವಾಧೀನರಾಗಿ ಸುಮಾರು ಐವತ್ತು ವರ್ಷಗಳೇ ಕಳೆದುಹೋಗಿವೆ.

ಈಗ ಚನ್ನಬಸಪ್ಪ ಅವರ ಕುಟುಂಬವೂ ಕೂಡ ಈರಮ್ಮ ಅವರನ್ನು ಹೆತ್ತ ತಾಯಿಯಂತೆ ನೋಡಿಕೊಳ್ಳುತ್ತಿದೆ. ವರ್ಷ ನೂರಾದರೂ ಈರಮ್ಮ ಸಾಕಷ್ಟು ಗಟ್ಟಿಮುಟ್ಟಾಗಿದ್ದಾಳೆ. ತನ್ನ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುತ್ತಾಳೆ. ತಮ್ಮ ಕುಟುಂಬದ ವೃತ್ತಿಯಾಗಿರುವ ಕುಂಬಾರಿಕೆಯಲ್ಲಿಯೂ ಮಗನಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾಳೆ. ‘ಮಣ್ಣಿನ ಹಣತೆ ಮಾಡಿ ಕೊಡುತ್ತೇನೆ, ಪ್ಯಾಟೆಯಾಗೆ ಮಾರಾಟ ಮಾಡಿಕೋ’ ಎಂದು ಚನ್ನಬಸಪ್ಪನಿಗೆ ಹೇಳುತ್ತಾಳೆ.
 

ADVERTISEMENT

‘ಅಜ್ಜಿ ದೇವರ ಪೂಜೆ ಮಾಡುತ್ತಾಳೆ. ಸೊಂಟ ಕೊಂಚ ಬಾಗಿದಂತಿದ್ದರೂ ಚೆನ್ನಾಗಿಯೇ ಒಡಾಡುತ್ತಾಳೆ, ಕಣ್ಣು ಮತ್ತು ಕಿವಿ ಮಂದವಾಗಿದ್ದರೂ, ಸರಿಯಾಗಿವೆ’ ಎನ್ನುತ್ತಾಳೆ ಈ ಅಜ್ಜಿಯ ಮೊಮ್ಮಗಳು. ಅಜ್ಜಿ ಶತಕವನ್ನು ಯಶಸ್ವಿಯಾಗಿ ಪೂರೈಸಲಿ, ನೂರು ದಾಟಿ ಮುಂದುವರಿಯಲಿ ಎಂಬುದು ಈಕೆಯ ಕುಟುಂಬದವರ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.