ಸಿದ್ದಾಪುರ: ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರಣ್ಯ ಒತ್ತುವರಿದಾರರಿಗೆ ಅನ್ಯಾಯವಾಗದಂತೆ ಅವರ ಬೇಡಿಕೆಯನ್ನು ಪುನರ್ ಪರಿಶೀಲನೆ ನಡೆಸುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿರುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾ ಅರಣ್ಯ ಅತಿಕ್ರಮಣದಾರರ ಹೋರಾಟ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಿಂದ ಅರಣ್ಯ ಒತ್ತುವರಿದಾರರಲ್ಲಿ ಆಶಾಭಾವನೆ ಮೂಡುವಂತಾಗಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗಳು ವಿಚಾರಣೆ ಹಂತದಲ್ಲಿರುವಾಗ ಆ ಅರ್ಜಿದಾರರನ್ನು ಒಕ್ಕಲೆಬ್ಬಿಸಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಜಮೀನಿನ ಸಾಗುವಳಿಗೆ ಅಧಿಕಾರಿಗಳು ಆತಂಕಪಡಿಸದಂತೆ ಆ ಸಭೆ ನಿರ್ದೇಶನ ನೀಡಿದೆ. ಈ ನಿರ್ಣಯದಿಂದ ಜಿಲ್ಲೆಯ ಅತಿಕ್ರಮಣದಾರರಿಗೆ ನೆಮ್ಮದಿ ದೊರಕಿದೆ ಎಂದು ಹೇಳಿದ್ದಾರೆ.
ಅರಣ್ಯ ಭೂಮಿ ಮಂಜೂರಿಗಾಗಿ ಕೇಂದ್ರ ಸರ್ಕಾರ 2005ರಲ್ಲಿ ಬುಡಕಟ್ಟು ಮತ್ತು ಇತರ ಪಾರಂಪಾರಿಕ ಅರಣ್ಯವಾಸಿಗಳ ಅರಣ್ಯಹಕ್ಕು ಕಾಯ್ದೆ ಜಾರಿಗೆ ತಂದಿತು.ಆದರೆ ರಾಜ್ಯದಲ್ಲಿ ಆ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಅಂದಿನ ಬಿಜೆಪಿ ಸರ್ಕಾರ ವಿಫಲವಾಯಿತು.ಇದರಿಂದ ಅತಿಕ್ರಮಣದಾರರು ಅರಣ್ಯಭೂಮಿಯ ಹಕ್ಕಿನಿಂದ ವಂಚಿತರಾದರು. ಜಿಲ್ಲೆಯಲ್ಲಿ 45 ಸಾವಿರ ಅರಣ್ಯ ಒತ್ತುವರಿದಾರರ ಅರ್ಜಿಯನ್ನು ಸರ್ಕಾರ ವಜಾಗೊಳಿಸಿತು. ಆಗ ಹೋರಾಟ ವೇದಿಕೆಯು ಜಿಲ್ಲೆಯ 96 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 25ಸಾವಿರ ಅರಣ್ಯ ಒತ್ತುವರಿದಾರರರಿಗೆ ಉಚಿತವಾಗಿ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಿತು ಎಂದು ಅವರು ವಿವರಿಸಿದ್ದಾರೆ.
ವಿಧಾನಸಭಾ ಅಧ್ಯಕ್ಷರ ಭೇಟಿ: ತಾವು ಈಚೆಗೆ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿದ್ದು, ರಾಜ್ಯದಲ್ಲಿ ಅರಣ್ಯ ಹಕ್ಕುಸಮಿತಿ, ಉಪಸಮಿತಿ ಮತ್ತು ಜಿಲ್ಲಾ ಸಮಿತಿಗಳನ್ನು ಪುನರ್ ರಚಿಸುವುದಲ್ಲದೆ, ಅವುಗಳಿಗೆ ಕಾನೂನಾತ್ಮಕವಾಗಿ ಸಾಕಷ್ಟು ತಿಳಿವಳಿಕೆ ನೀಡುವ ಮತ್ತು ಈವರೆಗೆ ಅರ್ಜಿ ಸಲ್ಲಿಸದ ಒತ್ತುವರಿದಾರರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಿದೆ ಎಂಬುದು ತಿಳಿದುಬಂದಿತು ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
ತಮ್ಮ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿರುವ ಮತ್ತು ಅರಣ್ಯ ಒತ್ತುವರಿದಾರರ ಸಮಸ್ಯೆಗಳ ಕುರಿತು ಹೆಚ್ಚಿನ ಆಸಕ್ತಿ ಹೊಂದಿರುವ ವಿಧಾನ ಸಭಾ ಸಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ತಮ್ಮ ಹೋರಾಟ ವೇದಿಕೆ ಅಭಿನಂದಿಸಿದೆ ಎಂದು ಅವರು ತಿಳಿಸಿದ್ದಾರೆ.
ಹೋರಾಟಗಾರರ ವೇದಿಕೆ ಎಚ್ಚರಿಕೆ
ಸಿದ್ದಾಪುರ: ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರನ್ನು ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸುವ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಮುಂದಾದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರವು ಅರಣ್ಯ ಅತಿಕ್ರಮಣದಾರರ ಪರ ನಿಲುವು ಹೊಂದಿರುವುದರಿಂದ ಅರಣ್ಯ ಅತಿಕ್ರಮಣದಾರರು ಆತಂಕ ಪಡುವ ಅಗತ್ಯವಿಲ್ಲ. ಅಲ್ಲದೆ ಕಳೆದ 20ವರ್ಷಗಳಿಂದ ಅರಣ್ಯ ಅತಿಕ್ರಮಣದಾರರ ಪರವಾಗಿ ಧ್ವನಿಯಾಗಿರುವ ಈ ಹೋರಾಟ ವೇದಿಕೆ, ಕಾನೂನು ಮತ್ತು ಜನಾಂದೋಲನದ ಮೂಲಕವೂ ಅರಣ್ಯ ಭೂಮಿಯ ಹಕ್ಕು ಕೊಡಿಸುವ ದಿಸೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.