ADVERTISEMENT

ಆಕರ್ಷಕ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 9:40 IST
Last Updated 6 ಏಪ್ರಿಲ್ 2011, 9:40 IST
ಆಕರ್ಷಕ ಶೋಭಾಯಾತ್ರೆ
ಆಕರ್ಷಕ ಶೋಭಾಯಾತ್ರೆ   

ಯಲ್ಲಾಪುರ: ಯುಗಾದಿ ಉತ್ಸವ ಸಮಿತಿಯ ಆಶ್ರಯದಲ್ಲಿ ಯಲ್ಲಾಪುರದಲ್ಲಿ ಸೋಮವಾರ ಪಟ್ಟಣದಲ್ಲಿ ಶೋಭಾಯಾತ್ರೆ ಏರ್ಪಡಿಸಲಾಗಿತ್ತು ಸ್ಥಳೀಯ ಪ್ರಸನ್ನ ಗಣಪತಿ ದೇವಸ್ಥಾನದಿಂದ ಪ್ರಾರಂಭವಾದ ಶೋಭಾ ಯಾತ್ರೆ ನೂತನ ನಗರ, ಬಸ್ ಸ್ಟ್ಯಾಂಡ್ ಮಾರ್ಗವಾಗಿ ರವೀಂದ್ರನಗರ, ಗಾಂಧಿ ಚೌಕ, ಡಿ.ಟಿ.ರಸ್ತೆ. ಟಿಳಕ ಚೌಕ ಮಾರ್ಗವಾಗಿ ಗ್ರಾಮ ದೇವಿ ದೇವಸ್ಥಾನದವರೆಗೆ ನಡೆಯಿತು. ಸುಮಾರು 4 ಕಿ.ಮೀ. ದೂರವನ್ನು ಕ್ರಮಿಸಿದ ಶೋಭಾಯಾತ್ರೆಯಲ್ಲಿ ಸಾವಿರಾರು ಮಹಿಳೆಯರೂ ಸೇರಿದಂತೆ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಹಿಂದೂ ಪರ ಘೋಷಣೆಗಳನ್ನು ಕೂಗುತ್ತ ಯುವಕರು ಕುಣಿದು ಕುಪ್ಪಳಿಸಿದರು. ಝಾಂಜ್, ಡೊಳ್ಳು, ಸ್ತಬ್ಧಚಿತ್ರಗಳೊಂದಿಗೆ  ಶೋಭಾ ಯಾತ್ರೆಯಲ್ಲಿ ಕೇಸರಿ ಧ್ವಜಗಳು ಸಾವಿರಾರು ಸಂಖ್ಯೆಯಲ್ಲಿ ಹಾರಾಡಿದವು. ಮಂಗಲ್ ಪಾಂಡೆ, ಛತ್ರಪತಿ ಶಿವಾಜಿ, ಆಂಜನೇಯ, ಈಶ್ವರ ದೇವರ ಗುಡಿ, ದೇವಿ ಮುಂತಾದ ವಿವಿಧ ಪೌರಾಣಿಕ ರೂಪಕಗಳು ಶೋಭಾ ಯಾತ್ರೆಯ ಮೆರಗನ್ನು ಹೆಚ್ಚಿಸಿದವು.

ಶಾಸಕ ವಿ.ಎಸ್. ಪಾಟೀಲ್, ಜಿ.ಪಂ. ಮಾಜಿ ಸದಸ್ಯ ಉಮೇಶ ಭಾಗ್ವತ್,  ಜಿ.ಪಂ. ಸದಸ್ಯ ರಾಘವ ಭಟ್ಟ, ತಾ.ಪಂ. ಉಪಾಧ್ಯಕ್ಷ ನಟರಾಜ ಗೌಡರ್, ಸದಸ್ಯರಾದ ರವಿ ಕೈಟ್ಕರ್, ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ, ಸಂಚಾಲಕ ಪ್ರಕಾಶ ಕಟ್ಟಿಮನಿ,  ವಿಶ್ವ ಹಿಂದೂ ಪರಿಷತ್ತಿನ ಶಿರಸಿ ಜಿಲ್ಲಾ ಅಧ್ಯಕ್ಷರಾದ ಎಸ್.ಎನ್.ಭಟ್ಟ , ಪ್ರಮುಖರಾದ ಯೋಗೇಶ ಹಿರೇಮಠ, ಶ್ರೀಕಾಂತ ಹೆಗಡೆ, ಗಣಪತಿ ಬೊಳ್ಗುಡ್ಡೆ, , ಬಾಬು ಬಾಂದೇಕರ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.