ADVERTISEMENT

ಆಯುಷ್ ವೈದ್ಯರ ವೇತನ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 8:15 IST
Last Updated 8 ಅಕ್ಟೋಬರ್ 2011, 8:15 IST

ಭಟ್ಕಳ: ಆಯರ್ವೇದ ಶಾಸ್ತ್ರಕ್ಕೆ ಜಾಗತಿಕ ಮನ್ನಣೆ, ಪ್ರಾಮುಖ್ಯತೆ ನೀಡುವುದರ ಜತೆಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುರ್ವೇದ ವೈದ್ಯರನ್ನು  ನೇಮಕ ಮಾಡಬೇಕು ಹಾಗೂ ಅವರ ವೇತನ ಹೆಚ್ಚಿಸಬೇಕು ಎಂದು ಆಯುಷ್ ವೈದ್ಯರು ಆಗ್ರಹಿಸಿದ್ದಾರೆ.

ಹೊನ್ನಾವರದ ಸೋಶಿಯಲ್ ಕ್ಲಬ್‌ನಲ್ಲಿ ಈಚೆಗೆ ನಡೆದ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಇದರ ಭಟ್ಕಳ ಹೊನ್ನಾವರ, ಕುಮಟಾ ಶಾಖೆಗಳ ಆಯುಷ್ ವೈದ್ಯರ ವಾರ್ಷಿಕ ಮಹಾಸಭೆಯಲ್ಲಿ ಈ ಗೊತ್ತುವಳಿ ಸ್ವೀಕರಿಸಲಾಯಿತು.

ಮುರ್ಡೇಶ್ವರ ಲಯನ್ಸ ಕ್ಲಬ್ ಅಧ್ಯಕ್ಷ ಹಾಗೂ ಆಯುಷ್ ವೈದ್ಯ ಡಾ. ಸುನೀಲ್ ಜತ್ತನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.  ಮೂಲ ಸೌಕರ್ಯಗಳೇ ಇಲ್ಲದ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಸಹಾಯಧನ, ಪ್ರಸಕ್ತ ಸಾಲಿನಿಂದ ಆಯುರ್ವೇದ ಪಠ್ಯಕ್ರಮದಲ್ಲಿ ಹೊಸ ವಿಷಯಗಳ ಸೇರ್ಪಡೆ, ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ಸಹಾಯವಾಗುವ ಔಷಧಗಳ ಬಗ್ಗೆ ಮಾಹಿತಿ, ಔಷಧ ಗಿಡಗಳ ಬಗ್ಗೆ ಮಾಹಿತಿ ಮತ್ತು ಅವುಗಳನ್ನು ಸಂರಕ್ಷಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಆಯುರ್ವೇದ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತರಬೇಕೆಂದೂ ಸಹ ಸಭೆಯಲ್ಲಿ ಒತ್ತಾಯಿಸಲಾಯಿತು.

ಡಾ.ಹರಿಪ್ರಸಾದ ಕಿಣಿ, ಆಹಾರದಲ್ಲಿ ಔಷಧೀಯ ಸಸ್ಯಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ಡಾ.ವಾದಿರಾಜ ಭಟ್ ಮತ್ತು ಡಾ.ರಂಗನಾಥ ಪೂಜಾರಿ ವಾರ್ಷಿಕ ವರದಿ ವಾಚಿಸಿದರು.

ಡಾ.ರವಿರಾಜ ಕಡ್ಲೆ, ಡಾ.ಸುಮಾ, ಡಾ. ಮಹೇಶ ಪಂಡಿತ್, ಡಾ.ಪ್ರಕಾಶ ಶೆಟ್ಟಿ, ಡಾ.ವೀಣಾ, ಡಾ.ರಾಘ ವೇಂದ್ರ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ವೈದ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿಮಾಲಯ ಡ್ರಗ್ ಕಂಪೆನಿ ಸಭೆಯನ್ನು ಆಯೋಜಿಸಿತ್ತು.

ಹೃದ್ರೋಗ ತಪಾಸಣಾ ಶಿಬಿರ  10ರಂದು

ಭಟ್ಕಳ: ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಉತ್ಕರ್ಷ, ಉ.ಕ. ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ, ಪರಶುರಾಮ ಸ್ಪೋರ್ಟ್ಸ ಕ್ಲಬ್ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ಇದೇ 10ರಂದು  ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‌ನ ಲಲಿತ ಕಲಾಮಂಟಪದಲ್ಲಿ ಖ್ಯಾತ ತಜ್ಞ ವೈದ್ಯರಿಂದ ಉಚಿತ ಹೃದ್ರೋಗ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಶಿಬಿರದ ಬಗ್ಗೆ ವಿವರ ನೀಡಿದರು. ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೆ ಖ್ಯಾತ ತಜ್ಞ ವೈದ್ಯರಿಂದ ತಪಾಸಣೆ ನಡೆಯಲಿದೆ. ಯಶಸ್ವಿನಿ ಕಾರ್ಡದಾರರಿಗೆ ಮತ್ತು ಸುವರ್ಣ ಆರೋಗ್ಯ ಚೈತನ್ಯದಡಿ ಬರುವ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದಲ್ಲಿ ಖ್ಯಾತ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಿಸಲಾಗುವುದು ಎಂದರು. ಭೌಗೋಳಿಕವಾಗಿ ವಿಸ್ತಾರವಾಗಿರುವ ಉ.ಕ.ಜಿಲ್ಲೆಯ ಮಧ್ಯ ಭಾಗವಾದ ಕುಮಟಾದಲ್ಲಿ ಟ್ರಸ್ಟ್ ವತಿಯಿಂದ `ಉತ್ಕರ್ಷ~ ಎಂಬ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯನ್ನು 2009ರಲ್ಲಿ ಆರಂಭಿಸಲಾಗಿದ್ದು, ಈ ಯೋಜನೆಯಡಿಯಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಭಾರತೀಯ ಕ್ರೀಡೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಶಿಬಿರವನ್ನು ಟ್ರಸ್ಟ್‌ನ ಅಧ್ಯಕ್ಷ ಆರ್.ವಿ. ದೇಶಪಾಂಡೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ವಿವರಗಳಿಗೆ ಮೊಬೈಲ್  ಫೋನ್ ಸಂಖ್ಯೆ 9480086943, 9343512541, 9916634166, 9449453429 ಅನ್ನು ಸಂಪರ್ಕಿಸಬಹುದು. ದೇಶಪಾಂಡೆ ಟ್ರಸ್ಟ್‌ನ ಯೋಜನಾಧಿಕಾರಿ ಡಿ.ಎಸ್.ಭಟ್, ಪರಶುರಾಮ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ವೆಂಕಟೇಶ ದೇವಾಡಿಗ, ಉಪಾಧ್ಯಕ್ಷ ಭಾಸ್ಕರ ನಾಯ್ಕ,  ಜಲಾಲುದ್ದೀನ್ ಕಾಸರಗೋಡ, ಎಸ್.ಎಂ. ಖಾನ್, ನಜೀರ್ ಕಾಶೀಂಜಿ, ಗಣೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.