ADVERTISEMENT

ಇಂದಿನ ತೋಟಗಾರ್ಸ್ ಸೊಸೈಟಿ ಸಭೆ ನಿಶ್ಚಿತ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 9:00 IST
Last Updated 22 ಏಪ್ರಿಲ್ 2011, 9:00 IST

ಶಿರಸಿ: ತೋಟಗಾರ್ಸ್ ಕೋ- ಆಪರೇಟಿವ್ ಸೇಲ್ ಸೊಸೈಟಿ ಏ.22ರಂದು ಕರೆದಿರುವ ಸರ್ವ ಸಾಧಾರಣ ಸಭೆ ಪೂರ್ವ ನಿಗದಿಯಂತೆ ನಡೆಯುವುದರಲ್ಲಿ ಸಂಶಯವಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಶಾಂತಾರಾಮ ಹೆಗಡೆ ಹೇಳಿದರು.

ಅವರು ಸಂಸ್ಥೆಯ ಸಭಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು. ಸಂಘದ 50ಕ್ಕೂ ಹೆಚ್ಚು ಸದಸ್ಯರು ಸಂಘಕ್ಕೆ ಅರ್ಜಿ ಬರೆದು ಸಂಘಕ್ಕೆ ಕುಂದು ಉಂಟುಮಾಡುತ್ತಿರುವ ಎಂಟು ಜನ ಸದಸ್ಯರನ್ನು ಹೊರದೂಡುವಂತೆ ಕೋರಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 3ಗಂಟೆಗೆ ವಿಶೇಷ ಸರ್ವಸಾಧಾರಣ ಸಭೆ ಕರೆಯಲಾಗಿದೆ.
 
ಆದರೆ ಸಹಕಾರಿ ಇಲಾಖೆ ಉಪನಿಬಂಧಕರು ಜಿ.ಎಸ್.ಹೆಗಡೆ ಅರಸಿಕೆರೆ ಸಲ್ಲಿಸಿರುವ ಮನವಿ ಪರಿಗಣಿಸಿ ಈ ವಿಷಯ ಚರ್ಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಇದರ ಪತ್ರಿ ಸಂಸ್ಥೆಗೆ ಗುರುವಾರ ಸಂಜೆ ದೊರೆತಿದೆ.
ಉಪನಿಬಂಧಕರಿಗೆ ಈ ಅಧಿಕಾರ ಇಲ್ಲವಾಗಿದ್ದು ಇದು ರಾಜಕೀಯ ಒತ್ತಡದಿಂದ ಕಾನೂನು ವಿರುದ್ಧ ನೀಡಿದ ಆದೇಶವಾಗಿದೆ. ಈ ಆದೇಶ ಉಲ್ಲಂಘಿಸಿ ಟಿ.ಎಸ್.ಎಸ್. ಸಭೆ ನಡೆಸುವದು ನಿಶ್ಚಿತವಾಗಿದೆ. ಏನೇ ರಾಜಕಾರಣ ಮಾಡಿದರೂ ಟಿ.ಎಸ್.ಎಸ್. ಎದುರಿಸಲು ಸಿದ್ಧವಿದೆ ಎಂದು ಅವರು ಹೇಳಿದರು.

ಹವ್ಯಕ ಸಚಿವರಿಂದ ತೊಂದರೆ: ಹವ್ಯಕ ಬ್ರಾಹ್ಮಣರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗೆಲ್ಲ ಟಿ.ಎಸ್.ಎಸ್.ಗೆ ತೊಂದರೆಯಾಗಿದೆ. ಹಿಂದೆ ರಾಮಕೃಷ್ಣ ಹೆಗಡೆ ಸಚಿವರಾಗಿದ್ದಾಗಲೂ ತೊಂದರೆಯಾಗಿತ್ತು.
ಈಗ ಮತ್ತೆ ಸಮಸ್ಯೆ ಎದುರಾಗಿದೆ. ಟಿ.ಎಸ್.ಎಸ್. ಸಹಕಾರಿ ಇಲಾಖೆಯ 64ರ ವಿಚಾರಣೆ, 68ರ ಆದೇಶ ಎದುರಿಸಿದೆ. ಸಂಸ್ಥೆಯನ್ನು ಸುಪರ್ ಸೀಡ್ ಮಾಡುವತ್ತ ಯೋಚನೆ ನಡೆಯುತ್ತಿದೆ ಎಂಬ ವರ್ತಮಾನ ದೊರೆತಿದೆ.

20ಸಾವಿರ ಸದಸ್ಯರ ಬಲದೊಂದಿಗೆ ಟಿ.ಎಸ್.ಎಸ್. ಏನೇ ಸಮಸ್ಯೆ ಬಂದರೂ ಎದುರಿಸಲು ಸಿದ್ಧವಿದೆ. ಆದರೆ ಇದರ ಪರಿಣಾಮವನ್ನು ರಾಜಕೀಯ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಬಹುದು’ ಎಂದು ಹೆಸರು ಉಲ್ಲೇಖಿಸದೇ ಶಾಂತಾರಾಮ ಹೆಗಡೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಡಿ.ಡಿ.ವಿಶ್ವಾಮಿತ್ರ, ರಾಮಕೃಷ್ಣ ಹೆಗಡೆ, ಜಿ.ವಿ.ಜೋಶಿ ಕಾಗೇರಿ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.