ADVERTISEMENT

ಎಆರ್‌ಟಿಒಗೆ ಹಣವಿದ್ದರೂ ಸ್ವಂತ ಸೂರಿಲ್ಲ...

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 7:16 IST
Last Updated 5 ಜುಲೈ 2013, 7:16 IST
ಚತುಷ್ಪಥ ಹೆದ್ದಾರಿ ನಿರ್ಮಾಣದಲ್ಲಿ ಹೋಗಲಿರುವ ಹೊನ್ನಾವರದ ಎಆರ್‌ಟಿಒ ಕಚೇರಿ
ಚತುಷ್ಪಥ ಹೆದ್ದಾರಿ ನಿರ್ಮಾಣದಲ್ಲಿ ಹೋಗಲಿರುವ ಹೊನ್ನಾವರದ ಎಆರ್‌ಟಿಒ ಕಚೇರಿ   

ಹೊನ್ನಾವರ: ತಾಲ್ಲೂಕಿನ ಕರ್ಕಿಯ ಸಮೀಪ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಬಾಡಿಗೆ ಕಟ್ಟಡವೊಂದರಲ್ಲಿ ಕೆಲ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಹಾಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ (ಎಆರ್‌ಟಿಓ ಕಚೇರಿ) ಇದೀಗ ಸೂರಿಲ್ಲದೆ ಅಲೆಮಾರಿಯಾಗಬೇಕಾದ ದುಃಸ್ಥಿತಿ ಒದಗಿ ಬಂದಿದೆ.

ಸಾಕಷ್ಟು ಹಣವಿದ್ದರೂ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿಲ್ಲ. ಇದರ ಬಾಡಿಗೆ ಕಟ್ಟಡ ಕೂಡ  ಹೆದ್ದಾರಿ ವಿಸ್ತರಣೆಗೆ ಎರವಾಗುಗುತ್ತಿದೆ.

ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕುಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಈ ಎಆರ್‌ಟಿಓ ಕಚೇರಿಗೆ ಸ್ವಂತ ಕಟ್ಟಡಕ್ಕಾಗಿ ವರ್ಷಗಳ ಹಿಂದೆಯೇ 3 ಕೋಟಿ ರೂಪಾಯಿ ಮಂಜೂರಾಗಿದೆಯಾದರೂ ತಾಲ್ಲೂಕಿನಲ್ಲೆಲ್ಲಿಯೂ ಕಟ್ಟಡ ನಿರ್ಮಿಸಲು ಅಗತ್ಯ ಜಾಗ ಸಿಗದ ಕಾರಣ ಹಣ ಹಾಗೆಯೇ ಕೊಳೆಯುತ್ತಿದೆ.

ಕಟ್ಟಡ ನಿರ್ಮಾಣಕ್ಕೆ ನಿಗದಿತ ಅವಧಿಯೊಳಗೆ ಅಗತ್ಯ ಜಾಗ ದೊರಕಿಸಿಕೊಳ್ಳಲು ಸಂಬಂಧಿಸಿದವರು ವಿಫಲವಾದ ಕಾರಣ ಈ ಹಣದಲ್ಲಿ ಒಂದೂವರೆ ಕೋಟಿ ರೂಪಾಯಿಯನ್ನು ಬೇರೊಂದು ಆರ್‌ಟಿಓ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.

ಕಚೇರಿ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಲೀಸ್ ಮೇಲೆ ಕೊಡಲು ಮಂಕಿ ಗ್ರಾಮ ಪಂಚಾಯ್ತಿ ಒಪ್ಪಿದ್ದ ಕಾರಣ 2 ವರ್ಷಗಳ ಹಿಂದೆ ಈ ಕಚೇರಿ ಕಟ್ಟಡವನ್ನು ಮಂಕಿಯಲ್ಲಿ ನಿರ್ಮಿಸಲು ನಡೆಸಿದ್ದ ತಯಾರಿಯನ್ನು ಕುಮಟಾ ಕ್ಷೇತ್ರದ ಅಂದಿನ ಶಾಸಕರು ವಿರೋಧಿಸಿದ ಕಾರಣ ಆ ಕೆಲಸ ನೆನೆಗುದಿಗೆ ಬೀಳುವಂತಾಗಿತ್ತು. ಹೊನ್ನಾವರ ಪಟ್ಟಣದ ಸಮೀಪವೇ ಜಾಗ ಕೊಡಿಸುವ ಈ ಶಾಸಕರ ಭರವಸೆ ಜಾರಿಗೆ ಬರದ ಕಾರಣ ಇಲಾಖೆಗೆ ಕಟ್ಟಡ `ಅಲ್ಲೂ ಇಲ್ಲ ಇಲ್ಲೂ ಇಲ್ಲ' ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು.

ಜಾಗ ಕೊಡಬೇಕೆಂದು ಅರಣ್ಯ ಇಲಾಖೆಗೆ ಸಲ್ಲಿಸಿರುವ ಮನವಿ ಬೆಟ್ಟದಷ್ಟಾಗಿದೆಯಾದರೂ ಇಲಾಖೆ ಇದಕ್ಕೆ ಒಪ್ಪಿಗೆ ಕೊಡುವ ಸೂಚನೆ ಕಂಡು ಬರುತ್ತಿಲ್ಲ. ಮಂಜೂರಿ ನೀಡದಿರುವುದಕ್ಕೆ ಅರಣ್ಯ ಇಲಾಖೆ `ಅರಣ್ಯ ಸಂರಕ್ಷಣಾ ಕಾಯ್ದೆ 1980' ಕಾರಣ ನೀಡಿದೆ.

ರಾಮತೀರ್ಥದಲ್ಲಿನ ಕೃಷಿ ಮಾರುಕಟ್ಟೆ ಸಮಿತಿಯ ಪಾಳು ಬಿದ್ದ ಜಾಗವನ್ನು ಎಆರ್‌ಟಿಓ ಕಚೇರಿ ಕಟ್ಟಡದ ನಿರ್ಮಾಣಕ್ಕೆ ನೀಡಲು ಸಮಿತಿ ವಿರೋಧಿಸಿದ್ದು ಇಲಾಖೆಯ ಸ್ವಂತ ಕಟ್ಟಡದ ಕನಸಿಗೆ ಮತ್ತೊಮ್ಮೆ ಹಿನ್ನಡೆಯಾಗುವಂತೆ ಮಾಡಿದೆ.

`ಭಟ್ಕಳ ಹಾಗೂ ಕುಮಟಾ ವಿಧಾನಸಭಾ ಕ್ಷೇತ್ರಗಳೆರಡರ ಶಾಸಕರ ಉಪಸ್ಥಿತಿಯಲ್ಲೇ ನಡೆದ ಹಲವು ಕೆಡಿಪಿ ಸಭೆಗಳಲ್ಲಿ ಎಆರ್‌ಟಿಓ ಕಚೇರಿಯ ಕಟ್ಟಡ ನಿರ್ಮಾಣದ ವಿಷಯ ಪ್ರಸ್ತಾಪವಾಗಿದೆ ಯಾದರೂ ಈ ಕುರಿತಂತೆ ಗಂಭೀರ ಚರ್ಚೆಯಾಗಲಿ ಅಥವಾ ಪ್ರಯತ್ನವಾಗಲಿ ನಡೆದಿಲ್ಲ' ಎಂದು ಎಆರ್‌ಟಿಓ ಕಚೇರಿಯ ಸಿಬ್ಬಂದಿಯೊಬ್ಬರು ವಿಷಾದ ವ್ಯಕ್ತಪಡಿಸಿದರು.

`ಎಆರ್‌ಟಿಓ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕನಿಷ್ಠ 8 ಗುಂಟೆ ಜಾಗ ಒದಗಿಸಿಕೊಟ್ಟಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದು. ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ' ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಜಿ.ಭಟ್ಟ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.