ADVERTISEMENT

ಐಜಿಪಿ ಕಾರಿಗೆ ಬೆಂಕಿ; ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 7:25 IST
Last Updated 12 ಡಿಸೆಂಬರ್ 2017, 7:25 IST
ಕುಮಟಾದ ಮಾಸ್ತಿಕಟ್ಟೆ ವೃತ್ತದ ಬಳಿ ಹೆದ್ದಾರಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು
ಕುಮಟಾದ ಮಾಸ್ತಿಕಟ್ಟೆ ವೃತ್ತದ ಬಳಿ ಹೆದ್ದಾರಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು   

ಕಾರವಾರ/ಕುಮಟಾ: ಹೊನ್ನಾವರದ ಯುವಕ ಪರೇಶ ಮೇಸ್ತನ ಸಾವಿನ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಸೋಮವಾರ ಕುಮಟಾ ಮತ್ತು ಕಾರವಾರದಲ್ಲಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು.

ಕುಮಟಾದಲ್ಲಿ ಉದ್ರಿಕ್ತರು ಪೊಲೀಸ್‌ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪಶ್ಚಿಮ ವಲಯ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರ ಕಾರು ಸುಟ್ಟಿದ್ದಾರೆ. ಕಲ್ಲು ತೂರಾಟದಲ್ಲಿ ಕುಮಟಾ ಪಿಎಸ್ಐ ಇ.ಸಿ. ಸಂಪತ್, ದಾಂಡೇಲಿ ಮಹಿಳಾ ಎಎಸ್ಐ ಮಂಜುಳಾ ರಾವೋಜಿ ಸೇರಿದಂತೆ ಸುಮಾರು ಹತ್ತು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಮಾಧ್ಯಮದವರ ಮೇಲೂ ಕಲ್ಲು ತೂರಾಟ ನಡೆದಿದ್ದು, ಪತ್ರಕರ್ತರೊಬ್ಬರ ತಲೆಗೆ ಗಾಯವಾಗಿದೆ. ಈ ಸಂದರ್ಭ ಫೋಟೊ ತೆಗೆದ ಸಂಯುಕ್ತ ಕರ್ನಾಟಕ ಪತ್ರಿಕೆಯ ಛಾಯಾಗ್ರಾಹಕರ ಕ್ಯಾಮೆರಾ ಕಸಿದುಕೊಂಡ ಉದ್ರಿಕ್ತರು, ಅದನ್ನು ನೆಲಕ್ಕೆ ಬಡಿದು ಪುಡಿ ಮಾಡಿದ್ದಾರೆ.

ADVERTISEMENT

ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಜತೆಗೆ ಅಶ್ರುವಾಯುವನ್ನೂ ಸಿಡಿಸಿದರು. ಘಟನೆಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಜನರನ್ನು ಹಾಗೂ ಹತ್ತಕ್ಕೂ ಹೆಚ್ಚು ಬೈಕ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಚಾಲಕನ ಸಮೇತ ಕಾರಿಗೆ ಬೆಂಕಿ

ಬೆಳಿಗ್ಗೆ 10 ಗಂಟೆಗೆ ಕುಮಟಾದ ಮಾಸ್ತಕಟ್ಟೆ ವೃತ್ತದಿಂದ ಆರಂಭವಾದ ಮೆರವಣಿಗೆ ನೂರು ಮೀಟರ್‌ ಸಾಗುತ್ತಿದ್ದಂತೆಯೇ ಕಲ್ಲು ತೂರಾಟ ಆರಂಭವಾಯಿತು. ಪೊಲೀಸ್‌ ಸಿಬ್ಬಂದಿ ಹಾಗೂ ಮಾಧ್ಯಮದವರ ಮೇಲೂ ಕಲ್ಲು ತೂರಲಾಯಿತು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಐ.ಜಿ.ಪಿ ಹೇಮಂತ ನಿಂಬಾಳ್ಕರ್ ಕಾರಿನಿಂದ ಇಳಿದ ನಂತರ, ಚಾಲಕ ಒಳಗಿದ್ದಾಗಲೇ ಕಾರಿಗೆ ಬೆಂಕಿ ಹಚ್ಚಲಾಯಿತು. ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಪರದಾಡಿದ ಸಾರ್ವಜನಿಕರು ಕರ್ತವ್ಯಕ್ಕೆ ಹಾಜರಾಗಿದ್ದ ವಿವಿಧ ಇಲಾಖೆಯ ಸಿಬ್ಬಂದಿ ಊಟಕ್ಕೆ ತೆರಳಲಾಗದೆ, ಸಂಜೆ ಮನೆಗೂ ಹೋಗಲಾಗದೇ ಪರಿತಪಿಸಬೇಕಾಯಿತು. ಖಜಾನೆಯಿಂದ ಡಿ.ಇಡಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಯ್ಯಲಾಗದೇ ಅಧಿಕಾರಿಗಳು ಪರದಾಡಿದರು.

ಭುಗಿಲೆದ್ದ ಕಾರವಾರ: ಸ್ವಯಂ ಪ್ರೇರಿತ ಬಂದ್‌ಗೆ ಬಿಜೆಪಿ ಕರೆ ನೀಡಿದ್ದರಿಂದ ಸೋಮವಾರ ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟು ತೆರೆಯಲಿಲ್ಲ. ಕೆಲ ಅಂಗಡಿಗಳನ್ನು ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದರು. ಸಾರಿಗೆ ಬಸ್ಸುಗಳ ಸಂಚಾರ ಕೂಡ ತಡೆದರು. ಬಳಿಕ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದರು.

ಈ ಸಂದರ್ಭದಲ್ಲಿ ಕೆಲವರು ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಡ್ಡಲಾಗಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕೆಲವರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಕಾರವಾರದಲ್ಲಿ ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆಸ್ಪತ್ರೆ, ಔಷಧ ಅಂಗಡಿಗಳು ಹೊರತು ಪಡಿಸಿ ಉಳಿದ ಮಳಿಗೆಗಳು ಬಾಗಿಲು ಮುಚ್ಚಿದ್ದವು.

ಹೆದ್ದಾರಿ ತಡೆ, ಟೈರ್‌ಗೆ ಬೆಂಕಿ: ನಗರದ ಲಂಡನ್‌ ಸೇತುವೆ ಬಳಿಗೆ ತೆರಳಿ ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು ನಂತರ ಟೈರಿಗೆ ಬೆಂಕಿ ಹಚ್ಚಿದರು. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳದ ವಾಹನದ ಮೇಲೂ ಕಲ್ಲು ತೂರಿದ್ದರಿಂದ ವಾಹನದ ಮುಂದಿನ ಗಾಜು ಪುಡಿಯಾಯಿತು.
ಉಪವಿಭಾಗಾಧಿಕಾರಿ ಶಿವಾನಂದ ಕರಾಳೆ, ತಹಶೀಲ್ದಾರ್ ಜಿ.ಎನ್.ನಾಯ್ಕ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಮನವಿಗೆ ಜಗ್ಗದೇ ಹೆದ್ದಾರಿ ತಡೆಯನ್ನು ಮುಂದುವರಿಸಿದರು. ಸುಮಾರು ಮೂರು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ 2 ಕಿ.ಮೀ.ವರೆಗೆ ವಾಹನ ಸಾಲುಗಟ್ಟಿ ನಿಂತಿದ್ದವು.

ಲಾಠಿ ಪ್ರಹಾರ: ನಗರದ ಕುಟಿನ್ಹೊ ರಸ್ತೆಯಲ್ಲಿ, ಬಾಗಿಲು ತೆರೆದಿದ್ದ ಮುಸ್ಲಿಂ ಸಮುದಾಯದ ‘ಮೂನ್‌ಲೈಟ್‌’ ಹೋಟೆಲ್‌ ಮೇಲೂ ಕಲ್ಲು ತೂರಿದರು. ಇದನ್ನು ತಡೆಯಲು ಮುಂದಾದ ಪೊಲೀಸರೊಂದಿಗೆ ಉದ್ರಿಕ್ತರು ವಾಗ್ವಾದಕ್ಕಿಳಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಪ್ರಚೋದಿತ ಹಾಗೂ ವ್ಯವಸ್ಥಿತ ಕೃತ್ಯ–ಎಸ್ಪಿ

‘ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾ ಕೃತ್ಯಗಳು ಪ್ರಚೋದಿತವಾಗಿದ್ದು ಅತ್ಯಂತ ವ್ಯವಸ್ಥಿತವಾಗಿವೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಇಲ್ಲದ ಕಾರಣ ಹಿಂಸೆಯನ್ನು ತಕ್ಷಣ ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ತಿಳಿಸಿದ್ದಾರೆ.

ಹಿಂದೆಂದೂ ನಡೆದಿರಲಿಲ್ಲ: ಶಾಸಕಿ ಶಾರದಾ ಶೆಟ್ಟಿ ‘ಕುಮಟಾ ಇತಿಹಾಸದಲ್ಲಿ ಇಂಥ ಹಿಂಸಾಚಾರ ಹಿಂದೆಂದೂ ನಡೆದಿರಲಿಲ್ಲ. ರಾಜಕೀಯ ಉದ್ದೇಶದಿಂದ ಇದನ್ನೆಲ್ಲ ಮಾಡಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಶಾಂತಿಯುತ ಮೆರವಣಿಗೆ ಎಂದು ಹೇಳಿ, ಐಜಿಪಿ ಕಾರಿಗೆ ಬೆಂಕಿ ಹಚ್ಚುವವರೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದು ವಿಪರ್ಯಾಸದ ಸಂಗತಿ’ ಎಂದಿರುವ ಶಾಸಕಿ ಶಾರದಾ ಶೆಟ್ಟಿ, ಶಾಂತಿ ಕಾಪಾಡುವ ಮೂಲಕ ಕುಮಟಾಕ್ಕೆ ಕೆಟ್ಟ ಹೆಸರು ಬರುವುದನ್ನು ತಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಶಾಸಕಿ ಮನೆಗೂ ಕಲ್ಲು
ಮೆರವಣಿಗೆ ಸಂದರ್ಭ ಪ್ರತಿಭಟನಾಕಾರರು ಸ್ಥಳೀಯ ಶಾಸಕಿ ಶಾರದಾ ಶೆಟ್ಟಿ ಅವರ ಮನೆಗೂ ಕಲ್ಲು ತೂರಿದರು.
ಶಾಸಕರ ಅಂಗ ರಕ್ಷಕ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದಾಗ, ಅವರಿಗೆ ರಕ್ಷಣೆ ನೀಡಲಾಯಿತು. ಆದರೆ, ಈ ಬಗ್ಗೆ ಶಾಸಕಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಹೊನ್ನಾವರ ಶಾಂತ
ಹೊನ್ನಾವರ: ಹಿಂದೂ ಯುವಕನ ಅನುಮಾನಾಸ್ಪದ ಸಾವಿನ ನಂತರ, ಭುಗಿಲೆದ್ದಿದ್ದ ಪಟ್ಟಣದಲ್ಲಿ ಸೋಮವಾರ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಶಾಲೆ–ಕಾಲೇಜುಗಳು ಪುನರಾರಂಭಗೊಂಡಿದ್ದು, ಹಾಜರಾತಿ ವಿರಳವಾಗಿತ್ತು. ವಹಿವಾಟು ಆರಂಭಿಸಿದ್ದ ವರ್ತಕರು, ಕುಮಟಾದಲ್ಲಿ ಹಿಂಸಾಚಾರ ನಡೆದಿರುವ ವಿಷಯ ತಿಳಿದು ಮಧ್ಯಾಹ್ನದ ವೇಳೆಗೆ ಅಂಗಡಿಗಳನ್ನು ಬಂದ್ ಮಾಡಿದರು.
ಸಮೀಪದ ಜಲವಳ್ಳಿ ಕ್ರಾಸ್‌ ಬಳಿ ಆಂಬುಲೆನ್ಸ್‌ನಲ್ಲಿ ತೆರಳುತ್ತಿದ್ದ ಮುಸ್ಲಿಂ ಮಹಿಳೆಯರು ಹಾಗೂ ಚಾಲಕನ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ತಮ್ಮ ವಾಹನದಲ್ಲಿ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸಿದರು ಎಂದು ತಿಳಿದುಬಂದಿದೆ.

ಸಿಬಿಐಗೆ ವಹಿಸುವಂತೆ ಮನವಿ
‘ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಸಿಬಿಐ ಅಥವಾ ಎನ್‍ಐಎಗೆ ವಹಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸಲಾಗುವುದು. ರಾಜ್ಯ ಸರ್ಕಾರ ತನ್ನ ದೌರ್ಬಲ್ಯವನ್ನು ಒಪ್ಪಿಕೊಂಡು ಕೇಂದ್ರ ಸರ್ಕಾರದ ತನಿಖೆಗೆ ಅವಕಾಶ ಮಾಡಿಕೊಡಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸೋಮವಾರ ಶಿರಸಿಯಲ್ಲಿ ಒತ್ತಾಯಿಸಿದರು.

ಜಿಲ್ಲೆಯಾದ್ಯಂತ 14ರವರೆಗೆ ನಿಷೇಧಾಜ್ಞೆ
ಕಾರವಾರ: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಡಿ.14ರವರೆಗೆ ಸಭೆ, ಸಮಾರಂಭ, ಮೆರವಣಿಗೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿದ್ದಾರೆ.

ಮದುವೆ, ಮುಂಜಿ, ಇತ್ಯಾದಿ ವೈಯಕ್ತಿಕ ಕಾರ್ಯಕ್ರಮ ನಡೆಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

ಉದ್ರಿಕ ಜನರು ಕಲ್ಲು ತೂರಾಟ ನಡೆಸಿದ್ದರಿಂದ ಕೆಲ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ, ಕೆಲ ವಾಹನಗಳು ಕೂಡ ಜಖಂಗೊಂಡಿವೆ. ಮಧ್ಯಾಹ್ನದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ವಿನಾಯಕ ವಿ ಪಾಟೀಲ, ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.