ADVERTISEMENT

ಒಂಟಿ ಸಲಗ ದಾಳಿ: ಭತ್ತದ ಬಣವೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:24 IST
Last Updated 21 ಡಿಸೆಂಬರ್ 2013, 9:24 IST

ಮುಂಡಗೋಡ: ಒಂಟಿ ಸಲಗವೊಂದು ಗ್ರಾಮದ ಸನಿಹವೇ ಬಂದು ಗ್ರಾಮಸ್ಥರನ್ನು ಭಯಭೀತರನ್ನಾಗಿ ಮಾಡಿ ಎರಡು ಭತ್ತದ ಬಣವೆಗಳನ್ನು ಹಾನಿ ಮಾಡಿದ ಘಟನೆ ತಾಲ್ಲೂಕಿನ ಯರೇಬೈಲ್‌ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.

ಸಂಜೆ 5ಗಂಟೆ ಸುಮಾರಿಗೆ ಒಂಟಿ ಸಲಗ ಗ್ರಾಮದ ಸನಿಹವೇ ಕಾಣಿಸಿಕೊಂಡಿದೆ. ಅನತಿ ದೂರದಲ್ಲಿ ಕಾಣುತ್ತಿದ್ದ ಒಂಟಿಸಲಗವನ್ನು ಕಂಡ ಗ್ರಾಮಸ್ಥರು ಕೂಗಾಟ ನಡೆಸಿ ಕಾಡಾನೆಯನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಒಂಟಿ ಸಲಗ ಮಾತ್ರ ಜನರ ಕಿರುಚಾಟಕ್ಕೆ ಜಗ್ಗದೇ ಗ್ರಾಮದ ಹಿಂಬದಿಯ ಭತ್ತದ ಗದ್ದೆಗಳಿಗೆ ಹೋಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತನ್ನ ಪುಂಡಾಟಿಕೆಯನ್ನು ಮುಂದುವರಿಸಿದೆ. ಗ್ರಾಮದ ಹೆಣ್ಣುಮಕ್ಕಳು, ಚಿಕ್ಕಮಕ್ಕಳು ಸೇರಿದಂತೆ ಎಲ್ಲರೂ  ಮನೆಯ ಹಿಂಬದಿಯಲ್ಲಿ ನಿಂತುಕೊಂಡು ಒಂಟಿಸಲಗವನ್ನು ಆತಂಕದಿಂದಲೇ ವೀಕ್ಷಿಸಿದ್ದಾರೆ. ನಂತರ  ಗದ್ದೆಯಲ್ಲಿ ರಾಶಿ ಮಾಡಲು ಹಾಕಿದ್ದ ಎರಡು ಭತ್ತದ ಬಣವೆಗಳನ್ನು ನೆಲಕ್ಕೆ ಕೆಡವಿ, ತಿಂದು ಹಾನಿ ಮಾಡಿ ಮುಂದೆ ಸಾಗಿದೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಒಂಟಿಸಲಗವನ್ನು ಮರಳಿ ಕಾಡಿಗೆ ಓಡಿಸಲು ಪಟಾಕಿ ಸಿಡಿಸಿದರು.

ಕಾಡಿನ ಸನಿಹವೇ ಇದ್ದ ಮತ್ತೊಂದು ಬಣವೆಯನ್ನು ತಿನ್ನುತ್ತ ಕೆಲ ಹೊತ್ತು ನಿಂತ ಒಂಟಿ ಸಲಗ ನಂತರ ಕಾಡಿಗೆ ಮರಳಿದೆ.
ತಾಲ್ಲೂಕಿನಲ್ಲಿ ಸುಮಾರು 18ಕ್ಕೂ ಹೆಚ್ಚು ಕಾಡಾನೆಗಳು ಆಗಮಿಸಿ ಯಲ್ಲಾಪುರ ಅರಣ್ಯದ ಮೂಲಕ ಮರಳುತ್ತಿವೆ. ಸದ್ಯ 2–3ತಂಡಗಳಲ್ಲಿ ಬೇರ್ಪಟ್ಟ ಕಾಡಾನೆಗಳ ಹಿಂಡು ತಾಲ್ಲೂಕಿನ ಗಡಿಭಾಗದತ್ತ ತೆರಳಿದ್ದು ಒಂಟಿ ಸಲಗ ಸೇರಿದಂತೆ 2–3 ಆನೆಗಳು ಕೆಲವೆಡೆ ದಾಳಿ ಮಾಡುತ್ತಿರುವದು ಕಂಡುಬಂದಿದೆ. ಶೀಘ್ರದಲ್ಲಿಯೇ ಅವುಗಳನ್ನು ಯಲ್ಲಾಪುರ ಅರಣ್ಯ ಮಾರ್ಗದ ಮೂಲಕ ತಾಲ್ಲೂಕಿನ ಗಡಿಭಾಗ ದಾಟಿಸಲಾಗುವುದು ಎಂದು ಆರ್‌ಎಫ್‌ಒ ಎಸ್‌.ಎಂ.ವಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.