ADVERTISEMENT

ಕಬ್ಬು ಕಟಾವಿಗೆ ಆಗ್ರಹಿಸಿ ಬೆಳೆಗಾರರ ಧರಣಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:01 IST
Last Updated 18 ಡಿಸೆಂಬರ್ 2013, 5:01 IST

ಮುಂಡಗೋಡ: ಕಟಾವು ಹಂತಕ್ಕೆ ಬಂದಿರುವ ಕಬ್ಬನ್ನು ಕೂಡಲೇ ಕಟಾವು ಮಾಡಿಸಿ ಕಾರ್ಖಾನೆಗೆ ಸಾಗಿಸಬೇಕೆಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಇಲ್ಲಿಯ ತಹಶೀಲ್ದಾರ್‌ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.

ತಾಲ್ಲೂಕಿನಲ್ಲಿ ಬೆಳೆದಿರುವ ಕಬ್ಬನ್ನು ಕಟಾವು ಮಾಡಿಸಲು ಹಳಿಯಾಳ ಸಕ್ಕರೆ ಕಾರ್ಖಾನೆಯವರು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಕಾರ್ಖಾನೆ ಮಂಡಳಿಯವರು ರೈತರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಒಣಗಿರುವ ಕಬ್ಬನ್ನು ತಹಶೀಲ್ದಾರ್‌ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದರು.

ನಂತರ ಸ್ಥಳಕ್ಕಾಗಮಿಸಿದ ಹಳಿಯಾಳ ಪ್ಯಾರಿ ಶುಗರ್ಸ್‌ ಕಾರ್ಖಾನೆಯ ಪ್ರಾದೇಶಿಕ ವ್ಯವಸ್ಥಾಪಕ ಎಸ್‌.ಎಲ್‌.ಪಾಟೀಲ ಅವರು ಶಿರಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಅವರೊಂದಿಗೆ ಚರ್ಚೆ ನಡೆಸಿದರು.

‘ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಯಿಂದ ಇಲ್ಲಿಯ ರೈತರಿಗೆ ಅನುಕೂಲವಾಗಬೇಕು. ಇಲ್ಲಿಯ ರೈತರು ಬೆಳೆದಿರುವ ಕಬ್ಬನ್ನು ಕೂಡಲೇ ಕಟಾವು ಮಾಡಿಸಿ ಕಾರ್ಖಾನೆಗೆ ಸಾಗಿಸಲು ವ್ಯವಸ್ಥೆ ಮಾಡಿ. ಕಾರ್ಖಾನೆಯ ದೃಷ್ಟಿಕೋನದಿಂದ ರೈತರನ್ನು ನೋಡದೇ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿ ವರ್ಷ ಇಂತಹ ಸಮಸ್ಯೆ ಎದುರಾದರೇ ತಾಲ್ಲೂಕಿನಲ್ಲಿ ಕಬ್ಬು ಬೆಳೆಯಲು ರೈತರು ಹಿಂದೇಟು ಹಾಕಬಹುದು’ ಎಂದು ಶಿರಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಕಾರ್ಖಾನೆ ಅಧಿಕಾರಿಗೆ ಹೇಳಿದರು.

ಕಬ್ಬು ಬೆಳೆಗಾರ ಸಾತು ಬನ್ಸೋಡೆ ಮಾತನಾಡಿ, ‘ಕಿತ್ತೂರ, ಖಾನಾಪುರ, ಧಾರವಾಡ ಸೇರಿದಂತೆ ಇನ್ನಿತರ ಭಾಗದಲ್ಲಿ ಬೆಳೆದಿರುವ ಕಬ್ಬನ್ನು ಕಾರ್ಖಾನೆಯವರೇ ಕಟಾವು ಮಾಡಿಸಿ ಸಾಗಿಸುತ್ತಿದ್ದಾರೆ. ಆದರೆ ಈ ತಾಲ್ಲೂಕಿನಲ್ಲಿ ಬೆಳೆದ ಕಬ್ಬನ್ನು ಮಾತ್ರ ಕಣ್ಣೆತ್ತಿ ನೋಡುತ್ತಿಲ್ಲ. ಬೇರೆ ಜಿಲ್ಲೆಯಿಂದ ಕಬ್ಬು ಕಟಾವು ಮಾಡಿಸುವುದನ್ನು ಬಂದ್‌ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪ್ರತಿ ದಿನವೊಂದಕ್ಕೆ 250ಟನ್‌ ಕಬ್ಬನ್ನು ಕಟಾವು ಮಾಡಿಸುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ಶಂಭಣ್ಣ ಕೋಳೂರ ಮಾತನಾಡಿ, ‘ಕಟಾವು ಹಂತಕ್ಕೆ ಬಂದಿರುವ ಕಬ್ಬನ್ನು ಹಾಗೇ ಬಿಟ್ಟಲ್ಲಿ ರೈತರಿಗೆ ತುಂಬಾ ಹಾನಿಯಾಗಲಿದೆ. ಮೊದಲು ಕಾರ್ಖಾನೆಯವರು ಕಟಾವು ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.

ತಹಶೀಲ್ದಾರ್‌ನಾರಾಯಣ ರಾವ್‌ ಮಾತನಾಡಿ, ‘ಬೇರೆ ಜಿಲ್ಲೆಯ ಕಬ್ಬು ಕಟಾವು ಮಾಡಿಸುವುದನ್ನು ಸ್ಥಗಿತಗೊಳಿಸಿ ಈ ತಾಲ್ಲೂಕಿನ ಕಬ್ಬನ್ನು ಕಟಾವು ಮಾಡಿಸಿ ಸಾಗಿಸಿ.  ರೈತರ ಸಮಸ್ಯೆ ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸಬೇಕು’ ಎಂದರು.

ಪ್ಯಾರಿ ಶುಗರ್ಸ್‌ ಪ್ರಾದೇಶಿಕ ವ್ಯವಸ್ಥಾಪಕ ಎಸ್‌.ಎಲ್‌.ಪಾಟೀಲ ಮಾತನಾಡಿ, ‘ಈಗಾಗಲೇ ತಾಲ್ಲೂಕಿನ ಉಗ್ಗಿನಕೇರಿ ಭಾಗದಲ್ಲಿ ಕಬ್ಬು ಕಟಾವು ಮಾಡಿಸಲಾಗುತ್ತಿದೆ. ಸದ್ಯ ಹೆಚ್ಚುವರಿಯಾಗಿ 50ಟನ್‌ ಕಬ್ಬು ಕಟಾವು ಮಾಡಿಸಲು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವರಿ ಕಬ್ಬು ಕಟಾವು ಮಾಡಿಸಲಾಗುವುದು’ ಎಂದರು. ಆದರೆ ಇದಕ್ಕೆ ಒಪ್ಪದ ರೈತರು ಕೂಡಲೇ ಪ್ರತಿನಿತ್ಯ 250ಟನ್‌ ಕಬ್ಬು ಕಟಾವು ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಂತರ ಶಿರಸಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ರು ಪ್ಯಾರಿ ಶುಗರ್ಸ್‌ ಪ್ರಾದೇಶಿಕ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಿದರು. ನಂತರ ಪ್ರತಿ ನಿತ್ಯ 250ಟನ್‌ ಕಬ್ಬು ಕಟಾವು ಮಾಡಿಸಿ ಸಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತ ಭರವಸೆ ನೀಡಿದ ನಂತರ ಕಬ್ಬು ಬೆಳೆಗಾರರು ಧರಣಿಯನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ದಲಿತ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಚಿದಾನಂದ ಹರಿಜನ, ಷರೀಫ್‌ ಮುಗಳಿಕಟ್ಟಿ, ಕಬ್ಬು ಬೆಳೆಗಾರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.