ADVERTISEMENT

ಕರಾವಳಿಯಲ್ಲಿ ಕೋಮುವಾದ ಪ್ರಚೋದನೆ: ಕಠಿಣ ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 8:41 IST
Last Updated 8 ಅಕ್ಟೋಬರ್ 2017, 8:41 IST

ಕಾರವಾರ: ‘ರಾಜ್ಯದ ಕರಾವಳಿ ಭಾಗದಲ್ಲಿ ಕೋಮುವಾದ ಹೆಚ್ಚಾಗುತ್ತಿದ್ದು, ಅದಕ್ಕೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಶ್ಚಿಮ ವಲಯ ವ್ಯಾಪ್ತಿಯ ಎಲ್ಲ 4 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿ ದ್ದೇನೆ’ ಎಂದು ಪಶ್ಚಿಮ ವಲಯ ಐಜಿಪಿ ಹೇಮಂತ ನಿಂಬಾಳ್ಕರ ಶನಿವಾರ ಇಲ್ಲಿ ಹೇಳಿದರು.

‘ಭಟ್ಕಳದಲ್ಲಿ ಪುರಸಭೆಯ ಮಳಿಗೆ ಖಾಲಿ ಮಾಡಿಸುವ ವಿಚಾರವಾಗಿ ನಡೆದ ಗಲಭೆಯಲ್ಲಿ ಕೆಲವರು ಪೊಲೀಸರ ಮೊಬೈಲ್ ಅನ್ನು ಕಸಿದು ಕೊಂಡಿರುವುದು ಗೊತ್ತಾಗಿದೆ. ಅವರ ಮೇಲೆ ಯಾವ ರೀತಿ ದೂರು ದಾಖಲಾಗಿದೆಯೋ ಆ ಪ್ರಕಾರ ತನಿಖೆ ಕೈಗೊಳ್ಳಲಾಗುತ್ತದೆ. ಬೇಕು ಅಂತಲೇ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರ ಬರಲಿದೆ’ ಎಂದರು.

ಐ.ಎಸ್‌ ಚಟುವಟಿಕೆ ಕುರಿತು ತನಿಖೆ: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐ.ಎಸ್‌ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಹೇಳಿಕೆ ನೀಡಿರುವ ವ್ಯಕ್ತಿಯು ತನ್ನ ಧ್ವನಿ ಮುದ್ರಿತ ಸಂದೇಶದಲ್ಲಿ ಯುವ ಕರು ದಾರಿ ತಪ್ಪುತ್ತಿದ್ದು, ಅದನ್ನು ತಡೆಯುವ ಉದ್ದೇಶದಿಂದ ಈ ಸಂದೇಶ ಕಳುಹಿಸಿರುವುದಾಗಿ ಹೇಳಿ ಕೊಂಡಿದ್ದಾನೆ.

ADVERTISEMENT

ಈ ಬಗ್ಗೆ ತನಿಖೆ ನಡೆಸಿ ವಿಷಯದ ಸತ್ಯಾಸತ್ಯತೆಯನ್ನು ಕಂಡು ಹಿಡಿಯಲಾಗುವುದು. ಧ್ವನಿ ಮುದ್ರಿತ ಸಂದೇಶ ಕಳುಹಿಸಿದ ವ್ಯಕ್ತಿಯ ವಿಚಾರಣೆ ಯನ್ನೂ ಮಾಡಲಾಗುವುದು. ಇದು ನಿಜ ಎಂದು ಕಂಡು ಬಂದರೆ ಅದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳ ಲಾಗುವುದು’ ಎಂದು ಹೇಳಿದರು.

ಸಾಮಾಜಿಕ ಜಾಲತಾಣ ಅರಿವು ಅಗತ್ಯ: ‘ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂದೇಶ ಹಾಕುವಾಗ ಅದರ ಪರಿಣಾಮ ಏನಾಗಬಹುದು ಎಂಬುದನ್ನು ಪ್ರತಿಯೊಬ್ಬರೂ ಅರಿಯ ಬೇಕು. ಅದು ಶಾಂತಿಗೆ ಭಂಗ ತರುವ ಅಥವಾ ಕೋಮುವಾದವನ್ನು ಪ್ರಚೋದಿಸುವ ವಿಷಯವೇ ಎಂಬುದರ ಕುರಿತು ಸೂಕ್ಷ್ಮವಾಗಿ ಗಮನಿಸಬೇಕು.

ಜಾಗರೂಕರಾಗಿ ಒಳ್ಳೆಯ ವಿಚಾರಗಳನ್ನಷ್ಟೆ ಕಳುಹಿಸಬೇಕೆ ಹೊರತು ಅಶಾಂತಿಯನ್ನು ಉಂಟುಮಾಡುವ ಹೇಳಿಕೆಗಳನ್ನು ಕಳುಹಿಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ನಡೆ ಯುವ ಇಂತಹ ಎಲ್ಲ ವಿಚಾರಗಳನ್ನು ಪರಿಶೀಲನೆ ಮಾಡಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ಘಟಕ ಇದೆ. ಎಲ್ಲ ವೈಯಕ್ತಿಕ ಸಂದೇಶಗಳನ್ನು ಗಮನಿಸಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರ ಪಾತ್ರ ಅತೀ ಮುಖ್ಯ’ ಎಂದರು.

ಮಾದಕ ವಸ್ತು ಜಾಲದ ಮೂಲ ಪತ್ತೆಗೆ ಕ್ರಮ: ‘ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸರಬರಾಜನ್ನು ತಡೆಯಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದೆ. ಕೇವಲ ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುವ ವ್ಯಕ್ತಿಗಳ ಮೇಲಷ್ಟೇ ಕ್ರಮ ಕೈಗೊಳ್ಳುವುದಲ್ಲದೆ ಅದರ ಮೂಲವನ್ನು ಪತ್ತೆಹಚ್ಚಿ, ಆ ಮೂಲಕ ಅದನ್ನು ಬುಡದಿಂದಲೇ ಕಿತ್ತುಹಾಕುವ ಪ್ರಯತ್ನವನ್ನು ಮಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.