ADVERTISEMENT

ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2011, 11:05 IST
Last Updated 1 ನವೆಂಬರ್ 2011, 11:05 IST

ಅಂಕೋಲಾ:  ಕರ್ನಾಟಕದ ಏಕೀಕರಣ ಚಳವಳಿಯ ರೂವಾರಿಗಳಲ್ಲಿ ರೋಣ ತಾಲ್ಲೂಕಿನ ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರು ಪ್ರಮುಖರಾಗಿದ್ದಾರೆ. 

ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯವಾಗಿ ತೊಡಗಿದ್ದ ಇವರು 1924 ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ  ಜರುಗಿದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಹಾಜರಾಗುವ ಮೂಲಕ ಮಹಾತ್ಮರಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು.  
 
ಅಸಹಕಾರ ಚಳವಳಿ ಮತ್ತು ಚಲೇಜಾವ್ ಆಂದೋಲನದಲ್ಲಿ ಪಾಲ್ಗೊಂಡು ಜೈಲು ಶಿಕ್ಷೆ ಅನುಭವಿಸಿದ್ದರು.  ಜೊತೆ ಜೊತೆಗೆ ಕರ್ನಾಟಕ ಏಕೀಕರಣ ಮಹಾಸಮಿತಿಯ ಕಾರ್ಯದರ್ಶಿಯಾಗಿ ನಾಡುನುಡಿಯ ಜಾಗೃತಿಯನ್ನು ಮೂಡಿಸಲು ಅವಿಶ್ರಾಂತವಾಗಿ ಶ್ರಮಿಸಿದರು.

 ಹರಿದು ಹಂಚಿಹೋಗಿದ್ದ  ಕನ್ನಡದ ಪ್ರದೇಶಗಳನ್ನು ಏಕೀಕರಣಗೊಳಿಸಲು ಜನವರಿ 11, 1953 ರಲ್ಲಿ ತಮ್ಮ ಹುಟ್ಟೂರು ಜಕ್ಕಲಿಯ ಅನ್ನದಾನೇಶ್ವರ ಮಠದ ಆವರಣದಲ್ಲಿ 21 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡರು.  ಇಡೀ ನಾಡಿನ ಗಮನ ಸೆಳೆದ ದೊಡ್ಡಮೇಟಿ ಅವರ ಉಪವಾಸ ಸತ್ಯಾಗ್ರಹವು ಐತಿಹಾಸಿಕ ಮಹತ್ವ ಪಡೆದಿದೆ.  
 
ವಿಶಾಲ ಆಂಧ್ರಕ್ಕಾಗಿ ಬಲಿದಾನಗೈದ ಪೊಟ್ಟಿ ರಾಮುಲು ಅವರ ಹೋರಾಟದಂತೆ ದೊಡ್ಡಮೇಟಿಯವರ ಕರ್ಣಧಾರತ್ವದಲ್ಲಿ ಕರ್ನಾಟಕ ಏಕೀಕರಣ ಚಳವಳಿಯು ನಾಡಿನ ಮೂಲೆ ಮೂಲೆಯನ್ನು ತಲುಪಿತು. 

ಇದೇ ವೇಳೆಗೆ ಹೈದರಾಬಾದ್‌ನಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಕರ್ನಾಟಕದ ಏಕೀಕರಣಕ್ಕೆ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಸಮರ್ಥನೆ ನೀಡಿದರು.  ಅಂದಾನಪ್ಪನವರ ಹೋರಾಟ ಅಧಿಕಾರದಲ್ಲಿರುವವರ ಕಣ್ಣು ತೆರೆಸಿತು. 

ಆದರೆ ಈ ಕುರಿತ ನಿರ್ಣಯಗಳು ಪ್ರಕಟವಾಗುವಲ್ಲಿ ಉಂಟಾದ ವಿಳಂಬವನ್ನು ವಿರೋಧಿಸಿ   1954 ರಲ್ಲಿ ಮುಂಬೈ ಶಾಸನ ಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. 

1956 ನವೆಂಬರ್ 1 ರಂದು ನಾಡಿನ ಏಕೀಕರಣವಾದರೂ `ಕರ್ನಾಟಕ~ ಎಂಬ ಹೆಸರು ಬರಲಿಲ್ಲ.  ಮುಖ್ಯವಾಗಿ ಆದೋನಿ, ಮಡಕಶಿರಾ, ಸೋಲಾಪುರ ಮುಂತಾದ ಅಪ್ಪಟ ಕನ್ನಡದ ಪ್ರದೇಶಗಳು ಪರಭಾರೆಯಾದದ್ದನ್ನು ಎದೆಗೆ ಹಚ್ಚಿಕೊಂಡು ಕೊರಗಿದ ದೊಡ್ಡಮೇಟಿಯವರು ಪುನ: ಹೋರಾಟದ ಕಣಕ್ಕಿಳಿದು ಸಪ್ಟೆಂಬರ್ 1957 ರಲ್ಲಿ ವಿಧಾನಸಭೆಯಲ್ಲಿ ರಾಜ್ಯದ ಹೆಸರನ್ನು `ಕರ್ನಾಟಕ~ವೆಂದೇ ಕರೆಯಬೇಕೆಂದು ಗೊತ್ತುವಳಿಯನ್ನು ಮಂಡಿಸಿದರು. 

ಕರ್ನಾಟಕ ಎಂಬ ಹೆಸರಿನ ಐತಿಹಾಸಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ        ಶಾಸನ ಸಭೆಯಲ್ಲಿ  ಮಾಡಿದ ಭಾಷಣ ಅವರ  ವಿದ್ವತ್‌ಪೂರ್ಣತೆಗೆ ಸಾಕ್ಷಿಯಾಗಿದೆ.  ಶಾಸಕರಾಗಿ, ಸಚಿವರಾಗಿ  ಪ್ರಾಮಾಣಿಕ ಸೇವೆ ಸಲ್ಲಿಸಿದ ಇವರು  ತಾಯಿ ಭುವನೇಶ್ವರಿಯನ್ನು ಸ್ಮರಿಸುತ್ತಲೇ  1972 ಫೆಬ್ರುವರಿ 21 ರಂದು ಕೊನೆಯುಸಿರೆಳೆದರು. 

ನಾಡುನುಡಿಯ ಜಾಗೃತಿಗೆ ಶಕ್ತಿ ಕೇಂದ್ರವಾಗುವ ಸಾಮರ್ಥ್ಯವಿರುವ ಈ ಅಪೂರ್ವ ಹೋರಾಟಗಾರನ ಸಮಾಧಿ ಸ್ಥಳವು ಜಕ್ಕಲಿಯ ಹೊಲದಲ್ಲಿ ಬೇವಿನ ಮರದ ಕೆಳಗೆ ಅಭಿವೃದ್ಧಿ ಕಾಣದೇ ಕನ್ನಡಿಗರ ವಿಸ್ಮೃತಿಯ ಸಂಕೇತವಾಗಿ ನಿಂತಿದೆ. 

ಇನ್ನಾದರೂ ಸರ್ಕಾರ ಈ ಸಮಾಧಿ ಸ್ಥಳವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಿ, ದೊಡ್ಡಮೇಟಿಯವರ ಪ್ರತಿಮೆಯನ್ನು ಸ್ಥಾಪಿಸಿ ಅವರಿಗೆ ಸಲ್ಲಬೇಕಾದ  ಗೌರವವನ್ನು ಸಲ್ಲಿಸುವ ಮೂಲಕ  ಕನ್ನಡದ ಕುರಿತಾದ ನೈಜ ಕಾಳಜಿಯನ್ನು ಪ್ರಕಟಿಸಬೇಕಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.