ADVERTISEMENT

ಕಲ್ಯಾಣ ಮಹೋತ್ಸವಕ್ಕೆ ಸಹಸ್ರಾರು ಮಂದಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 8:56 IST
Last Updated 13 ಮಾರ್ಚ್ 2014, 8:56 IST
ಮಂಗಳವಾರ ರಾತ್ರಿ ನಡೆದ ಶಿರಸಿ ಮಾರಿಕಾಂಬಾ ದೇವಿಯ ಕಲ್ಯಾಣ ಮಹೋತ್ಸವಕ್ಕೆ ಸಹಸ್ರಾರು ಜನ ಸಾಕ್ಷಿಯಾದರು. ಕಲ್ಯಾಣಿ ದೇವಿಗೆ ನಾಡಿಗರ ಮನೆತನದವರು ಮೊದಲ ಮಂಗಳಾರತಿ ಸಲ್ಲಿಸಿದರು.
ಮಂಗಳವಾರ ರಾತ್ರಿ ನಡೆದ ಶಿರಸಿ ಮಾರಿಕಾಂಬಾ ದೇವಿಯ ಕಲ್ಯಾಣ ಮಹೋತ್ಸವಕ್ಕೆ ಸಹಸ್ರಾರು ಜನ ಸಾಕ್ಷಿಯಾದರು. ಕಲ್ಯಾಣಿ ದೇವಿಗೆ ನಾಡಿಗರ ಮನೆತನದವರು ಮೊದಲ ಮಂಗಳಾರತಿ ಸಲ್ಲಿಸಿದರು.   

ಶಿರಸಿ: ಮಾರಿಕಾಂಬಾ ದೇವಿಯ ಕಲ್ಯಾಣ ಮಹೋತ್ಸವ ಮಂಗಳವಾರ ರಾತ್ರಿ ದೇವಾಲಯದ ಸಭಾ ಮಂಟಪ ದಲ್ಲಿ ಸಡಗರದಿಂದ ನಡೆಯಿತು. ನವವಧುವಾಗಿ ಶೃಂಗಾರಗೊಂಡ ಮಾರಿಕಾಂಬೆ ಹಾಗೂ ಆಕೆಯ ಸೋದರಿಯರಾದ ಮರ್ಕಿ–ದುರ್ಗಿ ಯರಿಗೆ ಹೊಸ ಸೀರೆ, ಬಳೆ ತೊಡಿಸಿ ಕಲ್ಯಾಣ ಮಹೋತ್ಸವ ನೆರವೇರಿಸಲಾಯಿತು.

ಸರ್ವಾಭರಣ ತೊಟ್ಟ ದೇವಿಗೆ ದೃಷ್ಟಿ ತಾಗಬಾರದೆಂದು ಗುಡಿಗಾರರು ದೃಷ್ಟಿಬೊಟ್ಟು ಇಟ್ಟರು. ದೇವಿಯ ತವರುಮನೆಯಾದ ನಾಡಿಗ ಗಲ್ಲಿಯ ನಾಡಿಗರ ಮನೆತನದವರು ಸಾರ್ವ ಜನಿಕರ ಜತೆಗೂಡಿ ಮೆರವಣಿಗೆಯಲ್ಲಿ ಬಂದು ದೇವಿಗೆ ಮಾಂಗಲ್ಯ ಧಾರಣೆ ಮಾಡಿದರು. ನಾಡಿಗರ ಮನೆಯಲ್ಲಿ ಕಲ್ಯಾಣ ಮಹೋತ್ಸವದ ಅಂಗವಾಗಿ ಸಿಹಿ ಭೋಜನ ಏರ್ಪಡಿಸಲಾಗಿತ್ತು.

ಕಲ್ಯಾಣಿಯಾದ ಮಾರಿಕಾಂಬೆಗೆ ನಾಡಿಗರು ಮೊದಲ ಮಂಗಳಾರತಿ ಬೆಳಗಿದರು. ನಂತರ ದೇವಾಲಯದ ಬಾಬುದಾರ ಕುಟುಂಬದವರು ಅಹೋ ರಾತ್ರಿ ದೇವಿಗೆ ಆರತಿ ಎತ್ತಿ ಪೂಜೆ ಸಲ್ಲಿಸಿದರು.

ಬುಧವಾರ ಬೆಳಿಗ್ಗೆ ರಥದಲ್ಲಿ ಆಸೀನ ಳಾದ ದೇವಿ ಮೆರವಣಿಗೆಯಲ್ಲಿ ಬಂದು ಜಾತ್ರಾ ಗದ್ದುಗೆಯಲ್ಲಿ ಹಸನ್ಮುಖಿಯಾಗಿ ಕುಳಿತಿದ್ದಾಳೆ. ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ಅಸಂಖ್ಯ ಭಕ್ತರು ರಥೋ ತ್ಸವದಲ್ಲಿ ಪಾಲ್ಗೊಂಡರು. ರಥೋ ತ್ಸವಕ್ಕೆ ಬಂದ ಭಕ್ತರ ಬಾಯಾರಿಕೆ ನೀಗಿಸಲು ತಾಲ್ಲೂಕು ಗೃಹ ನಿರ್ಮಾಣ ಕಾರ್ಮಿಕರ ಸಂಘ, ಚೌಕಿ ಮಠದ ಗುರುಸಿದ್ಧೇಶ್ವರ ಯುವಕ ಮಂಡಳ ಅರವಟ್ಟಿಗೆ ಸೇವೆ ಒದಗಿಸಿತು.

ಭೂತೇಶ್ವರ ಅಭಿವೃದ್ಧಿ ಮಂಡಳಿ ಯವರು ಅತ್ಯಂತ ಕಡಿಮೆ ದರದಲ್ಲಿ ಭೋಜನ ವ್ಯವಸ್ಥೆ ಗೊಳಿಸಿದ್ದು, ಜಾತ್ರೆಯ ಕೊನೆಯ ದಿನದ ವರೆಗೂ ಈ ಸೌಲಭ್ಯ ಮುಂದುವರಿಯಲಿದೆ.

ನಗರಸಭೆ ಕಾರ್ಯ ಶ್ಲಾಘನೆ: ನಗರಸಭೆಯು ಜಾತ್ರೆಗೆ ಬರುವ ಜನರ ಅನುಕೂಲಕ್ಕಾಗಿ ಇದೇ ಪ್ರಥಮ ಬಾರಿಗೆ ಮೊಬೈಲ್‌ ಶೌಚಾಲಯ ವ್ಯವಸ್ಥೆ ಗೊಳಿಸಿದೆ. ಇದರ ಜೊತೆಗೆ ತಾತ್ಕಾಲಿಕ ಮಹಿಳಾ ಶೌಚಾಲಯಗಳನ್ನು ಜಾತ್ರಾ ಮಂಟಪದ ಹೊರ ಆವರಣದಲ್ಲಿ ಅಳ ವಡಿಸಿದೆ. ಇದು ಜಾತ್ರೆಗೆ ಬರುವ ಭಕ್ತರಿಂದ ಶ್ಲಾಘನೆಗೆ ಒಳಗಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.